ನಾನೂ ಯಾಕೆ ಸಿಎಂ ಆಗಬಾರದು? ಅಧಿಕಾರ ಹಂಚಿಕೆ ಚರ್ಚೆ ಹೊತ್ತಲ್ಲೇ ಗೃಹ ಸಚಿವ ಜಿ ಪರಮೇಶ್ವರ ಪ್ರಶ್ನೆ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಚರ್ಚೆ ಮತ್ತೆ ತೀವ್ರಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಶಾಸಕ ಇಕ್ಬಾಲ್ ಅಹ್ಮದ್ ಹೇಳಿದ ಕೆಲವೇ ದಿನಗಳಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರೊಂದಿಗೆ ಇಂದು ಔತಣಕೂಟ ನಡೆಸಲಿದ್ದಾರೆ.

ನಾನೂ ಯಾಕೆ ಸಿಎಂ ಆಗಬಾರದು? ಅಧಿಕಾರ ಹಂಚಿಕೆ ಚರ್ಚೆ ಹೊತ್ತಲ್ಲೇ ಗೃಹ ಸಚಿವ ಜಿ ಪರಮೇಶ್ವರ ಪ್ರಶ್ನೆ
ಗೃಹ ಸಚಿವ ಡಾ. ಜಿ ಪರಮೇಶ್ವರ್

Updated on: Oct 13, 2025 | 9:53 AM

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕ ಕಾಂಗ್ರೆಸ್ (Congress) ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಕೂಗು ಮತ್ತೆ ಕೇಳಿ ಬರಲಾರಂಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರ ಜೊತೆ ಇಂದು ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ. ಮತ್ತೊಂದೆಡೆ, ಕೆಲವು ದಿನಗಳ ಹಿಂದಷ್ಟೇ, ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಶಾಸಕ ಇಕ್ಬಾಲ್ ಅಹ್ಮದ್ ಹೇಳಿದ್ದರು. ಇದೀಗ ಗೃಹ ಸಚಿವ ಡಾ. ಜಿ ಪರಮೇಶ್ವರ್ (G Parameshwara), ನಾನು ಕೂಡ ಮುಖ್ಯಮಂತ್ರಿ ಆಗುವ ಬಯಕೆ ಹೊಂದಿದ್ದೇನೆ. ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ ಅವರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಸಚಿವರಾಗುವ ಬಯಕೆ ಎಲ್ಲ ಶಾಸಕರಿಗೂ ಇರುತ್ತದೆ ಇಂದು ಪರಮೇಶ್ವರ್ ಹೇಳಿದ್ದಾರೆ.

ಮುಖ್ಯಮಂತ್ರಿ ಮತ್ತು ಸಚಿವರು ಭೋಜನ ಕೂಟಗಳಿಗೆ ಕರೆ ನೀಡುವುದು ಸಾಮಾನ್ಯ. ಬಿಜೆಪಿ ಈ ವಿಚಾರದಲ್ಲಿ ತಲೆಹಾಕಬೇಕಾದ ಅಗತ್ಯವಿಲ್ಲ. ಸಿಎಂ ನಮ್ಮನ್ನು ಊಟ ಅಥವಾ ಭೋಜನಕ್ಕೆ ಆಹ್ವಾನಿಸಿದ್ದು ಇದೇ ಮೊದಲಲ್ಲ. ಪ್ರತಿ ಅಧಿವೇಶನದಲ್ಲೂ ಇದನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆದರೆ, ಪರಮೇಶ್ವರ್ ಹೇಳಿಕೆ ಈಗ ಮತ್ತೆ ಚರ್ಚೆ ಹುಟ್ಟುಹಾಕಿದೆ. ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಬಣದ ಶಾಸಕರು ಹೇಳಿಕೆ ಆರಂಭಿಸಿದ ಬೆನ್ನಲ್ಲೇ ಇತ್ತ ಸಿಎಂ ಸಿದ್ದರಾಮಯ್ಯ ಬಣದ ಶಾಸಕರೂ ದಾಳ ಉರುಳಿಸಲು ಆರಂಭಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಿಎಂ ಆಪ್ತ ಸಚಿವರ ಔತಣಕೂಟವೂ ನಡೆಯಲಿರುವುದು, ಕುತೂಹಲ ಮೂಡಿಸಿದೆ.

4,600 ಕಾನ್‌ಸ್ಟೇಬಲ್‌ಗಳ ನೇಮಕಾತಿಗೆ ಅಧಿಸೂಚನೆ: ಪರಮೇಶ್ವರ್

ಪೊಲೀಸ್ ಇಲಾಖೆಯಲ್ಲಿ 15,000 ಹುದ್ದೆಗಳು ಖಾಲಿ ಇದ್ದು, 4,600 ಕಾನ್‌ಸ್ಟೇಬಲ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, 545 ಪಿಎಸ್‌ಐಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. 402 ಹೊಸ ಪಿಎಸ್‌ಐಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದ್ದು, 600 ಪಿಎಸ್‌ಐಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನವೆಂಬರ್ ಕ್ರಾಂತಿ ಕಿಚ್ಚಿನ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಸಚಿವರ ಜತೆ ಡಿನ್ನರ್ ಮೀಟಿಂಗ್

ಆಂತರಿಕ ಮೀಸಲಾತಿ ಜಾರಿಯಿಂದಾಗಿ ನೇಮಕಾತಿ ನಡೆದಿಲ್ಲ. ಈಗ ಎಲ್ಲಾ ಇಲಾಖೆಗಳಲ್ಲಿ ಮತ್ತೆ ನೇಮಕಾತಿ ಆರಂಭವಾಗಲಿದೆ. ವಯಸ್ಸಿನ ಮಿತಿಯನ್ನು ಸಡಿಲಿಸಲಾಗುತ್ತಿದೆ. ಎರಡು ವರ್ಷಗಳಿಗೊಮ್ಮೆ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:53 am, Mon, 13 October 25