ಯಾದಗಿರಿ: ಗುಂಪೊಂದು ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಾಂಗ ಮುಟ್ಟಿ ಪೈಶಾಚಿಕ ಕೃತ್ಯ ಎಸಗಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಪಾಪಿಗಳು ಮಹಿಳೆ ಜೊತೆ ವಿಕೃತ ವರ್ತನೆ ನಡೆಸಿದ್ದಾರೆ. ಈ ಘಟನೆ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮಧ್ಯೆ ನಡೆದಿದೆ ಎನ್ನಲಾಗುತ್ತಿದೆ.
5-6 ಜನರ ಗುಂಪಿನಿಂದ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದ್ದು ಮಹಿಳೆಗೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಹಲ್ಲೆಗೊಳಗಾದ ಮಹಿಳೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ದು 5-6 ಜನರ ಗುಂಪು ಮಹಿಳೆಯ ಮೇಲೆ ಸ್ವಲ್ಪವೂ ಕನಿಕರ ತೋರಿಸದೆ ಅಮಾನವೀಯತೆಯಿಂದ ವರ್ತಿಸಿದ್ದಾರೆ.
ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮಧ್ಯೆ ಬರುವ ಜಮೀನೊಂದರಲ್ಲಿ ವಾಹನದ ಹೆಡ್ ಲೈಟ್, ಮೊಬೈಲ್ ಟಾರ್ಚ್ ಹಾಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕನೋರ್ವ ನನ್ನಿಂದ 10-15 ಸಾವಿರ ಹಣ ಪಡೆದಿದ್ದಾಳೆ ಅಂತ ಸಿಟ್ಟಿನಿಂದ ಮಹಿಳೆಯನ್ನು ಹೊಡೆಯುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಹಾಗೂ ಹೊಡೆಯುವಾಗ ಕೂಗಿದರೆ ಪೆಟ್ಟಿಗೆಯಲ್ಲಿ ಹಾಕಿ ಸುಡುವುದಾಗಿ ಯುವಕರ ಗುಂಪು ಮಹಿಳೆಗೆ ಬೆದರಿಕೆ ಹಾಕಿ ಮನ ಬಂದಂತೆ ವರ್ತಿಸಿದ್ದಾರೆ. ಇಷ್ಟೆಲ್ಲಾ ಆದರೂ ಘಟನೆ ಬಗ್ಗೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ.
ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ರು ಬಿಡದೆ ನಗ್ನಗೊಳಿಸಿ ಆಕೆಯನ್ನ ಹೊಡೆಯುವ ನೆಪದಲ್ಲಿ ಅಂಗಾಂಗಗಳನ್ನ ಮುಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ಇನ್ನು ಹಲ್ಲೆಕೋರನೊಬ್ಬ ಮೊಬೈಲ್ನಲ್ಲಿ ಫೋಟೋ ತೋರಿಸಿ, ಈಕೆ ನೀನೆ ಅಲ್ವಾ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸುತ್ತಾನೆ. ಈ ವೇಳೆ ಮಹಿಳೆ ಅದು ನಾನಲ್ಲ, ನನಗೆ ಏನು ಗೊತ್ತಿಲ್ಲ ಎಂದು ಎಷ್ಟೇ ರೋಧಿಸಿದರು ಯುವಕರ ಗುಂಪು ಮಹಿಳೆ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ.
ಪ್ರಕರಣ ಸಂಬಂಧ ನಾಲ್ವರು ಅರೆಸ್ಟ್
ಇನ್ನು ಟಿವಿ9 ನಲ್ಲಿ ಈ ಸುದ್ದಿ ಪ್ರಸಾರದ ಬಳಿಕ ಎಚ್ಚೆತ್ತ ಪೊಲೀಸರು ಘಟನೆ ತನಿಖೆಗೆ ಮೂರು ತಂಡಗಳನ್ನು ರಚಿಸಿದ್ದಾರೆ. ಕಳೆದ 8-9 ತಿಂಗಳ ಹಿಂದೆ ಈ ಘಟನೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಶಹಾಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಟಿವಿ9ಗೆ ಯಾದಗಿರಿ ಎಸ್‌ಪಿ ವೇದಮೂರ್ತಿ ಮಾಹಿತಿ ನೀಡಿದ್ದು ಯಾದಗಿರಿ ಜಿಲ್ಲೆಯ ಶಹಾಪುರದವರೇ ಕೃತ್ಯವೆಸಗಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆಳಕಿಗೆ ಬಂದ ಅರ್ಧ ಗಂಟೆಯಲ್ಲೇ ಭೇದಿಸಿದ್ದೇವೆ. ಹಣದ ವಿಚಾರಕ್ಕೆ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಮಹಿಳೆ ದೂರು ನೀಡಿಲ್ಲ. ಆದರೆ ನಾವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೇವೆ ಎಂದರು. ಜೊತೆಗೆ ಹಲ್ಲೆಗೊಳಗಾದ ಮಹಿಳೆಯನ್ನ ಕೂಡ ಪತ್ತೆ ಮಾಡಲಾಗಿದ್ದು ಆಕೆ ಶಹಾಪುರ ನಗರದಲ್ಲೇ ವಾಸವಿದ್ದ ಮಹಿಳೆ. ಸದ್ಯ ಮಹಿಳೆ ವಿಚಾರಣೆ ಬಳಿಕ ಪ್ರಕರಣದ ಅಸಲಿಯತ್ತು ಗೊತ್ತಾಗಲಿದೆ.
ನಾಲ್ಕು ಮಂದಿ ಆರೋಪಿಗಳನ್ನ ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಆರೋಪಿಗಳ ಮೇಲೆ ಕಿಡ್ನಾಪ್, ಹಲ್ಲೆ, ರೇಪ್ ಹಾಗೂ ಜಾತಿ ನಿಂಧನೆ ಕೇಸ್ ದಾಖಲಿಸಲಾಗಿದೆ. ನಾಲ್ಕು ಮಂದಿ ಆರೋಪಿಗಳು ಇದೇ ಸ್ಥಳದಲ್ಲಿ ಅತ್ಯಾಚಾರ ನಡೆಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಯಾದಗಿರಿ ಜಿಲ್ಲೆಯಲ್ಲಿ ಶುರುವಾಗಿದೆ ಸೀತಾಫಲ ಕ್ರಾಂತಿ; ಮಾರಾಟಗಾರರ ಮುಖದಲ್ಲಿ ಮಂದಹಾಸ
ಸೊರಟೂರಿನಲ್ಲಿ ಬಡ ಕುಟುಂಬದ ಮೇಲೆ ದಬ್ಬಾಳಿಕೆ; ಮಹಿಳೆಯರ ಜೊತೆ ಅನುಚಿತ ವರ್ತನೆ, ಮನೆಗೆ ನುಗ್ಗಿ ಹಲ್ಲೆ
Published On - 8:42 am, Mon, 13 September 21