ಬೆಂಗಳೂರು, ಡಿಸೆಂಬರ್ 7: ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಕೀನ್ಯಾದ ಕೃಷಿ ಕ್ಷೇತ್ರಕ್ಕೆ ಮತ್ತು ಪಪುವಾ ನ್ಯೂಗಿನಿಯಾಗೆ ಆರ್ಥಿಕ ನೆರವು ಘೋಷಣೆ ಮಾಡಿದೆ ವಿಚಾರವಾಗಿ ಪ್ರಕಟವಾದ ಪತ್ರಿಕಾ ವರದಿಗಳ ತುಣುಕನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಂದೇಶ ಪ್ರಕಟಿಸಿದ ಸಿದ್ದರಾಮಯ್ಯ, ನಮ್ಮ ರೈತರ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬೇರೆ ದೇಶಗಳಿಗೆ ಸಹಾಯ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆ ಮೂಲಕ ಅವರು ಭಾರತದ ನೆರವಿನ ರಾಜತಾಂತ್ರಿಕತೆಯ ಪರಂಪರೆಯನ್ನು ಎತ್ತಿಹಿಡಿಯುತ್ತಿದ್ದಾರೆ. ಇದು ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಬಂದ ಕ್ರಮವಾಗಿದೆ ಮತ್ತು ನಂತರವೂ ಮುಂದುವರೆದಿದೆ. ಆದರೆ ನಮ್ಮ ಪ್ರಶ್ನೆ ಇದು: ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ನಮ್ಮ ರೈತರ ಬಗ್ಗೆ ಮೋದಿ ಅವರು ಏಕೆ ಅಷ್ಟೇ ಕಾಳಜಿಯನ್ನು ಪ್ರದರ್ಶಿಸುವುದಿಲ್ಲ? ಪರಿಹಾರ ಕೋರಿ ಬರೆದ ಪತ್ರಕ್ಕೆ ಕೇಂದ್ರ ಬಿಜೆಪಿ ಸರಕಾರದಿಂದ ಸ್ಪಂದನೆ ಪಡೆಯಲು ಕನ್ನಡಿಗರೇಕೆ ಅರ್ಹರಲ್ಲ? ಎಂದು ಸಿದ್ದರಾಮಯ್ಯ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ಮೌನವು ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಅವುಗಳ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ. ರಾಜ್ಯದ ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಇನ್ನೂ ಪೂರ್ವಭಾವಿ ಸಭೆಯನ್ನು ಕರೆಯದ ಹಿನ್ನೆಲೆಯಲ್ಲಿ, ರಾಜ್ಯದಿಂದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಅರ್ಹ ರೈತರಿಗೆ ತಲಾ 2 ಸಾವಿರ ರೂ. ವರೆಗೆ ಬೆಳೆ ಪರಿಹಾರ ಧನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಿಎಂ ಉಲ್ಲೇಖಿಸಿದ್ದಾರೆ.
We don’t have any opposition to @narendramodi extending help to other countries; he is merely upholding a legacy of India’s aid diplomacy & soft power diplomacy, a practice that dates back to the pre-independence era and has continued ever since.
Our question, however, is this:… pic.twitter.com/m8Z2PHrcwr
— Siddaramaiah (@siddaramaiah) December 7, 2023
ರಾಜ್ಯದ ಮೂವರು ಸಚಿವರು ದೆಹಲಿಗೆ ತೆರಳಿದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಕೇಂದ್ರಕ್ಕೆ ಪತ್ರ ಬರೆದು ಪರಿಹಾರಕ್ಕಾಗಿ 18,171 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರವು ನಮ್ಮ ಪಾಲಿನ ತೆರಿಗೆ ಹಣವನ್ನು ಹಿಂದಿರುಗಿಸಿದರೂ, ಅದು ನಮ್ಮ ರೈತರ ಸಂಕಷ್ಟವನ್ನು ನಿವಾರಿಸಲು ಸಹಾಯ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನನ್ನನ್ನು ಮೋದಿಜೀ ಅಥವಾ ಆದರಣೀಯ ಮೋದಿಜೀ ಎಂದು ಸಂಬೋಧಿಸಬೇಡಿ: ಪ್ರಧಾನಿ
48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ 4,663 ಕೋಟಿ ರೂ.ಗೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ ಮತ್ತು ವಸತಿ ಸಚಿವರನ್ನು ನೇರವಾಗಿ ಭೇಟಿ ಮಾಡಲು ಸಮಯ ಕೋರಿ ಪತ್ರ ಬರೆದಿದ್ದೆ. ಆದರೆ ಅವರು ನಮಗೆ ಇನ್ನೂ ಕಾಲಾವಕಾಶ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Thu, 7 December 23