ಚರ್ಚಿಸೋಣ ಬನ್ನಿ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸಚಿವ ಸವದಿ ಮನವಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 11, 2020 | 4:40 PM

ನೌಕರರು ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಪ್ರತಿಭಟನೆಗೂ ಮುನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಬೇಡಿಕೆ ಈಡೇರಿಸುವುದಕ್ಕೆ ನಮಗೆ ಸಮಯ ನೀಡಬೇಕು ಎಂದು ಸಚಿವ ಲಕ್ಷ್ಮಣ ಸವದಿ ಕೋರಿದರು.

ಚರ್ಚಿಸೋಣ ಬನ್ನಿ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸಚಿವ ಸವದಿ ಮನವಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
Follow us on

ಬೆಂಗಳೂರು: ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ನೌಕರರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಏನೇ ಸಮಸ್ಯೆ ಇದ್ದರೂ ಬಂದು ಚರ್ಚಿಸಿ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡೋದು ತಪ್ಪು ಎಂದಿದ್ದಾರೆ.

ನಿನ್ನೆ ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆ ನಡೆಸಿದ್ದರೂ ಅಲ್ಲಿ ಯಾವ ಸಚಿವರೂ ತೆರಳಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಲಕ್ಷ್ಮಣ ಸವದಿ, ನಿನ್ನೆ ಅಧಿವೇಶನ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಆದರೂ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಸಂಗ್ರಹ ಮಾಡಿದ್ದೇನೆ. ಇಂದು ನಾನು ಈ ವಿಚಾರವನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಬೇಕು ಎಂದುಕೊಂಡಿದ್ದೆ. ನೌಕರರು ಧರಣಿ ಮುಂದುವರಿಸಿದ್ದು ತಪ್ಪು ಎಂದಿದ್ದಾರೆ.

ಸಾರಿಗೆ ನಿಗಮಗಳ ನೌಕರರು ತಮ್ಮ ಸಮಸ್ಯೆ ಏನು ಎಂಬುದನ್ನು ಮನವರಿಕೆ ಮಾಡಿಕೊಡಲಿ. ಈ ಬಗ್ಗೆ ಚರ್ಚಿಸುವ ಉದ್ದೇಶದಿಂದಲೇ ನಾನು ಇಂದಿನ ಎಲ್ಲಾ ಪ್ರವಾಸಗಳನ್ನ ರದ್ದು ಮಾಡಿದ್ದೇನೆ. ನಿಮ್ಮ ಸಮಸ್ಯೆ ಮನವರಿಕೆ ಮಾಡಿಕೊಟ್ಟರೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಜತೆ ಚರ್ಚೆ ಮಾಡುತ್ತೇನೆ. ಸಂಘಟನೆಗಳ​ ನಾಯಕರನ್ನು ಆಂಧ್ರಕ್ಕೆ ಕಳುಹಿಸಿಕೊಡುತ್ತೇನೆ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಬರಲಿ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಆಂಧ್ರದಲ್ಲಿ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗಿತ್ತು.

ನಮ್ಮ-ನಿಮ್ಮ ಮಧ್ಯದ ಬಾಂಧವ್ಯ ಹಾಳಾಗುವುದು ಬೇಡ. ಏನೇ ಸಮಸ್ಯೆ ಇದ್ದರೂ ಬಂದು ಚರ್ಚಿಸಿ ಬಗೆಹರಿಸಿಕೊಳ್ಳಿ. ಸಾರಿಗೆ ನೌಕರರು ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ. ಇಂದು ರಾತ್ರಿ ಎಷ್ಟೊತ್ತಾದರೂ ನಿಮಗಾಗಿ ಕಾಯುತ್ತಿರುತ್ತೇನೆ ಎಂದು ಲಕ್ಷ್ಮಣ ಸವದಿ ಭರವಸೆ ನೀಡಿದರು.

ಕರ್ತವ್ಯ ನಿರ್ವಹಿಸುವುದಕ್ಕೆ ಚಾಲಕ, ನಿರ್ವಾಹಕರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆಯೂ ಮಾತನಾಡಿರುವ ಅವರು, ಡ್ಯೂಟಿ ನೀಡುವುದಕ್ಕೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಇಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಆಗಿದೆ. ಕೊವಿಡ್ ಪರಿಹಾರ ₹ 30 ಲಕ್ಷ 15 ದಿನಗಳಲ್ಲಿ ನೀಡಲಾಗುವುದು ಎಂದರು.

ಸಾರಿಗೆ ನೌಕರರ ಮತ್ತೊಂದು ಬಣದೊಂದಿಗೆ ಸಚಿವ ಸವದಿ ಸಂಧಾನ ಸಭೆ: ನೌಕರರ ಆಕ್ಷೇಪ

ಸದ್ಯಕ್ಕಿಲ್ಲ ಬಸ್ | ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ತೀರ್ಮಾನ: ಕೋಡಿಹಳ್ಳಿ ಚಂದ್ರಶೇಖರ್