ಕೆನಡಾ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ ವಿಜಯಪುರದ ರೈತನ ಮಗ
ವಿಜಯಪುರದ ರೈತನ ಪುತ್ರ ಸಚಿನ್ ಸಾಳುಂಕೆ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ನಾಡಿಗೆ ಹೆಮ್ಮೆ ತಂದಿದ್ದಾರೆ. ಸ್ಕ್ವಾಟ್, ಡೆಡ್‌ಲಿಫ್ಟ್, ಬೆಂಚ್ ಪ್ರೆಸ್ ವಿಭಾಗಗಳಲ್ಲಿ 760 ಕೆಜಿ ಭಾರ ಎತ್ತಿ ಸಾಧನೆ ಮಾಡಿದ್ದಾರೆ. ಆದರೆ, ತರಬೇತಿ ಮತ್ತು ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 30,000 ರೂ. ಮತ್ತು ವಾರ್ಷಿಕ 5 ಲಕ್ಷ ರೂ. ಆರ್ಥಿಕ ನೆರವಿನ ಕೊರತೆ ಎದುರಿಸುತ್ತಿದ್ದಾರೆ. ಮುಂದಿನ ಚಿನ್ನದ ಪದಕದ ಗುರಿಗೆ ಸಹಾಯ ಯಾಚಿಸಿದ್ದಾರೆ.

ವಿಜಯಪುರ, ನ.16: ಕೃಷಿ ಪ್ರಧಾನ ಕುಟುಂಬದ ಯುವಕನೊಬ್ಬ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಸಾಧನೆ ಮಾಡಿ ಇಡೀ ನಾಡೇ ಹೆಮ್ಮೆಪಡುವಂತೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಣ್ಣ ಗ್ರಾಮ ತಿಗಣಿಬಿದರಿಯ ರೈತನ ಪುತ್ರ ಸಚಿನ್ ಸಾಳುಂಕೆ (26), ಕೆನಡಾದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ತಮ್ಮ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಪದಕಕ್ಕೆ ಮುತ್ತಿಕ್ಕಿರುವ ಸಚಿನ್ ಸಾಧನೆಗೆ ಇಡೀ ಗ್ರಾಮವೇ ಸಂಭ್ರಮಿಸಿರುವ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೆನಡಾದಲ್ಲಿ ನಡೆದ ಸ್ಕ್ವಾಟ್ , ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್ ವಿಭಾಗಗಳಲ್ಲಿ ಸಚಿನ್ ಒಟ್ಟು 760 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಚಿನ್ನದ ಪದಕ ಗೆದ್ದ ಇಂಗ್ಲೆಂಡ್ ಸ್ಪರ್ಧಿ ಕೇವಲ 10 ಕೆಜಿ ಹೆಚ್ಚುವರಿ ಭಾರ ಎತ್ತಿದ್ದರು. “ಭಾರತದಲ್ಲಿ ನಾನು ಸ್ಕ್ವಾಟ್ ವಿಭಾಗದಲ್ಲಿ 350 ಕೆಜಿ ವರೆಗೆ ಭಾರ ಎತ್ತಿದ್ದೆ. ಆದರೆ ಕೆನಡಾದ ತೀವ್ರ ಚಳಿ, ಆಹಾರಕ್ಕೆ ಹೊಂದಿಕೊಳ್ಳಲು ಆಗದ ಕಾರಣ ಮತ್ತು ಅನಾರೋಗ್ಯದಿಂದಾಗಿ 310 ಕೆಜಿ ಮಾತ್ರ ಎತ್ತಲು ಸಾಧ್ಯವಾಯಿತು. ಇಲ್ಲದಿದ್ದರೆ ಖಂಡಿತವಾಗಿಯೂ ಚಿನ್ನದ ಪದಕ ಗೆಲ್ಲುತ್ತಿದ್ದೆ” ಎಂದು ಸಚಿನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಚಿನ್ ಅವರ ತಂದೆ ಮತ್ತು ಅಣ್ಣ ಕೃಷಿಕರಾಗಿದ್ದು, ಸೀಮಿತ ಆದಾಯದಲ್ಲಿ ಕ್ರೀಡಾ ತರಬೇತಿಯ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಕಷ್ಟಕರವಾಗಿದೆ. ಪವರ್‌ಲಿಫ್ಟಿಂಗ್ ತರಬೇತಿ ಮತ್ತು ಪೌಷ್ಟಿಕ ಆಹಾರಕ್ಕಾಗಿ ಸಚಿನ್ ಪ್ರತಿ ತಿಂಗಳು ಸುಮಾರು 30,000 ರೂ. ವೆಚ್ಚ ಮಾಡುತ್ತಿದ್ದು, ಪ್ರಮುಖ ಚಾಂಪಿಯನ್‌ಶಿಪ್‌ಗಳಿಗೆ ಸಿದ್ಧತೆ ನಡೆಸಲು ವಾರ್ಷಿಕ ಅಂದಾಜು 5 ಲಕ್ಷ ರೂ. ಅಗತ್ಯವಿದೆ. “ಇಲ್ಲಿಯವರೆಗೆ ದಾನಿಗಳು ಮತ್ತು ಕ್ರೀಡಾ ಪ್ರೇಮಿಗಳ ಸಹಾಯದಿಂದ ಇಷ್ಟು ದೂರ ಬಂದಿದ್ದೇನೆ. ಮುಂದಿನ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಹೊಸ ದಾಖಲೆ ಬರೆಯುವ ಗುರಿ ಇದೆ. ನಾನು ನನ್ನ ಶ್ರಮ ಮತ್ತು ಸಮಯವನ್ನು ಸಂಪೂರ್ಣವಾಗಿ ನೀಡಬಲ್ಲೆ, ಆದರೆ ಆರ್ಥಿಕ ಬೆಂಬಲವಿಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಗುರಿ ತಲುಪುವುದು ಕಷ್ಟ” ಎಂದು ಸಚಿನ್ ನೆರವಿನ ಹಸ್ತ ಚಾಚಿದ್ದಾರೆ.
ಬಬಲೇಶ್ವರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸಚಿನ್, ತುಮಕೂರಿನ ಸಿದ್ಧಗಂಗಾ ಮಠದ ಶಾಲೆಯಲ್ಲಿ ಓದುವಾಗ ದೈಹಿಕ ಶಿಕ್ಷಣ ಶಿಕ್ಷಕರ ಪ್ರೋತ್ಸಾಹದಿಂದ ‘ಹ್ಯಾಮರ್ ಥ್ರೋ’ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಬೀದರ್ ರಾಜ್ಯಮಟ್ಟದ ಕೂಟದಲ್ಲಿ ಮೊದಲ ಚಿನ್ನ ಗೆದ್ದ ಬಳಿಕ, ಕ್ರೀಡಾ ಕೋಟಾದಡಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಉಚಿತ ಸೀಟು ಪಡೆದು ತರಬೇತಿ ಪಡೆದರು. ಬಳಿಕ ಉಜಿರೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಾ ರಾಷ್ಟ್ರಮಟ್ಟದ ಕೂಟಗಳಲ್ಲಿ ಪದಕ ಗೆದ್ದರು.
ಇದನ್ನೂ ಓದಿ: ಸಾವಿನಲ್ಲೂ ಒಂದಾದ ತಂದೆ-ಮಗ: ಹೃದಯಾಘಾತದಿಂದ ತಂದೆ ನಿಧನ; ಅಪ್ಪನ ಅಗಲಿಕೆಯ ನೋವು ತಡೆಯಲಾಗದೆ ಲೋ ಬಿಪಿಯಿಂದ ಮಗನೂ ಸಾವು
ಸೂಕ್ತ ತರಬೇತಿಯ ಕೊರತೆಯಿಂದ ಹ್ಯಾಮರ್ ಥ್ರೋ ಬಿಟ್ಟು ಪವರ್‌ಲಿಫ್ಟಿಂಗ್ ಆಯ್ದುಕೊಂಡ ಸಚಿನ್, 2021ರಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಆರಂಭಿಸಿದರು. 2022ರ ದೆಹಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ, ಬಳಿಕ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ಕೋಚ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದು 2024ರ ದೆಹಲಿ ರಾಷ್ಟ್ರೀಯ ಕೂಟದಲ್ಲಿ ಬೆಳ್ಳಿ ಹಾಗೂ 2025ರ ಹಿಮಾಚಲ ಪ್ರದೇಶ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಕೆನಡಾ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
