AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂದಾವರದಲ್ಲಿ 15-16 ನೇ ಶತಮಾನದ ಶಾಸನ ಕಲ್ಲು ಪತ್ತೆ; ಅಧ್ಯಯನದಲ್ಲಿ ತೊಡಗಿರುವ ಇತಿಹಾಸ ತಜ್ಞರು

ಕಂದಾವರ ಪರಿಸರದಲ್ಲಿ ವಿಜಯನಗರ ಕಾಲದ ಅಧಿಕ ಶಾಸನಗಳಿದ್ದು, ಸಂರಕ್ಷಿಸಬೇಕಾದ ಅಗತ್ಯ ಇದೆ. ಹಿಂದೆ ಈ ಊರಿನ ಸ್ವಲ್ಪ ದೂರದಲ್ಲಿಯೇ ವಾಮನ ಮುದ್ರಿಕೆ ಕಲ್ಲು ಹಾಗೂ ವಿಜಯನಗರ ಕಾಲದ ಶಾಸನ ಕಲ್ಲುಗಳನ್ನು ಪ್ರದೀಪ್ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದರು. ಉಡುಪಿ ಜಿಲ್ಲೆಯ ಬಾರ್ಕೂರು ತುಳುನಾಡಿನ‌ ರಾಜಧಾನಿಯಾಗಿತ್ತು ಅದೇ ರೀತಿ ಅಂದಿನ ಕಾಲದ ಬೃಹತ್ ವಾಣಿಜ್ಯ ವಹಿವಾಟಿನ ಪ್ರದೇಶವಾಗಿತ್ತು.

ಕಂದಾವರದಲ್ಲಿ 15-16 ನೇ ಶತಮಾನದ ಶಾಸನ ಕಲ್ಲು ಪತ್ತೆ; ಅಧ್ಯಯನದಲ್ಲಿ ತೊಡಗಿರುವ ಇತಿಹಾಸ ತಜ್ಞರು
ವಿಜಯನಗರ ಸಾಮ್ರಾಜ್ಯದ ಶಾಸನ ಕಲ್ಲು
preethi shettigar
| Updated By: Lakshmi Hegde|

Updated on:Dec 26, 2020 | 6:33 PM

Share

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಕಾಂತಾವರ ಶ್ರೀ ವೀರಾಂಜನೇಯ ದೇವಾಲಯದ ಅನತಿ ದೂರದಲ್ಲಿರುವ , ಜನಾರ್ದನ ಸೇರೆಗಾರ್​​ ಎಂಬುವರಿಗೆ ಸೇರಿದ ಗದ್ದೆಯಲ್ಲಿ ಕ್ರಿ.15-16 ನೇ ಶತಮಾನದ ವಿಜಯನಗರ ಕಾಲದ ಶಾಸನ ಕಲ್ಲು ಪತ್ತೆಯಾಗಿದೆ.

ಪತ್ತೆಯಾದ ಶಾಸನದಲ್ಲಿ ಸೂರ್ಯ, ಚಂದ್ರರ ಚಿತ್ರ ಇರುವುದರೊಂದಿಗೆ, ಸೂರ್ಯಚಂದ್ರ ಇರುವ ತನಕ ಅಜರಾಮರವಾಗಿರಲಿ ಎನ್ನುವ ಸಂದೇಶ ಕೂಡ ಬರೆಯಲಾಗಿದೆ. ಎಡ ಭಾಗದಲ್ಲಿ ನಂದಿ ವಿಗ್ರಹ ಅದರ ಜೊತೆಗೆ ಶಿವಲಿಂಗವೂ ಇದೆ. ಶಿವಲಿಂಗದ ಬಲ ಭಾಗದಲ್ಲಿ ದೀಪಸ್ತಂಭವಿದ್ದು, ಇದರೊಂದಿಗೆ ರಾಜ ಶಾಸನವೆಂದು ತಿಳಿಸಲು ಖಡ್ಗವಿರುವುದು ಕಂಡುಬಂದಿದೆ. ಆದರೆ ಶಾಸನದ ಪಠ್ಯ ಅಸ್ಪಷ್ಟವಾಗಿ ಕಾಣುತ್ತಿದೆ.

ಈ ಶಾಸನ ಕ್ರಿ.15-16 ನೇ ಶತಮಾನದ ವಿಜಯನಗರ ಕಾಲದ (ಸುಮಾರು 400-500 ವರ್ಷದ ಶಾಸನ) ಶಾಸನವೆಂದು ತಿಳಿದುಬಂದಿದೆ. ಇದನ್ನು ಪ್ರದೀಪ್ ಕುಮಾರ್ ಬಸ್ರೂರು, ಇತಿಹಾಸ ಸಂಶೋಧಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಲಾಗಿದ್ದು, ಇವರಿಗೆ ಭರತ್ ಗುಡಿಗಾರ, ಜನಾರ್ದನ್ ಸೇರೆಗಾರ್ ಸಹಕಾರ ನೀಡಿದರು. ಶಾಸನದ ಬಗ್ಗೆ ಅಧ್ಯಯನವಾಗುತ್ತಿದ್ದು, ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

                                          ಶಾಸನ ಕಲ್ಲು

ಕಂದಾವರ ಪರಿಸರದಲ್ಲಿ ವಿಜಯನಗರ ಕಾಲದ ಅಧಿಕ ಶಾಸನಗಳಿದ್ದು, ಸಂರಕ್ಷಿಸಬೇಕಾದ ಅಗತ್ಯ ಇದೆ.  ಹಿಂದೆ ಈ ಊರಿನ ಸ್ವಲ್ಪ ದೂರದಲ್ಲಿಯೇ ವಾಮನ ಮುದ್ರಿಕೆ ಕಲ್ಲು ಹಾಗೂ ವಿಜಯನಗರ ಕಾಲದ ಶಾಸನ ಕಲ್ಲುಗಳನ್ನು ಪ್ರದೀಪ್ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದರು. ಉಡುಪಿ ಜಿಲ್ಲೆಯ ಬಾರ್ಕೂರು ತುಳುನಾಡಿನ‌ ರಾಜಧಾನಿಯಾಗಿತ್ತು. ಅದೇ ರೀತಿ ಅಂದಿನ ಕಾಲದ ಬೃಹತ್ ವಾಣಿಜ್ಯ ವಹಿವಾಟಿನ ಪ್ರದೇಶವಾಗಿತ್ತು. ಒಟ್ಟಾರೆಯಾಗಿ ಬಾರ್ಕೂರು, ಬಸ್ರೂರು, ಕುಂದಾಪುರ ಚಾರಿತ್ರಿಕವಾಗಿ ಮಹತ್ವ ಉಳ್ಳ ಪ್ರದೇಶಗಳಾಗಿದ್ದು, ಈ ಪ್ರದೇಶಗಳಿಗೆ ಉಪನಗರಗಳಾಗಿ ಕಂದಾವರ, ಸಾಂತಾವರ ಊರುಗಳು ಮಹತ್ವ ಪಡೆದಿವೆ.

ಈ ಕಾರಣದಿಂದ ಇಲ್ಲಿ ದೊರೆತಿರುವ ಶಾಸನಗಳು ಈ ಪ್ರದೇಶ ವಿಜಯನಗರ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು ಎಂಬುದನ್ನು ಸಾರುತ್ತವೆ. ಶಾಸನದಲ್ಲಿ ಅಕ್ಷರಗಳು ಸ್ಪಷ್ಟವಾಗಿರಲಿಲ್ಲ. ಅಧ್ಯಯನಕ್ಕಾಗಿ ಶಾಸನವನ್ನು ಮರು ಪರಿಶೀಲನೆ ನಡೆಸಿದಾಗ ಮಹತ್ವದ ಮಾಹಿತಿ ದೊರಕಿದ್ದು, ಸೂರ್ಯಚಂದ್ರ, ಶಿವಲಿಂಗ, ಖಡ್ಗ ಪತ್ತೆಯಾಗಿವೆ. ರಾಜ ಶಾಸನದಲ್ಲಿ ಖಡ್ಗ ಸಾಮಾನ್ಯವಾಗಿ ಕಂಡು ಬರುತ್ತದೆ‌‌ ಹಾಗೂ ವಿಜಯನಗರ ಕಾಲದ ಶಾಸನ ಎಂಬುದಕ್ಕೆ ಪೂರಕವಾಗಿ ಕೆಲವೊಂದು ಮಾಹಿತಿಗಳು ಶಾಸನದಲ್ಲಿ ದೊರೆಯುತ್ತದೆ ಎಂದು ಇತಿಹಾಸ ಸಂಶೋಧಕ ಪ್ರದೀಪ್ ಹೇಳಿದರು.

ಆನೆಗೊಂದಿಯಲ್ಲಿ ಮೊಳಗಿತು ಜಾನಪದ ಕಹಳೆ, ಐತಿಹಾಸಿಕ ಉತ್ಸವಕ್ಕೆ ಅದ್ಧೂರಿ ಚಾಲನೆ

Published On - 6:32 pm, Sat, 26 December 20