ಏ. 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ, ಮನೆಯಿಂದ ವೋಟ್ ಹಾಕುವವರಿಗೆ ಮಾಹಿತಿ ಇಲ್ಲಿದೆ
ವಿಶೇಷ ವಿಕಲಚೇತನರು ಮನೆಯಿಂದಲೇ ಮತದಾನ ಮಾಡಬಹುದು. ಮನೆಯಿಂದ ಮತ ಹಾಕುವವರಿಗೆ ಫಾರಂ 12ರಡಿ ಅನುಮತಿ ನೀಡಲಾಗುತ್ತೆ.
ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ರಾಜ್ಯ ಮುಖ್ಯಚುನಾವಣಾಧಿಕಾರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದೆ. ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ವಿಶೇಷ ವಿಕಲಚೇತನರು ಮನೆಯಿಂದಲೇ ಮತದಾನ ಮಾಡಬಹುದು. ಮನೆಯಿಂದ ಮತ ಹಾಕುವವರಿಗೆ ಫಾರಂ 12ರಡಿ ಅನುಮತಿ ನೀಡಲಾಗುತ್ತೆ. ವಿಕಲಚೇತನರು ಇರುವ ಮನೆಗೆ ಚುನಾವಣಾ ಸಿಬ್ಬಂದಿ ತೆರಳಲಿದ್ದಾರೆ. ನಮ್ಮ ಸಿಬ್ಬಂದಿ ಜತೆ ಪಕ್ಷಗಳ ಪ್ರತಿನಿಧಿಗಳು ಕೂಡ ಹೋಗುತ್ತಾರೆ. ವಿಕಲಚೇತನರ ಮತದಾನದ ವೇಳೆ ಗೌಪ್ಯತೆ ಕಾಪಾಡಲಾಗುತ್ತೆ. ಈ ಬಾರಿ ರಾಜ್ಯ ಮತದಾರರ ಪಟ್ಟಿಗೆ 3,021 NRIಗಳ ಹೆಸರು ಸೇರ್ಪಡೆಯಾಗಿವೆ ಎಂದು ವಿಧಾನಸೌಧದಲ್ಲಿ ಮನೋಜ್ ಕುಮಾರ್ ಮೀನಾ ಹೇಳಿದರು.
ಇವತ್ತಿನಿಂದ ನೀತಿ ಸಂಹಿತೆ ಜಾರಿಯಾಗಲಿದೆ. ಹಾಗಾಗಿ ಈ ಕ್ಷಣದಿಂದ ರಾಜಕಾರಣಿಗಳ ಕಾರ್ಯಭಾರ ಮುಕ್ತಾಯವಾಗುತ್ತೆ. ಯಾವುದೇ ಸಭೆ, ಸಮಾರಂಭಗಳನ್ನ ಮಾಡಲು ಬರಲ್ಲ. ಅಧಿಕಾರಿಗಳ ಸಭೆ ನಡೆಸೋಕೆ ಬರಲ್ಲ. ಯಾವುದೇ ಯೋಜನೆಗಳಿಗೆ ಸಹಿಹಾಕುವಂತಿಲ್ಲ. ಹೊಸ ಕಾರ್ಯಕ್ರಮ ಅನುಷ್ಟಾನ ಮಾಡುವಂತಿಲ್ಲ. ಇವತ್ತಿನಿಂದ ಎಲ್ಲವೂ ನಿರ್ಬಂಧಿಸಲಾಗುತ್ತದೆ ಎಂದರು. ರಾಜ್ಯದಲ್ಲಿ ಒಟ್ಟು 58282 ಮತಗಟ್ಟೆಗಳಿವೆ. ಕೋವಿಡ್ ಬಾಧಿತರಿಗೆ ಪ್ರತ್ಯೇಕ ಮತಗಟ್ಟೆ ಇರಲಿದೆ. 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯ. ಇವಿಎಂ ಬ್ಯಾಲೆಟ್ ಪೇಪರ್ ನಲ್ಲಿ ಅಭ್ಯರ್ಥಿಗಳ ಭಾವಚಿತ್ರವಿರಲಿದೆ. ನೋಟಾ ಆಯ್ಕೆಯ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
89 ಸಾವಿರ ವಿವಿ ಪ್ಯಾಟ್ಗಳ ಬಳಕೆ
ಮತಗಟ್ಟೆಗಳಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಶೌಚಾಲಯ, ಕುಡಿಯುವ ನೀರು ಒದಗಿಸುತ್ತೇವೆ. 100% ಸೌಕರ್ಯ ರಾಜ್ಯದಲ್ಲಿ ಒದಗಿಸುತ್ತೇವೆ. 3 ಲಕ್ಷ ನಮಗೆ ಸಿಬ್ಬಂದಿಗಳು ಸಿಗಲಿದ್ದಾರೆ. ಚುನಾವಣಾ ಸಿಬ್ಬಂದಿಗೆ ತರಬೇತಿ ಕೂಡ ನೀಡಲಾಗಿದೆ. ಎಲ್ಲ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಹೈದ್ರಾಬಾದ್ ನಿಂದ ಹೊಸ ಇವಿಎಂ, ವಿವಿಪ್ಯಾಟ್ ಬಂದಿವೆ. ಯಾವ ಚುನಾವಣೆಯಲ್ಲೂ ಇವನ್ನ ಬಳಸಿಲ್ಲ. ಮೊದಲ ಬಾರಿಗೆ ಇವನ್ನ ಬಳಸಲಾಗ್ತಿದೆ. 89 ಸಾವಿರ ವಿವಿ ಪ್ಯಾಟ್ ಗಳು ಬಳಕೆಯಾಗ್ತಿವೆ. 1 ಲಕ್ಷ 834 ಸೆಕ್ಸ್ ವರ್ಕರ್ಸ್ ರಾಜ್ಯದಲ್ಲಿದ್ದಾರೆ. ಅವರನ್ನು ಮತ ಪಟ್ಟಿಗೆ ಸೇರಿಸಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರ ದೊಡ್ಡ ಕ್ಷೇತ್ರ. 6 ಲಕ್ಷ 91 ಸಾವಿರ ಮತದಾರರು ಅಲ್ಲಿದ್ದಾರೆ. ಶೃಂಗೇರಿ ಅತಿ ಕಡಿಮೆ ಮತದಾರರಿರುವ ಕ್ಷೇತ್ರ. 58282 ಮತಗಟ್ಟೆಗಳಿವೆ. ಬೆಳಗಾವಿಯಲ್ಲಿ ಅತಿ ಹೆಚ್ಚು ಮತಗಟ್ಟೆಗಳಿವೆ ಎಂದರು.
ಮನೆಯಿಂದ ವೋಟ್ ಹಾಕುವವರಿಗೆ ಅವಕಾಶ
ಮನೆಯಿಂದಲೇ ಮತ ಹಾಕಲು ಅವಕಾಶವಿದೆ. ಅಂತವರು 12-ಡಿ ಅಡಿ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 12ರವರೆಗೆ ಅಧಿಸೂಚನೆ ಹೊರಡಲಿದೆ. ಅಷ್ಟರೊಳಗೆ ಅಂತವರು ಅರ್ಜಿಸಲ್ಲಿಸಬಹುದು. ಮತ ಹಾಕಲು ಆ್ಯಪ್ ಮಾಡಲಾಗಿದೆ. ಮನೆಗೆ ಹೋಗಿ ಅವರು ಅರ್ಹರೇ ಎಂದು ನಮ್ಮ ಟೀಮ್ ಪರಿಶೀಲಿಸ್ತಾರೆ. ನಂತರ ಮತದಾನಕ್ಕೆ ಅವಕಾಶ ಕಲ್ಪಿಸುತ್ತೇವೆ. ಮತವನ್ನ ಗೌಪ್ಯವಾಗಿಯೇ ಸಂಗ್ರಹಿಸುತ್ತೇವೆ. ಮತದಾನಕ್ಕೂ ಮೂರು ದಿನ ಮೊದಲೇ ಇದನ್ನ ಮಾಡ್ತೇವೆ. ಕ್ಯಾಮೆರಾ, ಪೊಲೀಸ್ ಜೊತೆಯೇ ಚುನಾವಣಾಧಿಕಾರಿಗಳು ಮನೆಗೆ ಭೇಟಿ ನೀಡುತ್ತಾರೆ. ಪಕ್ಷದ ಬೂತ್ ಏಜೆಂಟ್ ಗಳನ್ನು ಕರೆದುಕೊಂಡು ಹೋಗುತ್ತೇವೆ. ಅವರ ಮತವನ್ನ ಸಂಗ್ರಹ ಮಾಡ್ತಾರೆ. ಒಂದೊಂದು ಬೂತ್ ನಲ್ಲಿ ಎಷ್ಟುಮಂದಿ ಮನೆಯಿಂದ ವೋಟ್ ಮಾಡೋಕೆ ಅರ್ಹರಿದ್ದಾರೆ ಅನ್ನೋದರ ಮೇರೆಗೆ ನಮ್ಮ ತಂಡ ನೇಮಕ ಮಾಡಲಾಗುತ್ತದೆ. ಮಾಧ್ಯಮಗಳ ಸರ್ವೆಯಲ್ಲಿ ಮತದಾರರ ವೈಯಕ್ತಿಕ ವಿವರ ಕೇಳಬಾರದು. ಎಪಿಕ್ ಕಾರ್ಡ್, ಪೋನ್ ನಂಬರ್ ವಿವರ ಕೇಳುವಂತಿಲ್ಲ. ಅಂತಹುದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ