Karnataka Rain: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣಾಘಾತ, ಸಿಡಿಲು ಬಡಿದು ಇಬ್ಬರು ಸಾವು
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪರ್ಜೋಯ್ ಚಂಡಮಾರುತದ ಅಬ್ಬರ ಹೆಚ್ಚಾಗುತ್ತಿದೆ. ಇನ್ನೊಂದೆಡೆ, ಯಾದಗಿರಿ ಹಾಗೂ ಕಲಬುರಗಿಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಯಾದಗಿರಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ (Karnataka Rain). ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪರ್ಜೋಯ್ ಚಂಡಮಾರುತದ (Biparjoy Cyclone) ಅಬ್ಬರ ಹೆಚ್ಚಾಗುತ್ತಿದೆ. ಇನ್ನೊಂದೆಡೆ, ಯಾದಗಿರಿ (Yadgir Rain) ಹಾಗೂ ಕಲಬುರಗಿಯಲ್ಲಿ (Kalaburagi) ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಲಬುರಗಿ ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿದ್ದು, ಹಲವು ಮನೆಗಳಿಗೆ ನಾಲೆ ನೀರು ನುಗ್ಗಿದೆ. ರಸ್ತೆಗಳೂ ಜಲಾವೃತಗೊಂಡಿವೆ. ಇನ್ನು ಚಿಕ್ಕಮಗಳೂರಿನಲ್ಲಿ (Chikkamagaluru) ದೇವಸ್ಥಾನದ ಮುಂದೆ ನಿಂತಿದ್ದಾಗ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಭಾರೀ ಮಳೆಗೆ ಜನರು ಪರದಾಟ ನಡೆಸುವಂತಾಗಿದೆ. ಶಹಾಪುರದ ಬಸವೇಶ್ವರ ವೃತ್ತ, ತರಕಾರಿ ಮಾರ್ಕೆಟ್ ರಸ್ತೆ ಜಲಾವೃತಗೊಂಡು ರಸ್ತೆ ಬದಿ ವ್ಯಾಪಾರಿಗಳು, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ಅಷ್ಟೇ ಅಲ್ಲದೆ, ಶಹಾಪುರ ಪೊಲೀಸ್ ಠಾಣೆಯ ಆವರಣಕ್ಕೂ ಮಳೆ ನೀರು ನುಗ್ಗಿದೆ.
ಮಳೆಗಾಲ ಆರಂಭವಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ನಗರಸಭೆ ಅಧಿಕಾರಿಗಳು, ಮಳೆ ನೀರು ಹರಿದುಹೋಗಲು ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಶಹಾಪುರ ನಗರದಲ್ಲಿನ ಚರಂಡಿ ಸ್ವಚ್ಛತೆ ಮಾಡದೇ ನಿಷ್ಕಾಳಜಿ ವಹಿಸಿದಕ್ಕೆ ಮಳೆ ನೀರು ರಸ್ತೆ ಮೇಲೆ ನುಗ್ಗಿದೆ. ಅಂಗಡಿಯೊಂದಕ್ಕೂ ಮಳೆ ನೀರು ನುಗ್ಗಿದೆ. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪ ದರ್ಶನಾಪುರ ಕ್ಷೇತ್ರದ ನಗರದಲ್ಲಿಯೇ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಪದೇಪದೆ ರಸ್ತೆಗಳು ಜಲಾವೃತವಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ವ್ಯಾಪಾರಿಗಳು, ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: Karnataka Rains: ಇಂದಿನಿಂದ ಜೂನ್ 15ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬಿರುಗಾಳಿ, ಗಡುಗು ಸಹಿತ ಭಾರಿ ಮಳೆ
ಬಿರುಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಸುರಪುರ, ಶಹಾಪುರ, ವಡಗೇರಾ ಹಾಗೂ ಯಾದಗಿರಿಯಲ್ಲಿ ಸುಮಾರು 1 ಗಂಟೆಗಳಿಗೂ ಅಧಿಕ ಸಮಯ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಶಹಾಪುರದ ಸಗರ ಗ್ರಾಮದಲ್ಲಿ ಶೆಡ್ ಮನೆಯೊಂದು ಧರೆಗುರುಳಿ ದಿನಬಳಕೆ ವಸ್ತಗಳೆಲ್ಲಾ ಹಾನಿಯಾಗಿವೆ. ಇನ್ನೊಂದೆಡೆ, ಮರಗಳು, ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಇನ್ನೊಂದೆಡೆ, ಮಳೆಗಾಗಿ ಆಕಾಶ ನೋಡುತ್ತಿದ್ದ ಅನ್ನದಾತರು, ಉತ್ತಮ ಮಳೆಯಿಂದ ಸಂತಸಗೊಂಡಿದ್ದಾರೆ. ಭೂಮಿ ಹದ ಮಾಡಿಕೊಂಡು ಇದುವರೆಗೂ ಬಿತ್ತನೆ ಮಾಡದೇ ಮಳೆಗಾಗಿ ಕಾಯುತ್ತಿದ್ದ ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಜಿಲ್ಲಾದ್ಯಂತ ಬಿತ್ತನೆ ಕಾರ್ಯ ಆರಂಭಗೊಂಡಿದೆ.
ಕಲಬುರಗಿಯಲ್ಲಿ ಗುಡುಗು ಸಹಿತ ಭಾರೀ ಮಳೆ
ಕಲಬುರಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಚಿಂಚೋಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕೊಳ್ಳೂರು ಗ್ರಾಮದಲ್ಲಿ ಸಿರುದ ಧಾರಾಕಾರ ಮಳೆಯ ಪರಿಣಾಮ ನಾಲೆ ತುಂಬಿ ಅದರ ನೀರು ಹಲವು ಮನೆಗಳಿಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯ ನೀರುಪಾಲಾಗಿದೆ. ಅಷ್ಟೇ ಅಲ್ಲದೆ, ಚಿಂಚೋಳಿಯ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.
ಚಿಕ್ಕಮಗಳೂರಿನಲ್ಲೂ ಮಳೆ, ಸಿಡಿಲು ಬಡಿದು ವ್ಯಕ್ತಿ ಸಾವು
ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ಚಿಕ್ಕಮಗಳೂರು, ಕಳಸ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹರ ಚಾರ್ಮುಡಿ ಘಾಟ್ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಇದರೊದಿಗೆ ಗಾಳಿಯೂ ಬೀಸತೊಡಗಿದೆ. ಯಗಟಿಪುರದಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪದ ಘಟನೆಯೂ ನಡೆದಿದೆ.
ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ದೇವಸ್ಥಾನದ ಹೊರಭಾಗದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಸಿಡಿಲಿನ ಬಡಿತಕ್ಕೆ ಸಾವನ್ನಪ್ಪಿದ್ದಾರೆ. ತರೀಕೆರೆ ತಾಲೂಕಿನ ಬಾವಿಕೆರೆಯ ಗಂಜೀಗೆರೆಯ ಮುಕೇಶ್(40) ಮೃತ ದುರ್ದೈವಿ. ಘಟನೆಯಲ್ಲಿ ನಾಲ್ವರು ಗಾಯಗಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು
ರಾಯಚೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ದೇವದುರ್ಗ ತಾಲೂಕಿನ ಗೆಜ್ಜೆಬಾವಿದೊಡ್ಡಿ ಗ್ರಾಮದಲ್ಲಿ ಸಿಡಿಲು ಬಡಿದು ಮೌನೇಶ (35) ಎಂಬವರು ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ದೇವದುರ್ಗ ಕ್ಷೇತ್ರದ ಶಾಸಕಿ ಕರಿಯಮ್ಮ ನಾಯಕ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Sun, 11 June 23