ಮಂಡ್ಯ: ಮಹಾಮಾರಿ ಕೊರೊನಾ ನಿರ್ವಾಹಣೆಯಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಸರಿಯಾದ ಬೆಡ್ ವ್ಯವಸ್ಥೆ ಇಲ್ಲ. ಆಕ್ಸಿಜನ್ ಕೊರತೆ ಇತ್ಯಾದಿ. ಇನ್ನೂ ಅನೇಕ ಜಿಲ್ಲಾಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನು ನೋಡಲು ವೈದ್ಯರೇ ಆಸ್ಪತ್ರೆಗೆ ಹೋಗುತ್ತಿಲ್ಲ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಊಟ ನೀಡುವವರಿಲ್ಲ ಇಂತಹ ಸ್ಥಿತಿ ಸದ್ಯ ರಾಜ್ಯದಲ್ಲಿ ಎದ್ದಿದೆ. ಇದರ ನಡುವೆ ಮತ್ತೊಂದು ನೋವಿನ ಸಂಗತಿ ಎಂದರೆ ಕೊರೊನಾ ಸೋಂಕಿತ ವೃದ್ಧೆ ಕೊವಿಡ್ ಚಿಕಿತ್ಸಾ ಕೇಂದ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಆಸ್ಪತ್ರೆಯ ಕೊವಿಡ್ ಚಿಕಿತ್ಸಾ ಕೇಂದ್ರದಲ್ಲಿ 55 ವರ್ಷದ ವೃದ್ದೆ ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ತಾಲೂಕು ಬೇಲೂರು ಗ್ರಾಮದ ಗೌರಮ್ಮ ಆಸ್ಪತ್ರೆಯ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ.
ಎರಡು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಗೌರಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ ಮೊಬೈಲ್ನಲ್ಲಿ ಯಾರ ಜೊತೆನೋ ಮಾತನಾಡುತ್ತ ಜಗಳವಾಡಿಕೊಂಡಿದ್ದ ಗೌರಮ್ಮ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಗೌರಮ್ಮರ ಆತ್ಮಹತ್ಯೆಯಿಂದಾಗಿ ಆಸ್ಪತ್ರೆಯಲ್ಲಿನ ಸೋಂಕಿತರು ಭಯಗೊಂಡಿದ್ದಾರೆ. ಇದೇ ಕೇಂದ್ರದಲ್ಲಿ 85 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಮದ್ದೂರು ಪೊಲೀಸರು, ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ 24 ಸೋಂಕಿತರ ಸಾವು ಪ್ರಕರಣ; ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್