ಬಾಗಪ್ಪ ಹರಿಜನ ಹೊಸ ಶಿಷ್ಯನಿಂದ ಹಳೆ ಶಿಷ್ಯನ ಹತ್ಯೆ: ಜೈಲಲ್ಲಿ ಇದ್ದುಕೊಂಡೇ ಸಂಚು, ತನಿಖೆಯಲ್ಲಿ ಅಸಲಿ ಸತ್ಯ ಬಯಲಿಗೆ

ಜುಲೈ 14ರಂದು ವಿಜಯಪುರದಲ್ಲಿ ನಡೆದ ಸುಶೀಲ್ ಕಾಳೆ ಹತ್ಯೆಯ ಹಿಂದೆ ಬಾಗಪ್ಪ ಹರಿಜನನ ಹಳೆಯ ಶಿಷ್ಯ ತುಳಸಿರಾಮ ಹರಿಜನ್ ಕೈವಾಡವಿದೆ ಎಂಬುವುದು ತನಿಖೆಯಿಂದ ಬಹಿರಂಗಗೊಂಡಿದೆ. ಕಲಬುರಗಿ ಜೈಲಿನಿಂದಲೇ ಈ ಕೊಲೆಗೆ ಸ್ಕೇಚ್​ ರೂಪಿಸಲಾಗಿತ್ತು. ಸದ್ಯ ಕೇಸ್​ಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ.

ಬಾಗಪ್ಪ ಹರಿಜನ ಹೊಸ ಶಿಷ್ಯನಿಂದ ಹಳೆ ಶಿಷ್ಯನ ಹತ್ಯೆ: ಜೈಲಲ್ಲಿ ಇದ್ದುಕೊಂಡೇ ಸಂಚು, ತನಿಖೆಯಲ್ಲಿ ಅಸಲಿ ಸತ್ಯ ಬಯಲಿಗೆ
ಕೊಲೆಯಾದ ಸುಶೀಲ್‌ ಕಾಳೆ
Updated By: ಗಂಗಾಧರ​ ಬ. ಸಾಬೋಜಿ

Updated on: Aug 26, 2025 | 9:17 PM

ವಿಜಯಪುರ, ಆಗಸ್ಟ್​ 26: ಭೀಮಾತೀರದ ನಟೋರಿಯಸ್‌ ಹಂತಕ ಬಾಗಪ್ಪ ಹರಿಜನ್​ನ (Bagappa harijan) ಒಂದು ಕಾಲದ ಸಹಚರ ಸುಶೀಲ್‌ ಕಾಳೆಯ ಬರ್ಬರ ಹತ್ಯೆ (kill) ಕಳೆದ ಜುಲೈ 14 ರಂದು ವಿಜಯಪುರ ನಗರದಲ್ಲಿ ಹಾಡ ಹಗಲೇ ನಡೆದಿತ್ತು. ಹತ್ಯೆ ಮಾಡಿದ್ದ ಆರು ಜನರನ್ನು ಬಂಧಿಸಿದ್ದ ಪೊಲೀಸರಿಗೆ ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಸತ್ಯಗಳು ಬಯಲಾಗಿವೆ. ಭಾಗಪ್ಪನ ಹಳೆ ಶಿಷ್ಯನನ್ನು, ಹೊಸ ಶಿಷ್ಯ ತುಳಸಿ ಹರಿಜನ್ ಕೊಲೆ ಮಾಡಿಸಿದ್ದಾನೆ ಅನ್ನೋ ವಿಚಾರ ಬಯಲಿಗೆ ಬಂದಿದೆ. ಜೈಲಲ್ಲೇ ಕುಳಿತು ಸ್ಕೇಚ್ ಹಾಕಿ ಸುಶೀಲ್ ಕಥೆ ಮುಗಿಸಲಾಗಿದೆ. ಸದ್ಯ ತುಳಸಿರಾಮ್​ನನ್ನು ವಶಕ್ಕೆ ಪಡೆದು ಖಾಕಿಪಡೆ ವಿಚಾರಣೆ ನಡೆಸಿದೆ.

ಕಳೆದ ಜುಲೈ 14 ರಂದು ಭೀಮಾತೀರದ ಹಂತಕ ಬಾಗಪ್ಪನ ಹಳೆಯ ಸಹಚರ ಸುಶೀಲ್ ಕಾಳೆಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಒಟ್ಟು 6 ಜನರ ತಂಡದಿಂದ ಸುಶೀಲ್ ಭೀಕರವಾಗಿ ಹತ್ಯೆಯಾಗಿದ್ದ. ಮೊದಲೇ ಪ್ಲ್ಯಾನ್​ ಮಾಡಿಕೊಂಡಿದ್ದ ಆಕಾಶ್‌ ಆ್ಯಂಡ್​ ಗ್ಯಾಂಗ್‌ ಕಂಟ್ರಿಮೆಡ್‌ ಪಿಸ್ತೂಲ್, ಮಚ್ಚುಗಳ ಮೂಲಕ ಬಿಎಲ್​​ಡಿ ರಸ್ತೆಯಲ್ಲಿ ಸುಶೀಲ್‌ ಕಾಳೆಗಾಗಿ ಕಾದು ನಿಂತಿದ್ದರು. ಸುಶೀಲ್‌ ಕಾಳೆ ಎಸ್​ಎಸ್‌ ಕಾಂಪ್ಲಾಕ್ಸ್‌ ನಲ್ಲಿರುವ ಅಮರವರ್ಷಿಣಿ ಬ್ಯಾಂಕಿನಲ್ಲಿ ಹಣ ಡೆಪಾಜಿಟ್‌ ಮಾಡಿ ಕೆಳಗೆ ಬರ್ತಿದ್ದಂತೆ ಗ್ಯಾಂಗ್‌ ಅಟ್ಟಾಡಿಸಿತ್ತು.

ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬದುಕುವ ಆಸೆಪಟ್ಟಿದ್ದ ಬಾಗಪ್ಪ ಹರಿಜನ ಬರ್ಬರ ಹತ್ಯೆ!

ಇದನ್ನೂ ಓದಿ
ಭೀಮಾತೀರದ ಹಂತಕ ಬಾಗಪ್ಪ ಹರಿಜನ ಕೊಲೆ ರಹಸ್ಯ ಬಯಲು
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಸೇಡಿಗೆ ಸೇಡು: ಬಾಗಪ್ಪ ಹರಿಜನ ಹತ್ಯೆ ಹಿಂದೆ ಪಿಂಟು​? ಯಾರವನು?
ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬಾಗಪ್ಪ ಹರಿಜನ ಬರ್ಬರ ಹತ್ಯೆ!

ಕಾಂಪ್ಲೆಕ್ಸ್​ನ ಕೆಳಗೆ ಸುಶೀಲ್‌ ಬೆನ್ನಿಗೆ ಆಕಾಶ ಒಂದು ಗುಂಡನ್ನ ಹಾರಿಸಿದ್ದ. ರಕ್ತ ಸುರಿಯುವಾಗಲೇ ಸುಶೀಲ್‌ ತಪ್ಪಿಸಿಕೊಳ್ಳಲು ಮತ್ತೆ ಬ್ಯಾಂಕ್‌ ಕಡೆಗೆ ಓಡಿದ್ದನು. ಆದರೆ ಅಟ್ಟಾಡಿಸಿಕೊಂಡು ಬಂದ 6 ಜನರ ಗ್ಯಾಂಗ್‌ ಸುಶೀಲ್‌ ಮೇಲೆ ಒಬ್ಬರಾದ ಮೇಲೆ ಒಬ್ಬರಂತೆ ಮಚ್ಚಿನೇಟು ಹಾಕಿದ್ದರು. ಬ್ಯಾಂಕ್‌ ಒಳಗೆ ಸುಶೀಲ್‌ ನುಗ್ಗುತ್ತಿದ್ದಂತೆ ಆಕಾಶ ತನ್ನ ಕೈಯಲ್ಲಿದ್ದ ಮಚ್ಚಿನಿಂದ ಭೀಕರವಾಗಿ ಹತ್ಯೆ ಮಾಡಿದ್ದ. ಇದೆಲ್ಲಾ ಸಿಸಿ ಕ್ಯಾಮೆರಾದಲ್ಲಿಯೂ ಸೆರೆಯಾಗಿತ್ತು.

ಆರು ಜನರ ಬಂಧನ

ರೌಡಿ ಶೀಟರ್ ಸುಶೀಲ್ ಕಾಳೆ ಹತ್ಯೆಯ ತನಿಖೆ ನಡೆಸಿದ್ದ ಪೊಲೀಸರ ತಂಡ ಹಂತಕರ ಹೆಡೆಮುರಿ ಕಟ್ಟಲು ಮುಂದಾಗಿತ್ತು. ಜುಲೈ 15 ರಂದು ಹಂತಕರ ಸುಳಿವು ಸಿಕ್ಕು ಅವರ ಬೆನ್ನು ಬಿದ್ದಾಗ ಪೊಲೀಸರ ಮೇಲೆಯೇ ದಾಳಿ ಮಾಡಲು ಬಂದಿದ್ದ ಆರೋಪಿಗಳತ್ತ ಗಾಂಧಿಚೌಕ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಫೈರಿಂಗ್​ ಮಾಡಿದ್ದರು. ಪರಿಣಾಮ ಪ್ರಮುಖ ಆರೋಪಿತರಾದ ಆಕಾಶ ಹಾಗೂ ಸುದೀಪ್‌ ಕಾಲಿಗೆ ಗುಂಡು ತಾಗಿದ್ದವು. ಬಳಿಕ ಗೌತಮ ಆಲಮೇಲಕರ್‌, ನಾರಾಯಣ ಜಾಧವ, ಬಸವರಾಜ್ ಮುನ್ನಾಳ, ಪ್ರಜ್ವಲ್‌ ಹಳೆಮನಿ ಸೇರಿದಂತೆ 6 ಜನರನ್ನು ಬಂಧಿಸಿದ್ದರು.

ಬಂಧಿತರ ವಿಚಾರಣೆ ವೇಳೆ ಹತ್ಯೆ ಹಿಂದಿನ ಸತ್ಯ ಹೊರ ಬಂದಿದೆ. ಭಾಗಪ್ಪನ ಕಟ್ಟಾ ಶಿಷ್ಯ ತುಳಸಿರಾಮ ಹರಿಜನ್ ಕೊಲೆ ಮಾಡಿಸಿದ್ದಾನೆ ಅನ್ನೋದು ಬಯಲಾಗಿದೆ. ಭಾಗಪ್ಪನನ್ನು ಹತ್ಯೆ ಮಾಡಿದ ಪಿಂಟ್ಯಾ ಆಂಡ್ಯ್ ಗ್ಯಾಂಗ್​ಗೆ ಹತ್ಯೆಯಾದ ಸುಶೀಲ್‌ ಕಾಳೆ ಬೇಲ್‌ ಕೊಡಿಸಲು ಓಡಾಡುತ್ತಿದ್ದ. ಇದರಿಂದ ಸಿಟ್ಟಿಗೆದಿದ್ದ ತುಳಸಿರಾಮ ಹರಿಜನ್​ ತನ್ನ ಸಹಚರರ ಮೂಲಕ ಕಲಬುರಗಿ ಜೈಲಿನಲ್ಲೇ ಕುಳಿತು ಸ್ಕೇಚ್​ ಹಾಕಿ ಹತ್ಯೆ ಮಾಡಿಸಿದ್ದಾನೆ‌. ಸದ್ಯ ಪಿಂಟ್ಯಾ ಸಹೋದರ ರವಿ ಮೇಲಿನಮನಿ ಹತ್ಯೆ ಕೇಸ್​ನಲ್ಲಿ ತುಳಸಿರಾಮ ಹರಿಜನ್​ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದು ಅಲ್ಲಿಂದಲೇ ಸುಶೀಲ್ ಕಾಳೆ ಹತ್ಯೆ ಮಾಡಿಸಿದ್ದಾನೆ. ಇದೀಗ ವಿಜಯಪುರ ಗಾಂಧಿಚೌಕ್ ಪೊಲೀಸರು ತುಳಸಿರಾಮ ಹರಿಜನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರ ಮಧ್ಯೆ ರೌಡಿ ಶೀಟರ್​ಗಳ ಬಗ್ಗೆ ಪ್ರಚಾರ ಮಾಡುವುದು, ರೀಲ್ಸ್ ಮಾಡುವುದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುವುದು ವಿಜೃಂಭಿಸುವುದನ್ನು ಮಾಡಿದರೆ ಅವರ ಮೇಲೂ ಕಾನೂನು ಕ್ರಮ ಗ್ಯಾರಂಟಿ ಎಂದು ಎಸ್​​​ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದ್ದಾರೆ.

ಒಂದು ಕಾಲದ ಬಾಗಪ್ಪನ ಹಳೆಯ ಶಿಷ್ಯನಾಗಿದ್ದ ಕೊಲೆಯಾಗಿರುವ ಸುಶೀಲ್ ಕಾಳೆ, ಬಾಗಪ್ಪನ ಕೊಲೆ ಮಾಡಿದವರೊಂದಿಗೆ ಇತ್ತೀಚೆಗೆ ದೋಸ್ತಿ ಮಾಡಿದ್ದ. ಈ ವೇಳೆ ಕಲಬುರಗಿ ಕಾರಾಗೃಹದಲ್ಲಿದ್ದ ರೌಡಿ ಶೀಟರ್ ತುಳಸಿರಾಮ ಹರಿಜನ್​ನನ್ನು ಆಕಾಶ ಹಾಗೂ ಸುದೀಪ್‌ ಭೇಟಿಯಾಗಲು ತೆರಳಿದ್ದಾಗ ಸುಶೀಲ್ ಕಾಳೆಯಿಂದ ನನಗೆ ತೊಂದರೆಯಿದೆ. ಆತನಿಗೆ ಏನಾದರೂ ಮಾಡಬೇಕೆಂದು ಹೇಳಿದ್ದರಿಂದ ಸುಶೀಲ್​ನನ್ನು ಆಕಾಶ ಹಾಗೂ ಸುದೀಪ್‌ ಮತ್ತು ಗ್ಯಾಂಗ್ ಕೊಲೆ ಮಾಡಿದೆ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: ಬಾಗಪ್ಪ ಹರಿಜನ್ ಪ್ರೀತಿಸಿ ಮದುವೆಯಾಗಿದ್ದ, ಅದರೆ ಅವನ ಸಂಗಾತಿ ಬಹಳ ದಿನ ಬದುಕುಳಿಯಲಿಲ್ಲ: ಮಹಾಂತೇಶ್, ಪೊಲೀಸ್ ಆಧಿಕಾರಿ

ಈ ಘಟನೆಯಿಂದ ಜಿಲ್ಲೆಯ ಜನರು ಮಾತ್ರ ಆತಂಕಗೊಂಡಿದ್ದಾರೆ. ಜೈಲಲ್ಲಿ ಇದ್ದುಕೊಂಡೋ ಹೊರಗಡೆ ಮರ್ಡರ್ ಮಾಡಿಸುವುದು ಸುಲಭದ ಮಾತಲ್ಲ. ಇವರೆಲ್ಲರ ನೆಟ್ ವರ್ಕ್ ಎಷ್ಟೆಲ್ಲಾ ಇದೆ. ಜೈಲಲ್ಲಿದ್ದರೂ ಇದೆಲ್ಲಾ ಮಾಡುತ್ತಿರುವುದು ಸರಣಿ ರಕ್ತಪಾತಕ್ಕೆ ಕೊಂಡಿಯಂತಾಗಿದೆ ಎಂದು ಜಿಲ್ಲೆಯ ನಾಗರಿಕರು ಪ್ರಶ್ನೆ ಮಾಡುವಂತಾಗಿದೆ. ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸದ್ಯ ಸುಶೀಲ್ ಕಾಳೆ ಕೊಲೆಯ ಪ್ರಕರಣದಲ್ಲಿ ಕಲಬುರಗಿ ಕಾರಾಗೃಹದಿಂದ ರೌಡಿ ಶೀಟರ್ ತುಳಸಿರಾಮ ಹರಿಜನ್​ ನನ್ನು ಕರೆತಂದು ವಿಚಾರಣೆ ನಡೆಸಿ ಮತ್ತೆ ಕಾರಾಗೃಹಕ್ಕೆ ಕಳಿಸಲಾಗಿದೆ. ದಿ. ಭಾಗಪ್ಪನ ಹಾಲಿ ಮಾಜಿ ಶಿಷ್ಯಂದಿರ ಕಾಳಗದಿಂದ ಭೀಮಾತೀರದಲ್ಲಿ ಮತ್ತೆ ಶಿಷ್ಯಂದಿರ ಕಲಹ ಜೋರಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.