ಬಾಗಲಕೋಟೆ: ಶಿವರಾತ್ರಿ ಅಮಾವಾಸ್ಯೆ ಆಯಿತೆಂದರೆ ಸಾಕು ಗಲ್ಲಿ ಗಲ್ಲಿಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಇರುತ್ತದೆ. ಹಲಗೆ ಮೇಳ, ಸೋಗಿನ ಬಂಡಿ, ಬಣ್ಣದೋಕುಳಿ ನೋಡುವುದೆ ಚೆಂದ. ಆದರೆ ಇದಕ್ಕೆ ಅಪವಾದ ಎಂಬಂತೆ ಏಳು ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮ ಕಿಂಚಿತ್ತು ಇರಲ್ಲ. ಅಲ್ಲಿ ಯಾರೂ ಸಹ ಹಲಗೆ ಬಾರಿಸಲ್ಲ, ಬಣ್ಣದಾಟವೂ ಆಡಲ್ಲ.
ಹೋಳಿ ಹಬ್ಬ ಬಂತೆಂದರೆ ಸಾಕು ಬಾಗಲಕೋಟೆ ಜಿಲ್ಲೆಯಲ್ಲಿ ಅದರ ಸಂಭ್ರಮವೇ ಬೇರೆ ಇರುತ್ತದೆ. ಇಡೀ ದೇಶದಲ್ಲಿ ಕೋಲ್ಕತ್ತ ಬಿಟ್ಟರೆ ಅತ್ಯಂತ ವಿಜೃಂಭಣೆಯಿಂದ ಹೋಳಿ ಆಚರಿಸುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಹಲಗೆ ಮೇಳ, ಸೋಗಿನ ಬಂಡಿ, ಬಣ್ಣದಾಟ, ಕಾಮದಹನ ಹೀಗೆ ಎಲ್ಲೆಲ್ಲೂ ಸಂಭ್ರಮ. ಆದರೆ ಇಂತಹ ಸಂಭ್ರಮಕ್ಕೆ ಕೊವಿಡ್ ಹಿನ್ನೆಲೆ ಬಾಗಲಕೋಟೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕೊವಿಡ್ ಹಿನ್ನೆಲೆ ಸಾಮೂಹಿಕ ಬಣ್ಣದೋಕುಳಿ, ರೇನ್ ಡ್ಯಾನ್ಸ್ ಎಲ್ಲವೂ ನಿಷೇಧವಾಗಿದೆ. ಆದರೆ ಕುಟುಂಬಸ್ಥರು ತಮ್ಮ ಮನೆ ಜಾಗದಲ್ಲಿ ಸಂಕ್ಷಿಪ್ತವಾಗಿ ಹೋಳಿ ಆಚರಿಸಬಹುದು. ಆದರೆ ಇಂತಹ ಸರಳ ಹೋಳಿ ಆಚರಿಸದ ಭಾಗ್ಯವೂ ಕೂಡ ಜಿಲ್ಲೆಯ ಬಾದಾಮಿ ತಾಲೂಕಿನ ಕೆಲವಡಿ, ಲಿಂಗಾಪುರ, ತಿಮ್ಮಸಾಗರ, ತೆಗ್ಗಿ, ಹಂಸನೂರು ಸೇರಿ ಏಳು ಗ್ರಾಮದ ಜನರಿಗೆ ಇಲ್ಲ. ಇಲ್ಲಿ ಯಾರೊಬ್ಬರೂ ಕಾಮದಹನ ಮಾಡಲ್ಲ. ಹಲಗೆ ಬಾರಿಸಲ್ಲ. ಸೋಗಿನ ಬಂಡಿಗಳು ಇರಲ್ಲ. ಬಣ್ಣದೋಕುಳಿಯೂ ಇರಲ್ಲ. ಇದು ಇಂದು ನಿನ್ನೆಯದಲ್ಲ. ತಲೆ ತಲಾಂತರಳಿಂದಲೂ ಇಲ್ಲಿ ಹಿರಿಯರು ಹೋಳಿ ಆಚರಿಸಿಲ್ಲ. ಅದನ್ನೇ ಈಗಲೂ ಯುವಕರು ಮುಂದುವರೆಸಿಕೊಂಡು ಬಂದಿದ್ದಾರೆ. ಕಾರಣ ಈ ಭಾಗದಲ್ಲಿ ಇರುವ ಶ್ರೀ ರಂಗನಾಥ ದೇವಸ್ಥಾನ. ರಂಗನಾಥನ ಸನ್ನಿಧಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಹೋಳಿ ಆಚರಿಸಿದರೆ ಕೇಡಾಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಹೀಗಾಗಿ ಹೋಳಿ ಸಂಭ್ರಮ ಇಲ್ಲಿ ಇರುವುದಿಲ್ಲ.
ಅಪ್ಪಿ ತಪ್ಪಿ ಬಣ್ಣದಾಟ ಆಡಲ್ಲ
ಬಾದಾಮಿ ತಾಲೂಕಿನ ರಂಗನಾಥ ದೇವಸ್ಥಾನ ಅತ್ಯಂತ ಪ್ರಾಚೀನ ದೇಗುಲ. ಈ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಅಪಾರ. ಇದರ ಜೊತೆಗೆ ಕನಕರಾಯನ ದೇವಸ್ಥಾನವೂ ಇದೆ. ಈ ದೇಗುಲಗಳ ರುದ್ರಪಾದ ಗ್ರಾಮಗಳೆಂದು ಬಿಂಬಿತವಾದ ಏಳು ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಸ್ವಯಂ ನಿಷೇಧ ಮಾಡಿಕೊಳ್ಳಲಾಗಿದೆ. ಇದು ಹಿರಿಯರ ಕಾಲದಿಂದಲೂ ನಡೆದು ಬಂದಿದ್ದು, ಹೋಳಿ ಹಬ್ಬದ ಬೆನ್ನಲ್ಲೆ ಶ್ರೀ ರಂಗನಾಥ ದೇವಸ್ಥಾನದ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾರೆ. ಆ ಜಾತ್ರೆಗೆ ಈ ಏಳು ಗ್ರಾಮದ ಜನರು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಬಳಿಕ ಬರುವ ಯುಗಾದಿ ಹಬ್ಬದಂದು ಏಳು ಗ್ರಾಮದಲ್ಲಿ ಬಣ್ಣದಾಟ ಆಡುತ್ತಾರೆ ಹೊರತು ಅಪ್ಪಿ ತಪ್ಪಿ ಕೂಡ ಹೋಳಿ ವೇಳೆ ಬಣ್ಣದಾಟ ಆಡಲ್ಲ. ಅದು ಅವರು ಪಾಲಿಸಿಕೊಂಡು ಬಂದಿರುವ ರಂಗನಾಥ ದೇವಸ್ಥಾನದ ಮೇಲಿನ ಶ್ರದ್ಧೆ ಮತ್ತು ಭಕ್ತಿ. ಈ ನಿಯಮವನ್ನು ಯಾರೇ ಉಲ್ಲಂಘಿಸಿದರೂ ತಮಗೆ ಕೇಡು ಆಗುತ್ತದೆ ಎನ್ನುವ ಭಯ. ಹೀಗಾಗಿ ಹೋಳಿಯ ಗೊಡವೆಗೆ ಹೋಗಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇದನ್ನೂ ಓದಿ
ಧಾರವಾಡದಲ್ಲಿ ಕಸ್ತೂರಬಾ ಮಹಿಳಾ ನಾಟಕೋತ್ಸವಕ್ಕೆ ಚಾಲನೆ
ಮೈಸೂರು: ನಂಜನಗೂಡಿನಲ್ಲಿ ರಥೋತ್ಸವ ವೇಳೆ ವಿಘ್ನ; ಪ್ರದಕ್ಷಿಣೆ ಮುನ್ನವೇ ವಿಗ್ರಹ ಇಳಿಸಿದ ಅರ್ಚಕರು
Published On - 12:11 pm, Fri, 26 March 21