ಕೊಲ್ಲೂರು ಮೂಕಾಂಬಿಕಾ ಕಾರಿಡಾರ್​ಗೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕ ಸ್ಪಂದನೆ: ಬಿವೈ ರಾಘವೇಂದ್ರ

|

Updated on: Aug 02, 2024 | 12:26 PM

ಕೊಲ್ಲೂರು ಮೂಕಾಂಬಿಕಾ ದೇಗುಲ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನೊಳಗೊಂಡ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್​ ನಿರ್ಮಾಣಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ನೇತೃತ್ವದ ನಿಯೋಗ ಮನವಿ ಮಾಡಿದೆ. ಇದಕ್ಕೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾದರೆ ಏನಿದು ಕೊಲ್ಲೂರು ಮೂಕಾಂಬಿಕಾ ಕಾರಿಡಾರ್? ತಿಳಿಯಲು ಮುಂದೆ ಓದಿ.

ಕೊಲ್ಲೂರು ಮೂಕಾಂಬಿಕಾ ಕಾರಿಡಾರ್​ಗೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕ ಸ್ಪಂದನೆ: ಬಿವೈ ರಾಘವೇಂದ್ರ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಆಗಸ್ಟ್ 2: ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಮ್ಮಿಕೊಂಡಿರುವ ‘ಕೊಲ್ಲೂರು ಮೂಕಾಂಬಿಕಾ ಕಾರಿಡಾರ್’​ ನಿರ್ಮಾಣಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸೇರಿದಂತೆ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ದ ಅವರು, ಕಾರಿಡಾರ್ ನಿರ್ಮಾಣ ಸಂಬಂಧ ನಿರ್ಮಲಾ ಸೀತಾರಾಮನ್ ಬಳಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣ ಮಾಡಲು ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರೊಂದಿಗೆ ಮನವಿ ಮಾಡಲಾಯಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಉಡುಪಿ ಜಿಲ್ಲೆಯ, ಸುಮಾರು 1200 ವರ್ಷಗಳ ಇತಿಹಾಸವಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿರುತ್ತದೆ. ಭಾರತದ ವಿವಿಧ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಪ್ರತಿದಿನ 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಎಕ್ಸ್​​ ಸಂದೇಶದಲ್ಲಿ ರಾಘವೇಂದ್ರ ಉಲ್ಲೇಖಿಸಿದ್ದಾರೆ.

ಏನಿದು ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಯೋಜನೆ?

ಕೊಲ್ಲೂರು ಕ್ಷೇತ್ರದಲ್ಲಿ ಮೂಲಸೌಕರ್ಯದ ಜೊತೆಗೆ ಸೌಪರ್ಣಿಕಾ ನದಿ ಸ್ವಚ್ಛತೆ, ಶಂಕರಾಚಾರ್ಯ ಥೀಮ್ ಪಾರ್ಕ್, ಮಲ್ಟಿಲೆವೆಲ್ ಪಾರ್ಕಿಂಗ್, ವಿಮಾನ, ರೈಲ್ವೆ, ಬಸ್ ಹಾಗೂ ಬಂದರು ಸಂಪರ್ಕ, ಕೇಬಲ್ ಕಾರ್, ಬೈಂದೂರಿನ ಇತಿಹಾಸ ಪ್ರಸಿದ್ಧ ದೇವಸ್ಥಾಗಳ ರಸ್ತೆ ಸಂಪರ್ಕ, ಕಡಲ ತೀರ ಹಾಗೂ ಜಲಪಾತಗಳ ಅಭಿವೃದ್ಧಿ, ಪಂಚಗಂಗಾವಳಿ ನದಿ ಅಭಿವೃದ್ಧಿ ಸಹಿತ ಹಲವು ಯೋಜನೆಗಳನ್ನು ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಒಳಗೊಂಡಿದೆ ಎಂದು ಸಂಸದರು ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಭೇಟಿಯಾದ ಬಿವೈ ರಾಘವೇಂದ್ರ ನಿಯೋಗ

ಬಿವೈ ರಾಘವೇಂದ್ರ ಎಕ್ಸ್ ಸಂದೇಶ


ದೆಹಲಿಗೆ ತೆರಳಿದ ನಿಯೋಗದಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ ಅಡ್ಯಂತಾಯ, ಬೈಂದೂರಿನ ವೆಂಕಟೇಶ್ ಕಿಣಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಆರು ವರ್ಷಗಳ ಬಳಿಕ ಭರ್ತಿಯಾದ ಲಿಂಗನಮಕ್ಕಿ ಜಲಾಶಯ; 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣದ ಬಗ್ಗೆ ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ