ಬೆಂಗಳೂರು, ಅ.13: ಕೋಳಿ ಮಾರಾಟ ಮಾಡಿದ್ದು ನನ್ನ ಜೀವನದ ಮೊದಲನೇ ವ್ಯಾಪಾರ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಆಯೋಜಿಸಿದ್ದ ವಿಶ್ವ ಮೊಟ್ಟೆ ದಿನಾಚರಣೆ (World Egg Day) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಟ್ಟೆ ತಿನ್ನುವವರು, ಮೊಟ್ಟೆ ತಯಾರು ಮಾಡುವವರು, ಕೋಳಿ ಮಾಡುವವರು, ಕೋಳಿ ತಿನ್ನುವವರು ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದಿರಾ ಎಂದು ಕೇಳಿದ ಡಿಕೆ ಶಿವಕುಮಾರ್, ರಾಗಿ ಮುದ್ದೇ ತಿನ್ನುವವನು ಬೆಟ್ಟ ಕೀಳುತ್ತಾರೆ. ಜೋಳ ತಿನ್ನುವವನು ತೋಳನಂತೆ ಇರುತ್ತಾನೆ. ಮೊಟ್ಟೆ ತಿನ್ನುವವನು ಜಟ್ಟಿಯಂತೆ ಆಗುತ್ತಾನೆ ಅಂತ ನಮ್ಮ ಹಿರಿಯರು ಹೇಳುತ್ತಿದ್ದರು ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್: ಕೊನೆಗೂ ಸತ್ಯ ಒಪ್ಪಿಕೊಂಡ ಡಿಕೆ ಶಿವಕುಮಾರ್
ಇದೆ ಕ್ಯಾಂಪಸ್ನಲ್ಲಿ 15 ದಿನ ಪೌಲ್ಟ್ರಿ ತರಬೇತಿ ಪಡೆದಿದ್ದೆ ಎಂದು ನೆನಪಿಸಿಕೊಂಡ ಡಿಕೆ ಶಿವಕುಮಾರ್, ಸುಂಕದಕಟ್ಟೆಯಲ್ಲಿ ಇದ್ದೆ, ಜಮೀನು ಇತ್ತು. ಕೋಳಿ ಫಾರಂ ನಡೆಸಿದೆ, ಲಾಸ್ ಆದ ಹಿನ್ನೆಲೆ ಉದ್ಯಮ ಬಿಟ್ಟು ಬಿಟ್ಟೆ. ನನ್ನ ಜೀವನದ ಮೊದಲನೇ ವ್ಯಾಪಾರ ಕೋಳಿ ಮಾರಾಟ ಮಾಡಿದ್ದು. ನಾವು ಇವಾಗ ಮಾಂಸ, ಮೊಟ್ಟೆ ತಿನ್ನುವುದನ್ನ ಬಿಟ್ಟು ಬಿಟ್ಟಿದ್ದೇನೆ. ಆದರೆ ಉತ್ತಮ ಆರೋಗ್ಯಕ್ಕೆ ಮೊಟ್ಟೆ ಅವಶ್ಯಕ ಎಂದರು.
ಮೊಟ್ಟೆ ವ್ಯಾಪಾರ ಬಹಳ ಕಷ್ಟ. ಮೊಟ್ಟೆ, ಕೋಳಿ ಬಗ್ಗೆ ಒಂದು ಸಣ್ಣ ಸುದ್ದಿ ಹರಿದಾಟ ಆದರೆ ಸಾಕು ಎಲ್ಲಾ ವ್ಯಾಪಾರ ಬಿದ್ದು ಹೋಗುತ್ತದೆ. ರೇಷ್ಮೆ ಉಳುವಿನ ರೀತಿ ಮೊಟ್ಟೆ ಜೋಪಾನ ಮಾಡಬೇಕು. ಸರ್ಕಾರ ನಿಮಗೆ ಯಾವ ರೀತಿ ರಕ್ಷಣೆ ಬೇಕು ಎಂದು ನಮ್ಮ ಜೊತೆ ಹೇಳಿಕೊಳ್ಳಿ, ನಮ್ಮ ಸರ್ಕಾರ ನಿಮ್ಮ ಜೊತೆ ಇದ್ದೇ ಇರುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ