ಯಾದಗಿರಿ, ಜನವರಿ 28: ಅನ್ನಭಾಗ್ಯ ಯೋಜನೆಯ (Anna Bhagya Scheme) ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್ (Manikanth Rathod) ಸಹೋದರ ರಾಜು ರಾಠೋಡ್ ಅವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಹಾಪುರದಲ್ಲಿ ಇತ್ತೀಚೆಗೆ ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಅವರಿಗೆ ಸೇರಿದ ಶ್ರೀ ಲಕ್ಷ್ಮೀ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶನಿವಾರ (ಜ.27) ರಂದು ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅನ್ನಭಾಗ್ಯದ 550 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಡ ಜನರ ಹಸಿವಿನಿಂದ ಬಳಲಬಾರದು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ತಂದಿದ್ದಾರೆ. ಆದರೆ, ಈ ಯೋಜನೆ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲೇ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ದಾಖಲಾಗಿದ್ದವು. ದಂಧೆಕೋರರು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಿಸುತ್ತಿದ್ದರು. ಅಕ್ಕಿ ಸಿಗದೇ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿಯನ್ನ ಜಪ್ತಿ ಮಾಡಿದ್ದರು. ಈ ಅಕ್ರಮ ಅಕ್ಕಿ ದಂಧೆ ತಡೆಗೆ ಆಹಾರ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿತ್ತು.
ಇದನ್ನೂ ಓದಿ: ಖಾತೆಗೆ ಬಾರದ ಅನ್ನಭಾಗ್ಯ ಗೃಹಲಕ್ಷ್ಮೀ ಯೋಜನೆ ಹಣ: ಚಾಮರಾಜನಗರದಲ್ಲಿ ರೊಚ್ಚಿಗೆದ್ದ ಮಹಿಳಾ ಮಣಿಯರು
ಇನ್ನು ನಾಲ್ಕು ಪ್ರಕರಣದಲ್ಲಿ 100 ಕ್ಕೂ ಕ್ವಿಂಟಲ್ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿತ್ತು. ವಿಜಯಕುಮಾರ ಮಟ್ಟಿ, ವೀರಣ್ಣ ಬಡಿಗೇರಿ, ಶಿವಾನಂದ ಬಡಿಗೇರಿ, ಖಾಜಾಹುಸೇನ್ ದಂಧೆಕೋರರ ವಿರುದ್ಧ ದೂರು ದಾಖಲಾಗಿತ್ತು. ಇತ್ತ ಆಹಾರ ಇಲಾಖೆಯೂ ಅಕ್ರಮ ಅಕ್ಕಿ ದಂಧೆಕೋರರ ಪಟ್ಟಿ ರೆಡಿ ಮಾಡಿತ್ತು. ಗೂಂಡಾ ಕಾಯ್ದೆ ಅಥವಾ ಗಡಿಪಾರು ಮಾಡುವಂತೆ ಡಿಸಿಗೆ ಶಿಫಾರಸು ಮಾಡಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ರೆ ಪಡಿತರ ಚೀಟಿ ರದ್ದುಪಡಿಸ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲೇ ಅಕ್ರಮ ದಂಧೆ ಸಕ್ರಿಯವಾಗಿರುವ ಬಗ್ಗೆ ‘ಟಿವಿ9’ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಮೈಸೂರು ಜಿಲ್ಲಾಡಳಿತ, ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವಂತಿಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಅಕ್ರಮವಾಗಿ ಮಾರಾಟ ಮಾರಿದ್ರೆ ಪಡಿತರ ಚೀಟಿ ರದ್ದುಪಡಿಸ್ತೇವೆ ಎಂದು ಎಚ್ಚರಿಕೆ ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ