ಬೆಂಗಳೂರು: ರಾಜ್ಯದಲ್ಲಿ ವಿಪರೀತ ಚಳಿಯಾಗುತ್ತಿದ್ದು, ಈ ವಿಚಾರದಲ್ಲಿ ಬೆಂಗಳೂರು ದಾಖಲೆಯನ್ನು ಸೃಷ್ಟಿಸಿದೆ. ಕಳೆದ ವಾರ ಭರ್ಜರಿ ಮಳೆಯಾದ ಬೆಂಗಳೂರಿನಲ್ಲಿ ಈಗ ತೀವ್ರ ಚಳಿಯ ಕಾಟ ಆರಂಭವಾಗಿದೆ. ಕಳೆದ 3 ದಿನಗಳಿಂದ ಭಾರೀ ಚಳಿಯ ಅನುಭವ ಆಗುತ್ತಿದ್ದು, ಈ ಅನುಭವವು ಬರೋಬ್ಬರಿ 10 ವರ್ಷಗಳ ಬಳಿಕ ಆರಂಭವಾಗಿದೆ. ಚಳಿ ವಿಪರೀತ ಇರುವುದರಿಂದ ನಗರದ ಜನತೆ ತಲೆಗೆ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಮಾಡುತ್ತಿದ್ದಾರೆ. ಚಳಿ ನಡುವೆಯೂ ಎಂದಿನಂತೆ ಲಾಲ್ ಬಾಗ್ನಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದಲ್ಲದೆ ಬೇರೆ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಉಷ್ಣಾಂಶ ವರದಿಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದು, ದಕ್ಷಿಣ ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನ ಇಳಿಕೆಯಾಗಿದೆ.
ರಾಜ್ಯದ ಶೇ 73ರಷ್ಟು ಭೂ ಭಾಗದಲ್ಲಿ 12 ರಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾದರೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ, ಮಂಡ್ಯ, ಕೊಡಗು ಸೇರಿದಂತೆ ಹಲವೆಡೆ ಕನಿಷ್ಠ 10 ರಿಂದ 13 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಕಸಿತಗೊಂಡಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಳಿಯೊಂದಿಗೆ ಮಜಾ ಮಾಡುತ್ತಿರುವ ಸಿಟಿ ಮಂದಿ
ಬೆಂಗಳೂರಿನಲ್ಲಿ ಚಳಿ ಜೋರಾಗಿಯೇ ಇದ್ದರೂ ಅದರೊಂದಿಗೆ ಆನಂದಿಸುತ್ತಿದ್ದಾರೆ. ಚಳಿ ಇದ್ದರೂ ಈ ವಾತಾವರಣ ತುಂಬಾ ಖುಷಿಯಾಗುತ್ತಿದೆ, ಚಳಿ ಹೆಚ್ಚಿದ್ದರೂ ವಾಕಿಂಗ್ ಬೇಕೇ ಬೇಕು. ದೇಹದ ಫಿಟ್ನೆಸ್ಗೆ ಇದು ಅವಶ್ಯಕ. ಮಾತ್ರವಲ್ಲದೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ಚಳಿಯನ್ನು ತಡೆಯಲು ಸ್ವೆಟರ್, ಸ್ಕಾಫ್, ಶೂಸ್ ಹಾಕೊಂಡು ಬರುತ್ತಿದ್ದೇವೆ ಎಂದು ಮುಂಜಾನೆ ವೇಳೆ ಚಳಿಯಲ್ಲಿ ವಾಕಿಂಗ್ ಮಾಡುತ್ತಿದ್ದವರು ಹೇಳುತ್ತಿದ್ದಾರೆ.
ರಾಜ್ಯಾದಲ್ಲಿ ಸುರಿದ ಭಾರೀ ಮಳೆಯಿಂದ ಜನರು ಅಕ್ಷರಶಃ ನಲುಗಿದ್ದರು. ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ಭಾರೀ ಚಳಿಯಾಗುತ್ತಿದ್ದು, ಮಳೆ ನಂತರ ವಿಪರೀತ ಚಳಿಯನ್ನು ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಪ್ರವಾಹ ಸ್ಥಿತಿ ತಲೆ ದೋರಿ ನಗರವಾಸಿಗಳು ಪರದಾಡುವಂತಾಗಿತ್ತು. ಈ ಸ್ಥಿತಿ ಬೇರೆ ಜಿಲ್ಲೆಗಳಲ್ಲೂ ಸಂಭವಿಸಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 am, Wed, 26 October 22