ಬಂಜಾರ ಸಮುದಾಯ ಉಡುಪಿನ ಉಳಿವಿಗೆ ಶ್ರಮಿಸುತ್ತಿರುವ ಬಾಗಲಕೋಟೆ ಮಹಿಳೆಯರು

|

Updated on: Mar 18, 2021 | 12:20 PM

ಬಂಜಾರಾ ಸಮುದಾಯದ ಉಡುಗೆ ಎಂದರೆ ವಿಭಿನ್ನವಾಗಿರುತ್ತದೆ. ಜೊತೆಗೆ ಹೆಚ್ಚು ಆಕರ್ಷಿತವಾಗಿರುತ್ತದೆ. ಮಹಿಳೆಯರ ಅಂದಕ್ಕೆ ಮತ್ತಷ್ಟು ಕಳೆ‌ ನೀಡುವ ಲಂಬಾಣಿ ಉಡುಗೆಗಳಲ್ಲಿ ನಾರಿಯರನ್ನು ನೋಡುವುದೇ ಚೆಂದ. ಲಂಬಾಣಿ ವೇಷದಲ್ಲಿ ಹೆಣ್ಣಿನ ಸೌಂದರ್ಯ ಇಮ್ಮಡಿಯಾಗುವ ಮೂಲಕ ನೋಡುಗರನ್ನು ಸೆಳೆಯುತ್ತದೆ.

ಬಂಜಾರ ಸಮುದಾಯ ಉಡುಪಿನ ಉಳಿವಿಗೆ ಶ್ರಮಿಸುತ್ತಿರುವ ಬಾಗಲಕೋಟೆ ಮಹಿಳೆಯರು
ಲಂಬಾಣಿ ಉಡುಗೆ ತೊಟ್ಟ ಹುಡುಗಿ
Follow us on

ಬಾಗಲಕೋಟೆ: ನಮ್ಮ ದೇಶದಲ್ಲಿ ಒಂದೊಂದು ಪ್ರದೇಶದ ಆಚಾರ ವಿಚಾರಗಳು ಬೇರೆ ಬೇರೆ ಇರುತ್ತವೆ. ಅದಕ್ಕೆ ತಕ್ಕಂತೆ ಉಡುಗೆ ತೊಡುಗೆಗಳು ಕೂಡ ವಿಭಿನ್ನವಾಗಿರುತ್ತವೆ. ಇನ್ನು ಉಡುಗೆಯಲ್ಲಿ ಬಂಜಾರಾ ಸಮುದಾಯದ ಉಡುಗೆ ಅಂತೂ ನೋಡೋದೆ ಚೆಂದ. ಆದರೆ ಅವುಗಳನ್ನು ಧರಿಸುವವರ ಸಂಖ್ಯೆ ಇತ್ತೀಚೆಗೆ ತೀರಾ ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲೂ ಮಹಿಳಾ ಸಂಘವೊಂದು ಬಂಜಾರಾ ಸಮುದಾಯದ ಕಲರ್ ಫುಲ್ ಉಡುಗೆಯ ಉಳಿವಿಗೆ ಪಣ ತೊಟ್ಟು ನಿಂತಿದೆ.

ಬಂಜಾರಾ ಸಮುದಾಯದ ಉಡುಗೆ ಎಂದರೆ ವಿಭಿನ್ನವಾಗಿರುತ್ತದೆ. ಜೊತೆಗೆ ಹೆಚ್ಚು ಆಕರ್ಷಿತವಾಗಿರುತ್ತದೆ. ಮಹಿಳೆಯರ ಅಂದಕ್ಕೆ ಮತ್ತಷ್ಟು ಕಳೆ‌ ನೀಡುವ ಲಂಬಾಣಿ ಉಡುಗೆಗಳಲ್ಲಿ ನಾರಿಯರನ್ನು ನೋಡುವುದೇ ಚೆಂದ. ಲಂಬಾಣಿ ವೇಷದಲ್ಲಿ ಹೆಣ್ಣಿನ ಸೌಂದರ್ಯ ಇಮ್ಮಡಿಯಾಗುವ ಮೂಲಕ ನೋಡುಗರನ್ನು ಸೆಳೆಯುತ್ತದೆ. ಆದರೆ ಇಂತಹ ಲಂಬಾಣಿ ಉಡುಗೆಗಳು ಕೂಡ ಇತ್ತೀಚೆಗೆ ಅಪರೂಪವಾಗುತ್ತಿವೆ. ಅಲ್ಲೋ ಇಲ್ಲೋ ಹಿರಿಯ ಮಹಿಳೆಯರು‌ ಮಾತ್ರ ಇಂದು ಲಂಬಾಣಿ ಉಡುಗೆ ತೊಡುತ್ತಾರೆ. ಉಳಿದಂತೆ ಅವುಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿವೆ. ಈ ಮಧ್ಯೆ ಲಂಬಾಣಿ ಸಮುದಾಯದ ಉಡುಗೆ ತೊಡುಗೆ ಉಳಿವಿಗಾಗಿ ಉಮಿಬಾಯಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಲಂಬಾಣಿ ಉಡುಗೆ ತಯಾರಿಸಿ ಶ್ರಮಿಸುತ್ತಿದ್ದಾರೆ.

ಮಹಿಳೆಯರ ಮನ ಪರಿವರ್ತನೆ
ಉಮಿಬಾಯಿ ಸ್ತ್ರೀ ಶಕ್ತಿ ಸಂಘದಲ್ಲಿ ಒಟ್ಟು ಹತ್ತು ಜನ‌ ಮಹಿಳೆಯರಿದ್ದು, ಮುಖ್ಯಸ್ಥರಾಗಿ ಮಂಜುಳಾ ನಾಯಕ್, ಭಾಗ್ಯಶ್ರಿ ಪವಾರ ಎಲ್ಲರನ್ನೂ ಕಟ್ಟಿಕೊಂಡು ಸಂಘ ಮುನ್ನಡೆಸುತ್ತಿದ್ದಾರೆ. ಸಂಘದಲ್ಲಿ ಕೆಲ ಮಹಿಳೆಯರು ಮೊದಲು ಹೊಟ್ಟೆಪಾಡಿಗಾಗಿ ಸಾರಾಯಿ ತಯಾರಿಕೆ ಕೆಲಸ ಮಾಡುತ್ತಿದ್ದರು. ಆದರೆ ಆರು ವರ್ಷದ ಹಿಂದೆ ಅವರ‌ ಮನ ಪರಿವರ್ತನೆ ಮಾಡಿ ಉಮಿಬಾಯಿ ಸಂಘದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮಹಿಳೆಯರು ಕಳ್ಳಬಟ್ಟಿ ತಯಾರಿಸುವುದನ್ನು ಬಿಟ್ಟು ಸ್ವಸಹಾಯ ಸಂಘದ ಮೂಲಕ ಹಣ ಉಳಿತಾಯದ ಜೊತೆಗೆ ತಮ್ಮ ಮೂಲ‌ ಉಡುಪು ತಯಾರಿಕೆ ಮಾಡುವ‌ ಮೂಲಕ ಜೀವನ ಕಂಡುಕೊಳ್ಳುತ್ತಿದ್ದಾರೆ. ಈ ಉಡುಪು ತಯಾರಿಸಲು ವಿಜಯಪುರದಿಂದ ಶುದ್ಧ ಕಾಟನ್ ಬಟ್ಟೆ ತರುತ್ತಾರೆ. ಆಲಮಟ್ಟಿ, ವಿಜಯಪುರ, ಬಾಗಲಕೋಟೆಯ ವಿವಿಧ ಅಂಗಡಿಗಳು, ಜಾತ್ರೆಗಳಿಗೆ ಹೋಗಿ ಬಟ್ಟೆ ತಯಾರಿಸಲು ಕಚ್ಚಾವಸ್ತುಗಳಾದ ಗಾಜು, ಟಿಕಳಿ, ಮಣಿ ಲೇಸ್ ಕವಡೆ ಖರೀದಿಸುತ್ತಾರೆ. ಬಳಿಕ ಮನೆಯಲ್ಲಿ ಸುಂದರ ಲಂಬಾಣಿ ಉಡುಗೆ ತಯಾರಿಸುತ್ತಾರೆ. ಇದನ್ನು ಪಾರ್ಟ್ ಟೈಮ್ ಎಂಬಂತೆ ಕೆಲಸ‌ ಮಾಡುತ್ತಿದ್ದು, ಎಲ್ಲ‌ ಮಹಿಳೆಯರು ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ಲಂಬಾಣಿ ಉಡುಗೆಯನ್ನು ತಯಾರಿಸುತ್ತಿರುವ ಮಹಿಳೆ

ಡಿಸೈನ್​ಗೆ ತಕ್ಕಂತೆ ಉಡುಗೆಗೆ ದರ ನಿಗದಿ ಮಾಡಲಾಗುತ್ತದೆ

ಒಂದು ಜೋಡಿ ಉಡುಗೆಗೆ ಹದಿನೈದು ಸಾವಿರ. ಸಣ್ಣ ಮಕ್ಕಳ ಉಡುಗೆಗೆ ಹತ್ತು ಸಾವಿರ ಬೆಲೆ ಇದ್ದು, ಡಿಜೈನ್ಗೆ ತಕ್ಕಂತೆ ಬೆಲೆಯಲ್ಲಿ ಏರಿಳಿತದ ಮೂಲಕ ಗ್ರಾಹಕರ ಕೈ ಸೇರುತ್ತವೆ ಈ ಉಡುಗೆಗಳು. ಒಂದು ಗಾಗ್ರಾ ತಯಾರಿಸುವುದಕ್ಕೆ ಒಬ್ಬ ಮಹಿಳೆಗೆ ಒಂದುವರೆ ತಿಂಗಳು ಬೇಕಾಗುತ್ತದೆ. ಒಂದು ಡ್ರೆಸ್ನಿಂದ ಇವರಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಉಳಿಯುತ್ತದೆ‌. ಇವುಗಳನ್ನು ಜಿಲ್ಲೆ, ಪರ ಜಿಲ್ಲೆ, ಗೋವಾ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ವಿವಿಧ ಕಡೆ ಮಾರಾಟ ಮಾಡುತ್ತಾರೆ. ಜೊತೆಗೆ ಸರ್ಕಾರಿ ಖಾಸಗಿ ಸಂಸ್ಥೆಗಳ ಮೂಲಕ ನಡೆಯುವ ವಸ್ತು ಪ್ರದರ್ಶನ, ಮಾರಾಟದಲ್ಲೂ ಇವರು ಬಟ್ಟೆಯನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಾರೆ. ಈ‌ ಮೂಲಕ ತಮ್ಮ ಸಾಂಪ್ರದಾಯಿಕ ಉಡುಪನ್ನು ಉಳಿಸಿ ಬೆಳೆಸುವ ಜೊತೆಗೆ ಆರ್ಥಿಕವಾಗಿ ಸದೃಢರಾಗುತ್ತಾ ಸಾಗುತ್ತಿದ್ದು, ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಉಡುಗೆಯನ್ನು ಗೋವಾ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ವಿವಿಧ ಕಡೆ ಮಾರಾಟ ಮಾಡುತ್ತಾರೆ

ಸಣ್ಣ ಮಕ್ಕಳ ಉಡುಗೆಗೆ ಹತ್ತು ಸಾವಿರ ಬೆಲೆಯಿದೆ

ಇದನ್ನೂ ಓದಿ

ದಾವಣಗೆರೆಯಲ್ಲಿ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ: ಗಮನ ಸೆಳೆದ ಲಂಬಾಣಿ ನೃತ್ಯ, ಕೋಲಾಟ

ಬೀಸು ಹೇಳಿಕೆ ಕೊಡುವ ಮುನ್ನ ಒಮ್ಮೆ ಯೋಚಿಸಿ ಸ್ವಾಮೀಜಿಗಳೇ