ಕೋಲಾರ: ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಇತ್ತೀಚೆಗೆ ನಡೆದ ಭಾರೀ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಸರಿಯಾಗಿ ಸಂಬಳ ನೀಡಿಲ್ಲವೆಂದು ಜಿಲ್ಲೆಯ ನರಸಾಪುರದಲ್ಲಿರುವ ತೈವಾನ್ ಮೂಲದ iPhone ತಯಾರಕ ಕಂಪನಿಯಲ್ಲಿ ಕಾರ್ಮಿಕರು ದಾಂಧಲೆ ನಡೆಸಿದ್ದರು. ಈ ವೇಳೆ, ಕಂಪನಿಯ ಆಸ್ತಿಪಾಸ್ತಿಗೆ ಬಹಳಷ್ಟು ಪ್ರಮಾಣದಲ್ಲಿ ಹಾನಿ ಮಾಡಿದ್ದರು.
ಇದೀಗ, ಸಂಸ್ಥೆಯ ಆಡಳಿತ ಮಂಡಳಿ ತನ್ನ ತಪ್ಪೊಪ್ಪಿಕೊಂಡಿದ್ದು ಇಂದು ಬಿಡುಗಡೆ ಮಾಡಿರುವ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಈ ಕುರಿತು ನೌಕರರ ಬಳಿ ಕ್ಷಮೆ ಸಹ ಯಾಚಿಸಿದೆ ಎಂದು ತಿಳಿದುಬಂದಿದೆ. ಜೊತೆಗೆ, ನರಸಾಪುರದಲ್ಲಿರುವ ತನ್ನ ಕಾರ್ಖಾನೆಯನ್ನು ವಿಸ್ತರಿಸುತ್ತಿರುವ ವೇಳೆ ಕಾರ್ಮಿಕರ ವೇತನ ಮತ್ತು ಇತರೆ ವ್ಯವಸ್ಥೆಗಳ ಕಡೆ ಸೂಕ್ತ ಗಮನ ಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಘಟನೆಗೆ ಕಾರಣವಾಯಿತು. ಹಾಗಾಗಿ, ಮುಂಬರುವ ದಿನಗಳಲ್ಲಿ ಇಂಥದ್ದು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.
ಇದಲ್ಲದೆ, ತಾವು ಕೈಗೊಂಡಿರುವ ಶಿಸ್ತುಕ್ರಮದ ಅನುಗುಣವಾಗಿ ವಿಸ್ಟ್ರಾನ್ನ ಭಾರತ ವಿಭಾಗದ ಉಪಾಧ್ಯಕ್ಷರಾದ ವಿನ್ಸೆಂಟ್ ಲೀ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ, ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಲು ಒಂದು 24X7 ಬಹುಭಾಷಾ ಹೆಲ್ಪಲೈನ್ನ ಸಹ ಸ್ಥಾಪಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ರಾಜ್ಯ ಸರ್ಕಾರ ಕೇಂದ್ರ ಕಾರ್ಮಿಕ ಇಲಾಖೆಗೆ ಸಲ್ಲಿಸಿದ ವರದಿಯ ಬೆನ್ನಲ್ಲೇ ವಿಸ್ಟ್ರಾನ್ ಕಂಪನಿಯು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಸರ್ಕಾರ ಸಲ್ಲಿಸಿದ ವರದಿಯಲ್ಲಿ ಕಾರ್ಖಾನೆಯಲ್ಲಿದ್ದ ಅಟೆಂಡೆನ್ಸ್ ಮೆಷಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ, ಇದರಿಂದ ಕಾರ್ಮಿಕರ ಸಂಬಳವನ್ನು ಕಡಿತ ಮಾಡಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಕಾರ್ಮಿಕರ ಕೆಲಸದ ವೇಳೆಯನ್ನು 8 ಗಂಟೆಗಳಿಂದ 12 ಗಂಟೆಗೆ ಹೆಚ್ಚಿಸಲಾಗಿತ್ತು. ಆದ್ದರಿಂದ, ಕಾರ್ಮಿಕರು ಮನನೊಂದು ದಾಂಧಲೆ ನಡೆಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವೇತನ ನೀಡದ್ದಕ್ಕೆ ಕಚೇರಿ ಧ್ವಂಸ: ನರಸಾಪುರದ iPhone ತಯಾರಿಕಾ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ
ಸರ್ಕಾರ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಪರ ನಿಲ್ಲಬೇಕು: ಕಾರ್ಮಿಕ ಸಂಘಟನೆ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ
ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ, ಶೀಘ್ರದಲ್ಲೇ ಕೆಲಸ ಪುನರಾರಂಭ
iPhone ವಿಸ್ಟ್ರಾನ್ ದಾಂಧಲೆ ಪ್ರಕರಣ: ನೆಗಡಿಯೆಂದು ಮೂಗು ಕೊಯ್ದುಕೊಂಡರೇ ಕಾರ್ಮಿಕರು?
Published On - 2:59 pm, Sat, 19 December 20