ಉತ್ತದೆ ಬಿತ್ತದೆ ಬೆಳೆಯುತ್ತೆ ಭತ್ತ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಜಾಗ ಯಾವುದು ಗೊತ್ತಾ?

ಸೂಗೂರ ಕೆ. ಗ್ರಾಮಕ್ಕೆ ಪುರಾತನ ಐತಿಹ್ಯವಿದೆ. ಇದು ಸ್ವತಃ ವೆಂಕಟೇಶ್ವರ ನೆಲೆಸಿರುವ ತಾಣ. ಶ್ರೀನಿವಾಸ ತನ್ನ ಮದುವೆಗಾಗಿ ಈ ಗ್ರಾಮದ ಆಗರ್ಭ ಶ್ರೀಮಂತ ಕುಬೇರನ ಬಳಿ ಸ್ವರ್ಣಗಿರಿ ಬೆಟ್ಟದಲ್ಲಿರುವ ಸ್ವರ್ಣಗಿರಿಯನ್ನು ಸಾಲವಾಗಿ ಪಡೆದನೆಂದು ಹೇಳಲಾಗಿದ್ದು, ಈ ಸ್ವರ್ಣಗಿರಿಯೇ ಇಂದು ಬಿತ್ತದೇ ಭತ್ತ ಬೆಳೆಯುವ ಅಚ್ಚರಿಯ ಸ್ಥಳವಾಗಿದೆ ಎಂದು ತಿಳಿದು ಬಂದಿದೆ.

ಉತ್ತದೆ ಬಿತ್ತದೆ ಬೆಳೆಯುತ್ತೆ ಭತ್ತ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಜಾಗ ಯಾವುದು ಗೊತ್ತಾ?
ಸ್ವರ್ಣಗಿರಿ ಬೆಟ್ಟದ ಮೇಲೆ ಬೆಳೆಯುವ ಭತ್ತ
Edited By:

Updated on: Dec 26, 2020 | 1:23 PM

ಕಲಬುರಗಿ: ಉತ್ತಿ ಬಿತ್ತಿದರೂ ಒಮ್ಮೊಮ್ಮೆ ಬೆಳೆ ಬರುವುದು ಕಷ್ಟವಾಗುತ್ತಿದೆ. ಆದರೆ, ಅದೊಂದು ಜಾಗದಲ್ಲಿ ಮಾತ್ರ ಯಾರು ಉತ್ತದೆ, ಬಿತ್ತದೆ ಇದ್ದರೂ ಕೂಡ ಪ್ರತಿ ವರ್ಷ ಭತ್ತ ಬೆಳೆಯುತ್ತದೆ. ಗೊಬ್ಬರ ಹಾಕುವ ಅವಶ್ಯಕತೆ ಕೂಡ ಇಲ್ಲ! ಕಳೆ ತಗೆಯುವ ಗೊಡವೆ ಇಲ್ಲ. ಮಳೆ ಬರಲಿ, ಬಾರದೇ ಇರಲಿ. ಅಲ್ಲಿ ಮಾತ್ರ ಪ್ರತಿ ವರ್ಷ ಭತ್ತ ಬೆಳೆಯುತ್ತದೆ. ಇಂತಹದೊಂದು ಅಚ್ಚರಿಯ ಜಾಗವಿರುವುದು ಎಲ್ಲಿ ಅಂತೀರಾ ನೀವೆ ನೋಡಿ.

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಸೂಗೂರು ಕೆ ಗ್ರಾಮದಲ್ಲಿ ವೆಂಕಟೇಶ್ವರ ದೇವಸ್ಥಾನವಿದೆ. ಈ ಭಾಗದ ಜನರು ಸೂಗೂರು ಕೆ ಗ್ರಾಮದಲ್ಲಿರುವ ವೆಂಕಟೇಶ್ವರನ ದೇವಸ್ಥಾನವನ್ನು ಮಿನಿ ತಿರುಪತಿ ಎಂದೇ ಕರೆಯುತ್ತಾರೆ. ತಿರುಪತಿಗೆ ಹೋಗುವುದಕ್ಕೆ ಆಗದ ಹೆಚ್ಚಿನ ಜನರು ಈ ಮಿನಿ ತಿರುಪತಿಗೆ ಹೋಗಿ ಅಲ್ಲಿನ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಹೀಗಾಗಿ ಹೆಚ್ಚಿನ ಜನರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ ಈ ಸೂಗೂರು ಕೆ ಗ್ರಾಮದಲ್ಲಿರುವ ವೆಂಕಟೇಶ್ವರ ದೇವಸ್ಥಾನ. ಅದರಲ್ಲೂ ವೈಕಂಠ ಏಕಾದಶಿ ದಿನದಂದು ಕಲಬುರಗಿ ಜಿಲ್ಲೆ ಮಾತ್ರವಲ್ಲಾ, ರಾಜ್ಯದ ಬೇರೆ ಭಾಗಗಳಿಂದ ಕೂಡ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ.

ಈ ದೇವಸ್ಥಾನ ಎಷ್ಟು ಹೆಸರುವಾಸಿಯಾಗಿದೆಯೋ ಅದೇ ರೀತಿ ಈ ದೇವಸ್ಥಾನದ ಸಮೀಪ ಗುಡ್ಡದಲ್ಲಿ ಬೆಳೆಯುವ ಭತ್ತ ಕೂಡ ಅಷ್ಟೇ ಪ್ರಸಿದ್ಧಿ  ಪಡೆದಿದೆ. ವೆಂಕಟೇಶ್ವರನ ದರ್ಶನಕ್ಕೆ ಹೋಗುವವರು ಗುಡ್ಡದ ಮೇಲಿರುವ ಭತ್ತವನ್ನು ನೋಡಿ ಬರುವುದು ವಾಡಿಕೆಯಾಗಿದೆ. ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿ ಗುಡ್ಡದ ಮೇಲಿರುವ 5 ಗುಂಟೆ ಜಾಗದಲ್ಲಿ ಭತ್ತ ಬೆಳೆಯುತ್ತಿದ್ದು, ವಿಶೇಷವೆಂದರೆ ಗುಡ್ಡದ ಮೇಲಿರುವ ಈ ಭತ್ತವನ್ನು ಯಾರು ಬೆಳೆಯುವುದಿಲ್ಲ. ಅದು ತನ್ನಿಂದ ತಾನೆ ಬೆಳೆಯುತ್ತದೆ ಎನ್ನುವುದೇ ಇಲ್ಲಿನ ಅಚ್ಚರಿಯ ವಿಷಯವಾಗಿದೆ.

ಸ್ವರ್ಣಗಿರಿ ಬೆಟ್ಟದ ಭತ್ತ

ಸ್ವರ್ಣಗಿರಿ ಬೆಟ್ಟದಲ್ಲಿ ಅಚ್ಚರಿಯ ಭತ್ತ:
ಊರಿನ ಹೊರವಲಯದ ಸ್ವರ್ಣಗಿರಿ ಬೆಟ್ಟದಲ್ಲಿ ಕಲ್ಲು ಬಂಡೆಗಳ ನಡುವೆ ಪ್ರತಿ ವರ್ಷ ಭತ್ತ ಬೆಳೆಯುತ್ತದೆ. ಗುಡ್ಡದ ಮೇಲೆ ಹೋಗಿ ಯಾರೂ ಭತ್ತವನ್ನು ಬಿತ್ತುವುದಿಲ್ಲ, ಅದಕ್ಕೆ ಗೊಬ್ಬರ ಹಾಕುವುದಿಲ್ಲ, ನೀರುಣಿಸುವುದಿಲ್ಲ, ಕಳೆ ತಗೆಯುವುದಿಲ್ಲ, ಆದರೂ ಕೂಡ ಪ್ರತಿ ವರ್ಷ ಉತ್ತಮ ಭತ್ತ ಬೆಳೆಯುತ್ತದೆ. ನಂಬಲು ಕಷ್ಟವಾದರೂ ಇದು ಅಪ್ಪಟ ಸತ್ಯ. ಇದಕ್ಕೆಲ್ಲಾ ಕಾರಣ ಗ್ರಾಮದಲ್ಲಿರುವ 650 ವರ್ಷಗಳಷ್ಟು ಹಳೆಯದಾದ ಶ್ರೀ ವೆಂಕಟೇಶ್ವರ ದೇವಸ್ಥಾನ. ಇದು ವೆಂಕಟೇಶ್ವರನ ಮಹಾತ್ಮೆ ಎನ್ನುತ್ತಾರೆ ಗ್ರಾಮಸ್ಥರು.

ಶ್ರೀ ವೆಂಕಟೇಶ್ವರ ದೇವಸ್ಥಾನ

ಸೂಗೂರ ಕೆ. ಗ್ರಾಮಕ್ಕೆ ಪುರಾತನ ಐತಿಹ್ಯವಿದೆ. ಇದು ಸ್ವತಃ ವೆಂಕಟೇಶ್ವರ ನೆಲೆಸಿರುವ ತಾಣ. ಶ್ರೀನಿವಾಸ ತನ್ನ ಮದುವೆಗಾಗಿ ಈ ಗ್ರಾಮದ ಆಗರ್ಭ ಶ್ರೀಮಂತ ಕುಬೇರನ ಬಳಿ ಸ್ವರ್ಣಗಿರಿ ಬೆಟ್ಟದಲ್ಲಿರುವ ಸ್ವರ್ಣಗಿರಿಯನ್ನು ಸಾಲವಾಗಿ ಪಡೆದನೆಂದು ಹೇಳಲಾಗಿದ್ದು, ಈ ಸ್ವರ್ಣಗಿರಿಯೇ ಇಂದು ಬಿತ್ತದೇ ಭತ್ತ ಬೆಳೆಯುವ ಅಚ್ಚರಿಯ ಸ್ಥಳವಾಗಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಇನ್ನು ಕೆಲವರು ವೆಂಕಟೇಶ್ವರ ಬಂದು ಇಲ್ಲಿ ನೆಲಸಿದ್ದ, ಕೆಲವು ಸಾಧು ಸಂತರು ಇಲ್ಲಿ ಅನುಷ್ಟಾನ ಕೈಗೊಂಡಿದ್ದು, ಅವರ ಆಹಾರಕ್ಕಾಗಿ ವಿಷ್ಣು ವರವನ್ನು ನೀಡಿದ್ದ, ಅದೇ ಅಚ್ಚರಿಯ ರೀತಿಯಲ್ಲಿ ಬೆಳೆದ ಭತ್ತ ಎನ್ನುವ ನಾನಾ ಕಥೆಗಳನ್ನು ಗ್ರಾಮದ ಜನರು ಹೇಳುತ್ತಾರೆ. ಇಲ್ಲಿ ಬೆಳೆಯುವ ಅಕ್ಕಿಯ ಬಣ್ಣ ಸಹ ವಿಭಿನ್ನವಾಗಿದ್ದು, ಈ ಅಕ್ಕಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನಲಾಗಿದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಪ್ರತಿ ಅಕ್ಕಿಯ ಕಾಳಿನ ಮೇಲೆ 3 ಗೆರೆಗಳು ಸ್ಪಷ್ಟವಾಗಿ ಕಾಣುವಂತಿರುತ್ತವೆ. ಇದು ವೆಂಕಟೇಶ್ವರ ಗುರುತು ಎನ್ನುವುದು ಭಕ್ತರ ನಂಬಿಕೆ.

ಇತಿಹಾಸ ಹೊಂದಿರುವ ಭತ್ತ

ಕೇವಲ ಪ್ರಸಾದಕ್ಕಾಗಿ ಮಾತ್ರ ಈ ಭತ್ತದ ಬಳಕೆ:
ಇನ್ನು ಸ್ವರ್ಣಗಿರಿ ಬೆಟ್ಟದ ಮೇಲೆ ಬೆಳೆಯುವ ಭತ್ತವನ್ನು ಯಾರು ಬಳಸುವುದಿಲ್ಲ. ಆದರೆ ದೇವಸ್ಥಾನದ ಸಿಬ್ಬಂದಿ ಈ ಭತ್ತವನ್ನು ಕಟಾವು ಮಾಡಿ ಪ್ರತಿ ವರ್ಷ ನಡೆಯುವ ವೈಕುಂಠ ಏಕಾದಶಿ ದಿನದಂದು ಅನ್ನವನ್ನು ಮಾಡಿ ವೆಂಕಟೇಶ್ವರನಿಗೆ ನೈವೈದ್ಯ ಸಲ್ಲಿಸುತ್ತಾರೆ. ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಅದನ್ನು ನೀಡಲಾಗುತ್ತದೆ. ಹಾಗಾಗಿ ಯಾರೊಬ್ಬರೂ ಈ ಭತ್ತವನ್ನು ಊಟಕ್ಕಾಗಿ ಬಳಸುವುದಿಲ್ಲ. ಬೇರೆ ದಿನದಲ್ಲಿ ಕೂಡ ಈ ಭತ್ತವನ್ನು ಕಟಾವು ಮಾಡುವುದಿಲ್ಲ. ವಿಶೇಷವೆಂದರೆ ಇಲ್ಲಿ ಬೆಳೆಯುವ ಭತ್ತ ವೈಕುಂಠ ಏಕಾದಶಿಗೆ ಮಾತ್ರ ಬಳಕೆ ಮಾಡಲಾಗುತ್ತದೆ.

ಭತ್ತ ಬೆಳೆ

ವೆಂಕಟೇಶ್ವರ ಈ ಗ್ರಾಮಕ್ಕೆ ಬಂದು ಕುಬೇರನಿಂದ ಪಡೆದ ಸಾಲವನ್ನು ಮರಳಿಸುತ್ತಾನೆ ಎನ್ನುವ ಅಚಲ ನಂಬಿಕೆ ಶ್ರೀನಿವಾಸ ಭಕ್ತರಲ್ಲಿದ್ದು, ಹೀಗಾಗಿ ಸೂಗೂರು ಕೆ ಗ್ರಾಮದಲ್ಲಿರುವ ಗುಡ್ಡದ ಮೇಲೆ ಬೆಳೆಯುವ ಭತ್ತ ವೆಂಕಟೇಶ್ವರನ ಪ್ರಸಾದವಾಗಿದೆ. ಬಿತ್ತದೇ ಭತ್ತ ಬೆಳೆಯುವುದು ಅಚ್ಚರಿಯಾದರು ಸತ್ಯ ಎಂದು ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣದಾಸ್ ಮಹರಾಜ್ ಹೇಳಿದ್ದಾರೆ.

ಭತ್ತದ ಹೊಲ

ಗುಡ್ಡದ ಮೇಲಿದೆ ಹೃದಯಾಕಾರದ ಹಸಿರು ಗದ್ದೆ.. ಅದೀಗ ಪ್ರವಾಸಿಗರ ‘ಹಾರ್ಟ್’ ಸ್ಪಾಟ್! ಎಲ್ಲಿ?