ಧಾರವಾಡ: ಎಲ್ಲೋ ಮಳೆಯಾಗಿದ್ದಕ್ಕೆ ಮತ್ತಿನ್ನೆಲ್ಲೋ ಪ್ರವಾಹ. ಕನಸು ಮನಸ್ಸಲ್ಲೂ ಊಹಿಸದ ಜಲಾಘಾತ. ಕಳೆದ ಆಗಸ್ಟ್ನಲ್ಲಿ ವರುಣ ನೀಡಿದ್ದ ಏಟಿಗೆ ಇಂದಿಗೂ ಸಾವಿರಾರು ಮಂದಿ ಕಣ್ಣೀರಿಡ್ತಿದ್ದಾರೆ. ಜತೆಗೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಆದ್ರೆ ಅಧಿಕಾರಿಗಳು ಮಾತ್ರ ಆ ಕ್ಷಣಕ್ಕೆ ತ್ಯಾಪೆ ಹಚ್ಚೂ ಕೆಲಸ ಮಾಡಿ ಸೈಲೆಂಟ್ ಆಗಿದ್ದಾರೆ.
ದೊಡ್ಡ ದೊಡ್ಡ ವೆಹಿಕಲ್ಲೇ ಬರ್ಲಿ. ಸಣ್ಣ ಪುಟ್ಟ ಗಾಡಿಗಳೇ ಆಗ್ಲಿ. ಈ ರೋಡಿಗಿಳಿದ್ಮೇಲೆ ಬ್ಯಾಲೆನ್ಸ್ ಮಾಡ್ಬೇಕು. ಸ್ಪೀಡ್ ಗೀಡ್ ಎಲ್ಲಾ ಬಿಟ್ಟಾಕ್ಬೇಕು. ಡ್ಯಾನ್ಸ್ ಮಾಡ್ಕೊಂಡೇ ರಸ್ತೆ ದಾಟ್ಬೇಕು. ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ಈ ಲಾರಿಗಳ ಸರ್ಕಸ್ ಅಂತೂ ಇನ್ನೂ ಡೇಂಜರ್.
ತುಂಬಿ ಬಂದ ತುಪ್ಪರಿ ಹಳ್ಳದಲ್ಲಿ ಕೊಚ್ಚಿಹೋಯ್ತು ಸೇತುವೆ:
ಪ್ರಳಯಾಂತಕ ಪ್ರವಾಹ ಮಾಡಿದ ಎಡವಟ್ಟು ಅಷ್ಟಿಷ್ಟಲ್ಲ. ನೆರೆ ಬಂದು ಮೂರು ತಿಂಗಳು ಕಳೆದ್ರೂ ಅದ್ರಿಂದ ಆದ ಅನಾಹುತಗಳು ಮಾತ್ರ ಕರಿನೆರಳಂತೆ ಕಾಡ್ತಿವೆ. ಅದ್ರಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿಯ ಈ ಸೇತುವೆಯೇ ಸಾಕ್ಷಿ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ತುಪ್ಪರಿ ಹಳ್ಳ ಉಕ್ಕಿ ಬಂದಿದ್ರಿಂದ ಸೇತುವೆ ಕೊಚ್ಚಿ ಹೋಗಿತ್ತು.
ಇದ್ರಿಂದಾಗಿ ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಕಡಿತವಾಗಿತ್ತು. ಬೆಳಗಾವಿ ಜಿಲ್ಲೆಗೆ ತೆರಳಲು ಬೇರೆ ದಾರಿಯಿದ್ರೂ ಈ ದಾರಿ ಮೂಲಕ ಬಾಗಲಕೋಟೆ ಜಿಲ್ಲೆ ಹಾಗೂ ಅಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಬಹುದು. ಹೀಗಾಗಿ ಪ್ರತಿನಿತ್ಯ ಇಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ರೆ ಕೊಚ್ಚಿಹೋದ ಸೇತುವೆಯನ್ನ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದು ಬಿಟ್ರೆ ಸಂಪೂರ್ಣ ದುರಸ್ತಿ ಮಾಡಿಲ್ಲ. ಇದ್ರಿಂದಾಗಿ ವಾಹನ ಸವಾರರು ಹಾಗೂ ಸ್ಥಳೀಯರು ಪರದಾಡುವಂತಾಗಿದೆ.
ಇನ್ನು ಪ್ರವಾಹದಲ್ಲಿ ಸೇತುವೆಯ ಎರಡೂ ಭಾಗ ಕಿತ್ತು ಹೋಗಿತ್ತು. ಅಂದಿನಿಂದ ಅನೇಕ ದಿನಗಳವರೆಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದೇ ಕಾರಣಕ್ಕೆ ಜಿಲ್ಲಾಡಳಿತ ಸೇತುವೆ ಪಕ್ಕದಲ್ಲಿಯೇ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿತ್ತು. ಅದ್ರೆ ಮಣ್ಣಿನಿಂದ ಮಾಡಿದ್ದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಮಣ್ಣಿನ ರಸ್ತೆ ಆಗಿರೋದ್ರಿಂದ ಗುಂಡಿಗಳು ಬಿದ್ದಿದ್ದು ವಾಹನಗಳು ಓಡಾಡೋದೇ ಕಷ್ಟವಾಗಿದೆ. ಅಲ್ದೇ ಮಣ್ಣಿನ ರೋಡ್ ಬೇರೆ ಆಗಿರೋದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಧೂಳು ಕೂಡ ಏಳುತ್ತಿದೆ.
Published On - 6:58 am, Mon, 23 December 19