ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟ ಸುತ್ತಲಿನ ರಾಜ್ಯಗಳಿಗೂ ಹಬ್ಬಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲೂ ಹೋರಾಟ ತೀವ್ರವಾಗಿದೆ. 85 ದಿನ ಕಳೆದ್ರೂ ಪಟ್ಟುಬಿಡದೆ ರೈತರು ಹೋರಾಟ ಮುನ್ನಡೆಸಿದ್ದಾರೆ. ಆದ್ರೆ ಕೇಂದ್ರಸರ್ಕಾರ ಮಾತ್ರ ಕೃಷಿಕಾಯ್ದೆಗಳ ಪರವಾಗಿ ಬಿಗಿ ನಿಲುವು ಮುಂದುವರಿಸಿದೆ. ಇದು ರೈತರನ್ನ ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿದೆ.
ಸರ್ಕಾರ-ರೈತರ ನಡುವೆ ಮುಂದುವರಿದ ಹಗ್ಗಜಗ್ಗಾಟ
ದೆಹಲಿಯ 3 ಗಡಿಗಳಲ್ಲಿ ಬೀಡು ಬಿಟ್ಟು ರೈತರು ಹೋರಾಡ್ತಿದ್ದಾರೆ. ಆದ್ರೆ ಕೇಂದ್ರ ಮಾತ್ರ ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದೆ. ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಕೂಡ ಕಾಯ್ದೆ ವಾಪಾಸ್ ಪಡೆಯಲ್ಲ ಎಂದಿದ್ದಾರೆ. ಸರ್ಕಾರದ ಉತ್ತರ ಕೇಳಿದ ರೈತರು ಹೋರಾಟವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ರೈತಮುಖಂಡ ಟಿಕಾಯತ್ ಎಚ್ಚರಿಕೆ ನೀಡಿದ್ದು, ಬೇಡಿಕೆ ಒಪ್ಕೊಳ್ಳೋವರೆಗೆ ನೆಮ್ಮದಿಯಿಂದ ಇರಲು ಬಿಡಲ್ಲ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗಾಗಿ ಸರ್ಕಾರ-ರೈತರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.
40 ಲಕ್ಷ ಟ್ರ್ಯಾಕ್ಟರ್ಗಳ ಮೆರವಣಿಗೆ ವಾರ್ನಿಂಗ್
ಕಿಸಾನ್ ಮಹಾಪಂಚಾಯತ್ ಹೆಸರಲ್ಲಿ ನಡೀತಿರೋ ಬೃಹತ್ ಸಭೆಗಳಲ್ಲಿ ಲಕ್ಷಾಂತರ ರೈತರು ಭಾಗವಹಿಸಿ, ಬೆಂಬಲ ಘೋಷಿಸುತ್ತಿದ್ದಾರೆ. ಈಗಾಗಲೇ ಉತ್ತರಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹತ್ತಾರು ಮಹಾ ಪಂಚಾಯತ್ ನಡೆದಿವೆ. ರೈತ ಚಳವಳಿ ಉತ್ತುಂಗದಲ್ಲಿರುವ ಪಂಜಾಬ್‌ನಲ್ಲಿ ನಿನ್ನೆ ಮೊದಲ ಕಿಸಾನ್ ಮಹಾಪಂಚಾಯತ್ ನಡೆದಿದ್ದು ಭಾರಿ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ಮತ್ತೊಂದ್ಕಡೆ ದೆಹಲಿ ಗಡಿಯಲ್ಲೇ ಇದ್ದು, ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿರುವ ರೈತರು ಸರ್ಕಾರಕ್ಕೆ ಅಕ್ಟೋಬರ್ವರೆಗೆ ಗಡುವು ನೀಡಿದ್ದಾರೆ. ಅಕ್ಟೋಬರ್ ಒಳಗೆ ರೈತರ ಬೇಡಿಕೆ ಈಡೇರಿಸದೇ ಇದ್ರೆ 40 ಲಕ್ಷ ಟ್ರ್ಯಾಕ್ಟರ್ಗಳ ಮೆರವಣಿಗೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದೇ ತಿಂಗಳಲ್ಲಿ ರೈಲು ರೋಖೋ ಚಳುವಳಿಗೂ ರೈತರು ಕರೆ ನೀಡಿದ್ದಾರೆ.
ಒಟ್ನಲ್ಲಿ ಒಂದ್ಕಡೆ ಸರ್ಕಾರ ಹಿಂದೆ ಸರಿಯಲು ಸಿದ್ಧವಿಲ್ಲ, ಹಾಗೇ ರೈತರು ಪಟ್ಟು ಸಡಿಲಿಸಲು ಮುಂದಾಗ್ತಿಲ್ಲ. ಹೀಗಾಗಿ ರೈತರ ಹೋರಾಟ ಮತ್ತಷ್ಟು ಕಗ್ಗಂಟಾಗುತ್ತಿದ್ದು, ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚಾಗುತ್ತಲೇ ಇದೆ.
ಇದನ್ನೂ ಓದಿ: Farmers Green Shawl ಸಾಲು ಸಾಲು ರೈತ ಪ್ರತಿಭಟನೆ: ಮೈಸೂರಿನಲ್ಲಿ ಹಸಿರು ಶಾಲುಗಳಿಗೆ ಹೆಚ್ಚಿದ ಡಿಮ್ಯಾಂಡ್!