ಗರಿಗಳ ಪದರು, ಗೆಜ್ಜೆ, ದಪ್ಪ ಮೀಸೆ, ಕೆಂಪು ಬಟ್ಟೆ, ಕತ್ತಿ, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡು ನಗರದ ಬೀದಿಗಳಲ್ಲಿ ಢನ್ಕ ನಕ ಢನ್ಕ ನಕ ಶಬ್ಧಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಮಧ್ಯೆ ಕತ್ತಿ ಬೀಸುತ್ತ ಜನರನ್ನು ಪುಳಕಿತರನ್ನಾಗಿಸುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಪುಳಕಿತಗೊಳಿಸುವ ಜನಪದ ಕಲೆ ಬೇಡರ ವೇಷ
ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಬೀದಿ ಬೀದಿಗಳಲ್ಲಿ ಸಂಚರಿಸುವ ಬೇಡರ ವೇಷಧಾರಿ ನೃತ್ಯ ಮಾಡಿ ತನ್ನ ರೌದ್ರ ರೂಪದ ದರ್ಶನ ಮಾಡಿಸುತ್ತಾರೆ.ಝೇಂಕರಿಸುತ್ತ, ರೌದ್ರ ರೂಪ ತೋರಿಸುವ ಬೇಡ ವೇಷಧಾರಿ ನಗರವಿಡೀ ಸಂಚರಿಸಿ ಗಲ್ಲಿ ಗಲ್ಲಿಯಲ್ಲಿ ನೃತ್ಯ ಮಾಡುವುದು ಕಷ್ಟಕರವಾದ ಕೆಲಸ. ಹೀಗಾಗಿ ಒಂದು ತಿಂಗಳ ಹಿಂದೆಯಿಂದಲೇ ಇದಕ್ಕೆ ತಾಲೀಮು ಶುರುವಾಗುತ್ತೆ.
ಬೇಡರ ಭರಮನು ರೌದ್ರ ರೂಪದಿ ವೀರಾವೇಶದಿಂದ ಸೈನಿಕರ ಬಳಿ ಇದ್ದ ಖಡ್ಗ ಹಿಡಿದು ನನಗೆ ಮೋಸ ಮಾಡಿ ಹಿಡಿದು ಕೊಡ್ತೀಯಾ ನಿನ್ನನ್ನು ಬಿಡಲಾರೆ ಕೊಂದೇ ಹಾಕುವೆ ಎಂದು ಆವೇಶದಲ್ಲಿ ಸೈನಿಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಮುದುಕಿಯ ಕಡೆ ಹೋಗುವ ರೌದ್ರ ರೂಪವೇ ಬೇಡರ ವೇಷ
ಹೋಳಿ ಹಬ್ಬದ ನಾಲ್ಕುದಿನ ಹಿಂದೆಯಿಂದಲೇ ಶುರುವಾಗುವ ಬೇಡರ ಕುಣಿತ ಹೋಳಿ ಹಬ್ಬದಂದು ಬಣ್ಣಗಳ ಹಬ್ಬದ ಮೂಲಕ ಮುತ್ತಾಯಗೊಳುತ್ತೆ.
ಬೇಡರ ವೇಷಕ್ಕೆ ಸಿದ್ಧವಾಗುವುದು ಸುಲಭದ ಕೆಲಸವಲ್ಲ. ಅಪ್ಪಟ ಜನಪದ ಶೈಲಿಯ ಈ ವೇಷಕ್ಕೆ ಬಣ್ಣ ಹಚ್ಚಲು ಮುಸ್ಸಂಜೆಯಿಂದ ರಾತ್ರಿಯ ವರೆಗೂ ಸಮಯ ಬೇಕಾಗುತ್ತೆ. ಬಹಳ ವರ್ಷಗಳಿಂದ ಬಣ್ಣ ಹಚ್ಚುವ ಕಲಾವಿದರು ಮಾತ್ರ ಈ ಕೆಲಸವನ್ನು ಮಾಡಲು ಸಾಧ್ಯ.
ಇಡೀ ದೇಶ ಹೋಳಿ ಹಬ್ಬವನ್ನು ಬಣ್ಣಗಳಿಂದ ಮಿಂದು ಆಚರಿಸಿದ್ರೆ, ಶಿರಸಿಯಲ್ಲಿ ಒಂದುವಾರದ ಹಿಂದೆಯಿಂದಲೇ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತೆ. ಜನರೆಲ್ಲ ಚಂದ್ರನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಕತ್ತಲಾಗುತ್ತಿದ್ದಂತೆ ಬೇರೆಯ ಪ್ರಪಂಚವೇ ತೆರೆದುಕೊಳ್ಳುತ್ತೆ. ಬೇಡರ ವೇಷಧಾರಿಯ ರೌದ್ರ ನರ್ತನ ನಗರವನ್ನು ರಂಗುಗೊಳಿಸುತ್ತೆ.