ಜಾತ್ರೆ ರದ್ದಾದರೂ ಮೈಲಾರಲಿಂಗೇಶ್ವರನ ದರ್ಶನಕ್ಕೆ ಬರುತ್ತಿರುವ ಭಕ್ತರು: ಲಾಠಿ ಹಿಡಿದ ಎಸ್​ಪಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 14, 2022 | 4:15 PM

ಚೆಕ್​ಪೋಸ್ಟ್ ಇದ್ದರೂ ಬೇರೊಂದು ದಾರಿಯಿಂದ ಭಕ್ತರು ದೇಗುಲಕ್ಕೆ ಬರುತ್ತಲೇ ಇದ್ದಾರೆ. ಕೊವಿಡ್ ನಿಯಮಾವಳಿಗಳನ್ನು ಮರೆತು ಸಾವಿರಾರು ಜನರು ಸೇರಿದ್ದಾರೆ.

ಜಾತ್ರೆ ರದ್ದಾದರೂ ಮೈಲಾರಲಿಂಗೇಶ್ವರನ ದರ್ಶನಕ್ಕೆ ಬರುತ್ತಿರುವ ಭಕ್ತರು: ಲಾಠಿ ಹಿಡಿದ ಎಸ್​ಪಿ
ಯಾದಗಿರಿಯ ಮೈಲಾರಲಿಂಗೇಶ್ವರ ಜಾತ್ರೆಗೆ ಬರುತ್ತಿರುವ ಭಕ್ತರು
Follow us on

ಯಾದಗಿರಿ: ಮೈಲಾರಲಿಂಗೇಶ್ವರ ಜಾತ್ರೆ ರದ್ದಾದರೂ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಲೇ ಇದ್ದಾರೆ. ಭಕ್ತರ ಸಂಖ್ಯೆ ಗುಂಪು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಕೈಲಿ ಲಾಠಿ ಹಿಡಿದು ಜನರನ್ನು ಚೆದುರಿಸಲು ಮುಂದಾದರು. ಚೆಕ್​ಪೋಸ್ಟ್ ಇದ್ದರೂ ಬೇರೊಂದು ದಾರಿಯಿಂದ ಭಕ್ತರು ದೇಗುಲಕ್ಕೆ ಬರುತ್ತಲೇ ಇದ್ದಾರೆ. ಕೊವಿಡ್ ನಿಯಮಾವಳಿಗಳನ್ನು ಮರೆತು ಸಾವಿರಾರು ಜನರು ಸೇರಿದ್ದಾರೆ.

ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಯನ್ನು ರದ್ದುಗೊಳಿಸಿದೆ. ದೇವಸ್ಥಾನದ ಸುತ್ತ 1 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಐದು ಕಡೆ ಚೆಕ್​ಪೋಸ್ಟ್​ ಸ್ಥಾಪಿಸಿದ್ದರೂ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ದೇಗುಲ ಹಿಂದಿನ ಹೊನ್ನಕೆರೆಯಲ್ಲಿ ಭಕ್ತರು ಸ್ನಾನ ಮಾಡುತ್ತಿದ್ದಾರೆ. ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಹೊನ್ನಕೆರೆಯಲ್ಲಿ ಸಾಮೂಹಿಕ ಸ್ನಾನ ಮಾಡುತ್ತಿದ್ದು, ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಂದ ಕೊವಿಡ್ ಉಲ್ಬಣಗೊಳ್ಳುವ ಅಪಾಯ ವ್ಯಕ್ತವಾಗಿದೆ.

ಯಾದಗಿರಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿರುವವರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ದಂಡವಿಧಿಸಲು ಬಂದ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸಿದರು. ಸುಭಾಷ್ ವೃತ್ತದಲ್ಲಿ ಮಾಸ್ಕ್ ಧರಿಸದವರಿಗೆ ದಂಡ‌ ಹಾಕಲು ಬಂದ ನಗರಸಭೆ ಆಯುಕ್ತ ಬಕ್ಕಪ್ಪ ಅವರೊಂದಿಗೆ ಬೈಕ್ ಸವಾರರು ಏರುದನಿಯಲ್ಲಿ ಮಾತನಾಡಿದರು.

ನಗರಸಭೆ ಸಿಬ್ಬಂದಿಯನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡರು. ಎರಡು ಡೋಸ್ ಲಸಿಕೆ ಪಡೆದ ಮೇಲೆ ಮತ್ಯಾಕೆ ಮಾಸ್ಕ್ ಹಾಕಬೇಕು? ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಲಿ ನಾನೇ ಕೇಳ್ತೀನಿ. ಬಡವರಿಗೆ ಮತ್ತೊಂದು ಕಾನೂನು ಇದಯೇ? ನಾವು ದಿನವಿಡೀ ಉರಿಬಿಸಿಲಲ್ಲಿ ದುಡಿದರೂ 100 ರೂಪಾಯಿ ಕೂಲಿ ಸಿಗಲ್ಲ. ಇನ್ನೆಲ್ಲಿಂದ 100 ರೂಪಾಯಿ ದಂಡ ಕಟ್ಟೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಲಿಕಾರ್ಮಿಕ ಮಹಿಳೆಯು ತರಾಟೆಗೆ ತೆಗೆದುಕೊಂಡ ರೀತಿಗೆ ಪೊಲೀಸರು ತಬ್ಬಿಬ್ಬಾದರು.

ಇದನ್ನೂ ಓದಿ: Covid 19: ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ; ಒಂದೇ ದಿನ 2,64,202 ಪ್ರಕರಣ ಪತ್ತೆ, 315 ಮಂದಿ ಸಾವು
ಇದನ್ನೂ ಓದಿ: ಕೊರೊನಾ ನಿರ್ವಹಣೆಗೆ ತಂತ್ರಜ್ಞಾನ ಬಳಕೆ: ಕರ್ನಾಟಕದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ