ವಿಜಯಪುರ: ನಗರದ ಲಾಡ್ಜೊಂದರಲ್ಲಿಇಬ್ಬರು ವ್ಯಕ್ತಿಗಳ ಶವ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ?

|

Updated on: Mar 25, 2023 | 3:25 PM

ವಿಜಯಪುರ ನಗರದ ಜನರು ಇಂದು(ಮಾ.24) ಬೆಚ್ಚಿ ಬಿದ್ದಿದ್ದರು. ಕಾರಣ ಇತ್ತೀಚಿನ ದಿನಗಳಲ್ಲಿ ಕೊಲೆ ಸುಲಗೆಯಂಥ ಕೃತ್ಯಗಳು ಕಡಿಮೆಯಾಗಿದ್ದವು ಎಂದು ಸಮಾಧಾನಪಟ್ಟುಕೊಳ್ಳುವ ವೇಳೆಯೇ ಹೊಟೇಲ್ ರೂಮ್ ವೊಂದರಲ್ಲಿ ಇಬ್ಬರು ಯುವಕರ ಶವಗಳು ಪತ್ತೆಯಾಗಿದೆ. ನಗರದ ರಾಜಧಾನಿ ಹೊಟೇಲ್​ನಲ್ಲಿದ್ದ ಇಬ್ಬರು ಇದೀಗ ಶವವಾಗಿ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಇನ್ನು ಪೊಲೀಸರ ತನಿಖೆಯಿಂದ ಕೊಲೆಯೋ, ಆತ್ಮಹತ್ಯೆಯೋ ಎಂಬುದು ತಿಳಿದು ಬರಬೇಕಿದೆ.

ವಿಜಯಪುರ: ನಗರದ ಲಾಡ್ಜೊಂದರಲ್ಲಿಇಬ್ಬರು ವ್ಯಕ್ತಿಗಳ ಶವ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ?
ಸಾಂದರ್ಭಿಕ ಚಿತ್ರ
Follow us on

ವಿಜಯಪುರ: ಕೆಲ ತಿಂಗಳುಗಳಿಂದ ಶಾಂತವಾಗಿದ್ದ ವಿಜಯಪುರದ ಜನರು ಇಂದು ಬೆಚ್ಚಿ ಬಿದ್ದಿದ್ದರು. ಕಾರಣ ನಗರದ ಹೃದಯ ಭಾಗದಲ್ಲಿರುವ ರಾಜಧಾನಿ ಹೊಟೇಲಿನ 114 ನಂಬರಿನ ರೂಂನಲ್ಲಿ ಇಬ್ಬರು ಯುವಕರ ಶವ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಹೊಟೇಲ್ ರಾಜಧಾನಿಯಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಶ್ರೀಕಂಠಪುರ ತಾಂಡಾದ ವಿಳಾಸದ ಆಧಾರ್ ಕಾರ್ಡ್ ನೀಡಿ ಇಂದ್ರಕುಮಾರ್​ ಎಂಬಾತ ಜೊತೆಗೆ ಇನ್ನೊಬ್ಬ ರೂಂ ಪಡೆದಿದ್ದಾರೆ.  ರೂಮ್ ಒಳಗಡೆ  ಹೋದ ಮೇಲೆ ಇಬ್ಬರು ಹೊರಗಡೆಯೇ ಬಂದಿಲ್ಲ. ಹಲವಾರು ಬಾರಿ ರೂಮ್ ಬಾಯ್ಸ್ ರೂಮಿನ ಕದ ತಟ್ಟಿದ್ದರೂ ಯಾರೂ ಬಾಗಿಲು ತರೆದಿರಲಿಲ್ಲ. ಇಂದು(ಮಾ.24) ರೂಮಿನಿಂದ ಕೆಟ್ಟ ವಾಸನೆ ಬಂದಿದ್ದಾಗ ಮಾಸ್ಟರ್ ಕೀ ಬಳಸಿ ರೂಮ್ ಬಾಗಿಲು ತೆರೆದಾಗ ಭಯಾನಕ ಘಟನೆ ಬೆಳಕಿದೆ ಬಂದಿದೆ.

ರೂಮ್​ನ ಬೆಡ್ ಮೇಲೆ ಒಬ್ಬರ ಮೇಲೋಬ್ಬರು ಮಲಗಿರುವ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದಿದ್ದಾರೆ. ಸುದ್ದಿ ತಿಳಿದ ಕೂಡಲೇ ಗಾಂಧಿಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದೇಶ ಮುರುಗುಂಡಿ, ಡಿವೈಎಸ್ಪಿ ಸಿದ್ದೇಶ್ವರ ಹಾಗೂ ಎಸ್ಪಿ ಆನಂದಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಬ್ಬನನ್ನ ಕೊಲೆ ಮಾಡಿ ಬಳಿಕ ಮತ್ತೋರ್ವ ವಿಷ ಸೇವಿಸಿ ಆತನ ಮೇಲೆ ಬೋರಲು ಬಿದ್ದು ಜೀವ ಬಿಟ್ಟಿದ್ದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ:ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಕೊರೊನಾ; ಪ್ರತಿ ದಿನ ನೂರಕ್ಕೂ ಹೆಚ್ಚು ಕೇಸ್ ಪತ್ತೆ, ವಾರಕ್ಕೆ ನಾಲ್ಕು ಸಾವು

ನಗರದ ರಾಜಧಾನಿ ಹೊಟೇಲಿನಲ್ಲಿ ಇಂದ್ರಕುಮಾರ್​ ಎಂಬಾತ ತನ್ನ ದಾಖಲಾತಿ ನೀಡಿ ರೂಮ್ ಪಡೆದುಕೊಂಡಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಮತ್ತೋರ್ವನ ಹೆಸರು ವಿಳಾಸ ಪತ್ತೆ ಮಾಡಲು ಖಾಕಿ ಪಡೆ ಮುಂದಾಗಿದೆ. ಇಷ್ಟರ ಮದ್ಯೆ ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳ ತಂಡವೂ ಆಗಮಿಸಿ ಪರಿಶೀಲನೆ ನಡೆಸಿದೆ. ಇಬ್ಬರು ಯುವಕರ ಶವ ಪತ್ತೆಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಆನಂದಕುಮಾರ್​ ತನಿಖೆ ತೀವ್ರಗೊಳಿಸಿದ್ದಾರೆ. ಹೊಟೇಲ್​ ರೂಮ್ ನಲ್ಲಿ ಬೆಡ್ ಮೇಲೆ ಇರುವ ಇಬ್ಬರ ಶವಗಳನ್ನು ಪರಿಶೀಲನೆ ಮಾಡಿದಾಗ ಕಟರ್ ನಿಂದ ಓರ್ವ ಮತ್ತೋರ್ವನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ವಿಷ ಸೇವಿಸಿ ಕೊಲೆಗೀಡಾದ ವ್ಯಕ್ತಿಯ ಶವದ ಮೇಲೆ ಮಲಗಿ ಜೀವ ಬಿಟ್ಟಿದ್ದು ಕಂಡು ಬಂದಿದೆ. ಆದರೆ ಇಡೀ ಘಟನೆಯ ಹೆಚ್ಚಿನ ಸತ್ಯಾಂಶ ತಿಳಿದು ಬರಲು ಸೈಂಟಿಫಿಕ್ ಎಕ್ಸಫರ್ಟ್ ಗಳ ಮೂಲಕ ಪರೀಕ್ಷೆ ನಡೆಸಲು ಎಸ್ಪಿ ಆನಂದಕುಮಾರ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ:9 ವರ್ಷಗಳ ಬಳಿಕ ಗಿಳಿ ನೀಡಿದ ಸಾಕ್ಷಿಯಿಂದ 2014ರ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ!

ಒಟ್ಟಾರೆ ಹೊಟೇಲ್ ರಾಜಧಾನಿಯ ರೂಮ್ ನಲ್ಲಿ ಇಬ್ಬರು ಶವವಾಗಿ ಪತ್ತೆಯಾದ ಘಟನೆ ಎಲ್ಲರನ್ನೂ ಭಯಕ್ಕೆ ದೂಡಿದೆ. ಇಬ್ಬರಲ್ಲಿ ಒಬ್ಬ ಒಬ್ಬನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೋ? ಅಥವಾ ಇದರ ಹಿಂದೆ ಬೇರೆಯದ್ದೇ ಕೈವಾಡವಿದೆಯೋ ಎಂಬುದು ಮಾತ್ರ ನಿಗೂಢವಾಗಿದೆ. ಈ ಘಟನೆ ಕುರಿತು ಪೊಲೀಸರ ತನಿಖೆಯಲ್ಲಿ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ