ಶಿಕ್ಷಕನ ನೆನಪಿಗಾಗಿ ದೇವಾಲಯ ನಿರ್ಮಾಣ; 96 ವರ್ಷಗಳ ಹಿಂದಿನ ದೇವಸ್ಥಾನಕ್ಕೆ ನಿತ್ಯವೂ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಗ್ರಾಮಸ್ಥರು

| Updated By: preethi shettigar

Updated on: Sep 05, 2021 | 8:25 AM

ರಾಜ್ಯದಲ್ಲಿ ಅಷ್ಟೇಯಲ್ಲಾ ಇಡೀ ದೇಶದಲ್ಲಿಯೇ ವಿಭಿನ್ನವಾದ ದೇವಸ್ಥಾನವೆಂದು ಈ ದೇವಸ್ಥಾನವನ್ನು ಕರೆಯಬಹುದು. ಅದುವೇ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿರುವ ರೇವಣಸಿದ್ದಪ್ಪ ಐರಸಂಗ ಅವರ ದೇವಸ್ಥಾನ.

ಶಿಕ್ಷಕನ ನೆನಪಿಗಾಗಿ ದೇವಾಲಯ ನಿರ್ಮಾಣ; 96 ವರ್ಷಗಳ ಹಿಂದಿನ ದೇವಸ್ಥಾನಕ್ಕೆ ನಿತ್ಯವೂ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಗ್ರಾಮಸ್ಥರು
ಶಿಕ್ಷಕನ ನೆನಪಿಗಾಗಿ ದೇವಾಲಯ
Follow us on

ವಿಜಯಪುರ: ಹಿಂದೂ ಸಂಪ್ರದಾಯದಲ್ಲಿ ನಂಬಿಕೆ ಭಕ್ತಿಗೆ ಪ್ರಧಾನ ಸ್ಥಾನ ನೀಡಲಾಗಿದೆ. ಅಸಂಖ್ಯಾತ ದೇವರುಗಳನ್ನು ಶ್ರದ್ಧಾ ಭಕ್ತಿಯಿಂದ ನಾವೆಲ್ಲಾ ಪೂಜೆ ಮಾಡುತ್ತೇವೆ. ಉತ್ಸವ ಜಾತ್ರೆ ಮಾಡುತ್ತೇವೆ. ಹಿಂದೂ ಧರ್ಮದಲ್ಲಿ ಅನೇಕಾನೇಕ ದೇವರುಗಳಿಗೆ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಅದರಂತೆ ಕ್ರೈಸ್ತ, ಸಿಖ್, ಮುಸ್ಲೀಂ ಸೇರಿದಂತೆ ಇತರೆ ಸಮುದಾಯಗಳಲ್ಲಿಯೂ ಮಂದಿರ, ಮಸೀದಿ ಚರ್ಚ್​ಗಳನ್ನು ನಾವೆಲ್ಲಾ ಕಾಣುತ್ತೇವೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಕೋಮಿನವರು ಪೂಜೆ ಮಾಡುವ ನಮಿಸುವ ದೇವಸ್ಥಾನವಿದೆ. ಅದುವೇ ಶಿಕ್ಷಕರೋರ್ವರ ದೇವಸ್ಥಾನ. ದೇಶದಲ್ಲಿಯೇ ಅಪರೂಪದ ಮಹಾನ್ ಶಿಕ್ಷಕನೋರ್ವರ ದೇವಸ್ಥಾನ ವಿಜಯಪುರ ಜಿಲ್ಲೆಯಲ್ಲಿದೆ.

ಸಾಮಾನ್ಯವಾಗಿ ವಿವಿಧ ದೇವಾನು ದೇವತೆಗಳ ದೇವಸ್ಥಾನಗಳನ್ನು ನಾವೆಲ್ಲಾ ನೋಡಿದ್ದೇವೆ. ಅವುಗಳ ದರ್ಶನ ಮಾಡಿದ್ದೇವೆ. ವಿವಿಧ ಧರ್ಮಗಳ ವಿವಿಧ ದೇವರುಗಳ ಹಾಗೂ ಮಹಾನ್ ಪುರುಷ ಸಾಧಕರ ದೇವಾಲಯಗಳನ್ನು ನಿರ್ಮಾಣ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಇದಕ್ಕೆ ವ್ಯತಿರಿಕ್ತವಾದ ದೇವಸ್ಥಾನವೊಂದು ವಿಜಯಪುರ ಜಿಲ್ಲೆಯಲ್ಲಿದೆ. ರಾಜ್ಯದಲ್ಲಿ ಅಷ್ಟೇಯಲ್ಲಾ ಇಡೀ ದೇಶದಲ್ಲಿಯೇ ವಿಭಿನ್ನವಾದ ದೇವಸ್ಥಾನವೆಂದು ಈ ದೇವಸ್ಥಾನವನ್ನು ಕರೆಯಬಹುದು. ಅದುವೇ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿರುವ ರೇವಣಸಿದ್ದಪ್ಪ ಐರಸಂಗ ಅವರ ದೇವಸ್ಥಾನ.

ರೇವಣಸಿದ್ದಪ್ಪ ಐರಸಂಗ
ರೇವಣಸಿದ್ದಪ್ಪ ಐರಸಂಗ ಅವರು ದೇವತಾ ಪುರಷುರಲ್ಲ. ಸಾಧಕ ವ್ಯಕ್ತಿಯೂ ಅಲ್ಲ. ಆದರೂ ಅವರ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದರ ಹಿಂದೆ ಒಂದು ಇತಿಹಾಸವೇ ಇದೆ. ಅದು ಸ್ವಾತಂತ್ರ್ಯ ಪೂರ್ವ ಸಮಯ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ರೇವಣಸಿದ್ದಪ್ಪ ಜನ್ಮ ತಾಳಿದರು. 1889 ರಲ್ಲಿ ಶಿವಪ್ಪ ಹಾಗೂ ಲಕ್ಷ್ಮೀಬಾಯಿ ದಂಪತಿಗಳ ಮಗುವಾಗಿ ಜನಿಸಿದ ರೇವಣಸಿದ್ದಪ್ಪ ಅಂದಿನ ಕಾಲದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ
ಉತ್ತೀರ್ಣರಾಗಿದ್ದರು.

ರೇವಣಸಿದ್ದಪ್ಪರಿಗೆ ಬ್ರೀಟೀಷ್ ಆಧಿಕಾರಿಗಳು ಶಿಕ್ಷಕ ಹುದ್ದೆಯನ್ನು ನೀಡಿದ್ದರು. ಆರಂಭದಲ್ಲಿ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಹಾಗೂ ಮನಗೂಳಿ ಗ್ರಾಮದಲ್ಲಿ ಒಂದೊಂದು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರೇವಣಸಿದ್ದಪ್ಪನವರು ನಂತರ ಇಂಡಿ ತಾಲೂಕಿನ ಅಥರ್ಗಾ ಗ್ರಾಮಕ್ಕೆ ಆಗಮಿಸಿದರು. ಅಥರ್ಗಾ ಗ್ರಾಮದ ಮಕ್ಕಳಿಗೆ ಅಕ್ಷರ ಜ್ಞಾನವನ್ನು ಉಣ ಬಡಿಸಲು ಆರಂಭಿಸಿದರು.

96 ವರ್ಷಗಳ ಹಿಂದಿನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಗ್ರಾಮಸ್ಥರು

ಮಕ್ಕಳಿಗೆ ಮಾತ್ರ ಶಿಕ್ಷಕರಾಗದೇ ಗ್ರಾಮದ ಎಲ್ಲರ ಪಾಲಿಗೂ ಗುರುವಾದರು
ಈ ರೀತಿಯಾಗಿ ಉಕ್ಕಲಿ ಹಾಗೂ ಮನಗೂಳಿ ಗ್ರಾಮದಿಂದ ಅಥರ್ಗಾ ಗ್ರಾಮಕ್ಕೆ ಬಂದ ಶಿಕ್ಷಕ ರೇವಣಸಿದ್ದಪ್ಪನವರು ಮಕ್ಕಳಿಗೆ ಮಾತ್ರ ಶಿಕ್ಷಕರಾಗದೇ ಗ್ರಾಮದ ಎಲ್ಲರ ಪಾಲಿಗೂ ಗುರುವಾದರು. ಅಂದಿನ ಕಾಲದಲ್ಲಿ ಅಥರ್ಗಾ ಗ್ರಾಮದಲ್ಲಿ ಮೂಢನಂಬಿಕೆ ಪಾಲನೆ ಮಾಡುವುದು, ಕಂದಾಚಾರ ಆಚರಣೆಗಳನ್ನು ಮಾಡುವುದು ಜಾರಿಯಲ್ಲಿತ್ತು.

ಹೋಳಿ ಹಬ್ಬದಲ್ಲಿ ಬಣ್ಣಗಳ ಬದಲಾಗಿ ಸಗಣಿ ರಾಡಿ ಎರಚುವುದು ಸೇರಿದಂತೆ ಇತರೆ ಮೂಢ ಆಚರಣೆಗಳು ನಡೆಯುತ್ತಿದ್ದವು. ಇದನ್ನು ಕಂಡ ರೇವಣಸಿದ್ದಪ್ಪರಿಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬ ಬಯಕೆ ಉಂಟಾಗಿತ್ತು. ಆಗ ಮಕ್ಕಳಿಗೆ ಪಾಠ ಹೇಳಿದ ಬಳಿಕ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದರು. ಆರಂಭದಲ್ಲಿ ಯಾವುದೂ ಸುಲಭದ ಮಾತಾಗಿರದಿದ್ದರೂ ಕ್ರಮೇಣ ರೇವಣಸಿದ್ದಪ್ಪರ ಮಾತಿಗೆ ಗ್ರಾಮದ ಜನರು ಕಿವಿಗೊಡಲು ಆರಂಭಿಸಿದರು. ಶಿಕ್ಷಕ ರೇವಣಸಿದ್ದಪ್ಪರ ಆಶಯದಂತೆ ಅಥರ್ಗಾ ಗ್ರಾಮದಲ್ಲಿ ಜಾರಿಯಲ್ಲಿದ್ದ ಮೂಢನಂಬಿಕೆಗಳು, ಕಂದಾಚಾರಗಳು ಮಾಯವಾದವು. ಆಗಿನಿಂದ ಗ್ರಾಮದ ಜನರು ರೇವಣಸಿದ್ದಪ್ಪರನ್ನು ದೈವಿ ಪುರುಷನೆಂಬ ನೋಟದಲ್ಲಿ ನೋಡಲು ಪ್ರಾರಂಭಿಸಿದರು.

ದೇವಸ್ಥಾನ ನಿರ್ಮಾಣ
ಇಡೀ ಗ್ರಾಮವೇ ಮೂಢನಂಬಿಕೆ ಹಾಗೂ ಕಂದಾಚಾರಗಳಲ್ಲಿ ಮುಳಗಿದ್ದನ್ನು ಮೇಲಕ್ಕೇತ್ತಿ ಗ್ರಾಮದ ಜನರಿಗೆ ಜ್ಞಾನದ ಬೆಳಕು ನೀಡಿದ ರೇವಣಸಿದ್ದಪ್ಪ ಐರಸಂಗ ಅವರು 1925 ರಲ್ಲಿ ಅಂದರೆ ಅವರ 36 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಡುತ್ತಾರೆ. ಹೆಮ್ಮೆಯ ಶಿಕ್ಷಕನ ಸಾವಿನಿಂದ ಇಡೀ ಅಥರ್ಗಾ ಗ್ರಾಮವೇ ಶೋಕದಲ್ಲಿ ಮುಳಗಿ ಹೋಗಿತ್ತು. ಶಿಕ್ಷಕ ರೇವಣಸಿದ್ದಪ್ಪರ ಅಂತ್ಯಸಂಸ್ಕಾರವನ್ನು ತಮ್ಮ ಗ್ರಾಮದಲ್ಲಿಯೇ ಮಾಡಿ ಸಮಾಧಿಯನ್ನು ನಿರ್ಮಾಣ ಮಾಡಿದರು. ನಂತರ ಇಡೀ ಗ್ರಾಮಕ್ಕೆ ಬೆಳಕು ನೀಡಿದ ಮಹಾನುಭಾವ ರೇವಣಸಿದ್ದಪ್ಪ ಮಾಸ್ತರ ಎಂದು ನೆನೆದು ಅವರಿಗಾಗಿ 1925 ರಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಿದರು.

ರೇವಣಸಿದ್ದಪ್ಪ ಸಮಾಧಿ ಮೇಲೆ ಗದ್ದುಗೆಯನ್ನು ನಿರ್ಮಾಣ ಮಾಡಲಾಗಿದೆ. 96 ವರ್ಷಗಳ ಹಿಂದೆ ನಿರ್ಮಾಣವಾಗಿರುವ ರೇವಣಸಿದ್ದಪ್ಪರ ದೇವಸ್ಥಾನ ಇಂದಿಗೂ ಅಚ್ಚಳಿಯದೇ ಹಾಗೆಯೇ ಇದೆ. ನಿತ್ಯ ಪೂಜೆ ಪುನಸ್ಕಾರಗಳು ಇಲ್ಲಿ ನಡೆಯುತ್ತವೆ. ಗ್ರಾಮದ ಜನರು ರೇವಣಸಿದ್ದಪ್ಪರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಮಾಡಿ ತಮ್ಮ ಮುಂದಿನ ಕೆಲಸಕ್ಕೆ ಅಣಿಯಾಗುತ್ತಾರೆ.
ಗ್ರಾಮದ ಶಾಲಾ ವಿದ್ಯಾರ್ಥಿಗಳು ಸಹ ನಿತ್ಯ ರೇವಣಸಿದ್ದಪ್ಪರ ದರ್ಶನ ಮಾಡಿಯೇ ಶಾಲೆಗೆ ಹೋಗುತ್ತಾರೆ. ಇನ್ನು ಗ್ರಾಮದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿಯೂ ರೇವಣಸಿದ್ದಪ್ಪ ಶಿಕ್ಷಕರ ಕಂಚಿನ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ನಿತ್ಯ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಇಲ್ಲಿಯ ಮೂರ್ತಿಗೆ ನಮಿಸಿ ತರಗತಿಗಳಿಗೆ ಹೋಗುವುದು ವಾಡಿಕೆಯಾಗಿದೆ.

ರೇವಣಸಿದ್ದಪ್ಪನವರ ಜಾತ್ರೆ
ದೇವಸ್ಥಾನದ ಕೆಳ ಭಾಗದಲ್ಲಿರುವ ರೇವಣಸಿದ್ದಪ್ಪರ ಐರಸಂಗ ಅವರ ಸಮಾಧಿಯ ಮೇಲೆ ಅವರದ್ದೇ ಪ್ರತಿರೂಪದ ಕಂಚಿನ ಮೂರ್ತಿಯನ್ನು ಕೂರಿಸಲಾಗಿದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗುತ್ತವೆ. ಶಿವರಾತ್ರಿಯ ಸಂದರ್ಭದಲ್ಲಿ ವೈಭವಯುತವಾಗಿ ರೇವಣಸಿದ್ದಪ್ಪನವರ ಜಾತ್ರೆ ನಡೆಯುತ್ತದೆ. ಇನ್ನು ರೇವಣಸಿದ್ದಪ್ಪರ ದೇವಸ್ಥಾನಕ್ಕೆ ದರ್ಶನ ಮಾಡಿ ಬೇಡಿಕೆಗಳನ್ನು ಬೇಡಿಕೊಂಡರೆ ಬೇಡಿಕೆಗಳು ಈಡೇರುತ್ತವೆ ಎಂಬುದು ಸಾರ್ವಜನಿಕರ ಮಾತಾಗಿದೆ. ಇನ್ನು ರೇವಣಸಿದ್ದಪ್ಪ ದೇವಸ್ಥಾನದ ಮತ್ತೊಂದು ವೈಶಿಷ್ಟವೆಂದರೆ ಅಥರ್ಗಾ ಗ್ರಾಮದಲ್ಲಿ ಜನ್ಮ ತಾಳುವ ಗಂಡು ಮಗುವಿಗೆ ರೇವಣಸಿದ್ದಪ್ಪ ಎಂದೇ ಮೊದಲು ಹೆಸರಿಡುತ್ತಾರೆ. ಜೊತೆಗೆ ಅಥರ್ಗಾ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದ್ದಾರೆ. ಅದಕ್ಕೆಲ್ಲಾ ಕಾರಣ ರೇವಣಸಿದ್ದಪ್ಪರ ಪವಾಡವೇ ಎಂಬ ನಂಬಿಕೆ ಇಲ್ಲಿದೆ.

ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ:
ತಂದೆಯ ನೆನಪಿಗಾಗಿ ದೇವಾಲಯ ನಿರ್ಮಾಣ; ಅಪ್ಪನ ಮೂರ್ತಿಗೆ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಪುತ್ರರು

ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನ ಕಟ್ಟಿಸಿದ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ