ಬೆಂಗಳೂರು: ಐಎಂಎ ಸಂಸ್ಥೆಯಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣದಡಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ ಮಾಡದ ಬಗ್ಗೆ ಹೈಕೋರ್ಟ್ ಪ್ರಶ್ನಿಸಿದೆ. ರೋಷನ್ ಬೇಗ್ ವಿರುದ್ಧದ ಸಿಬಿಐ ತನಿಖೆ ಪೂರ್ಣವಾಗಿಲ್ಲ. ಈ ಹಂತದಲ್ಲಿ ಜಪ್ತಿ ಆದೇಶ ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವಾದ ಮಂಡಿಸಿದ್ದಾರೆ.
ರಾಜ್ಯ ಸರ್ಕಾರದ ವಾದವನ್ನು ಒಪ್ಪದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ, ‘ಹಣಕಾಸಿನ ಲಾಭ ಪಡೆದಿದ್ದರೆ ಜಪ್ತಿ ಮಾಡಬಹುದು. ವೈಯಕ್ತಿಕ ಆಸ್ತಿ ಜಪ್ತಿ ಮಾಡಲು ಅಧಿಕಾರವಿದೆ. ಸರ್ಕಾರಿ ಶಾಲೆಗೆ ಐಎಂಎ ₹ 10 ಕೋಟಿ ದೇಣಿಗೆ ನೀಡಿದೆ. ಈ ದೇಣಿಗೆ ಹಣವನ್ನು ಠೇವಣಿದಾರರಿಗೆ ಸರ್ಕಾರ ಹಿಂದಿರುಗಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಆದೇಶಕ್ಕಾಗಿ ನಾಳೆಗೆ ಮುಂದೂಡಲಾಗಿದೆ.
ಐಎಂಎ ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಶಾಸಕ ಆರ್.ರೋಷನ್ಬೇಗ್ ಆಸ್ತಿ ಜಪ್ತಿ ಸಾಧ್ಯತೆಯ ಬಗ್ಗೆ ಸಕ್ಷಮ ಪ್ರಾಧಿಕಾರ ಚಿಂತನೆ ನಡೆಸಿದೆ. ಈ ಕುರಿತು ಹೈಕೋರ್ಟ್ಗೆ ಬುಧವಾರ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತ ಮಾಹಿತಿ ನೀಡಿದ್ದರು.
ಪ್ರಕರಣದ ಹಿನ್ನೆಲೆ
ಹಗರಣದಲ್ಲಿ ರೋಷನ್ ಬೇಗ್ ಪಾತ್ರದ ಬಗ್ಗೆ ಸರ್ಕಾರ ಮತ್ತು ಸಿಬಿಐನಿಂದ ಸಾಕ್ಷ್ಯಾಧಾರ ಕೇಳಲಾಗಿತ್ತು. ಮಾಹಿತಿ ಬಂದ ತಕ್ಷಣವೇ ರೋಷನ್ ಬೇಗ್ ಆಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಅಲ್ಲದೇ ಈವರೆಗೂ ಜಪ್ತಿಯಾದ ಆಸ್ತಿಗಳ ವಿವರವನ್ನು ಹರ್ಷ ಗುಪ್ತ ಹೈಕೋರ್ಟ್ಗೆ ಸಲ್ಲಿಸಿದ್ದರು.
ಸಕ್ಷಮ ಪ್ರಾಧಿಕಾರಕ್ಕೆ ಕೆಲ ಕಳಂಕಿತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹರ್ಷಗುಪ್ತ ಆಕ್ಷೆಪಿಸಿದ್ದರು. ಸಕ್ಷಮ ಪ್ರಾಧಿಕಾರಕ್ಕೆ ಲೋಕಾಯುಕ್ತ, ಎಸಿಬಿ ಪ್ರಕರಣ ಎದುರಿಸುತ್ತಿದ್ದ ಕೆಲ ಕಳಂಕಿತ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರ ಸೇವೆ ಹಿಂಪಡೆಯಲು ಮನವಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಹರ್ಷ ಗುಪ್ತ ಹೈಕೋರ್ಟ್ಗೆ ನೀಡಿದ್ದರು.
ಐಎಂಎ ಬಹುಕೋಟಿ ಅವ್ಯವಹಾರ ಕೇಸ್ಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಬಿಡಿಎ ಇಇ ಪಿ.ಡಿ.ಕುಮಾರ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.
ಹಿರಿಯ ಐಎಎಸ್ ಆಫೀಸರ್ ವಿಜಯ್ ಶಂಕರ್ ಐಎಂಎ ಜ್ಯುವೆಲ್ಲರ್ ಪ್ರಕರಣದಲ್ಲಿ ₹ 1.5 ಕೋಟಿ ಕಿಕ್ಬ್ಯಾಕ್ ಆರೋಪ ಹೊತ್ತು ಜೈಲು ಸೇರಿದ್ದರು. ಐಎಂಎ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರೋವಾಗಲೇ ಬಿ.ಎಂ.ವಿಜಯ್ ಶಂಕರ್ ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸ್ವಂತ ಮನೆಯ ಮೇಲ್ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಅಷ್ಟೇ ಅಲ್ಲದೇ, ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ ಸಿಬಿಐ ಚಾರ್ಜ್‌ಶೀಟ್ ರದ್ದಾಗಿತ್ತು. ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಹೈಕೋರ್ಟ್ ಪೀಠ ಚಾರ್ಜ್‌ಶೀಟ್ ರದ್ದು ಆದೇಶ ನೀಡಿತ್ತು.
ಇದನ್ನೂ ಓದಿ: IMA ಬಹುಕೋಟಿ ಅವ್ಯವಹಾರ ಕೇಸ್: ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
(why dont you seize former minister Roshan Baig property questions Karnataka High Court )