ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ (Karnataka Tain) ಮುಂದುವರಿದಿದೆ. ಹೊಸ ದಾಖಲೆ ಬರೆದ ಈ ವರ್ಷದ ಮುಂಗಾರು ಮಳೆ ಹಲವರನ್ನು ಬಲಿ ಪಡೆಯುವುದರೊಂದಿಗೆ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಮುಳುಗಿಸಿದೆ. ಮಳೆಗಾಲ ಮುಗಿಯುವ ಮೊದಲೇ ಕೆಆರ್ಎಸ್, ಅಲಮಟ್ಟಿ, ಹೊಸಪೇಟೆ ಸೇರಿದಂತೆ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ.
ಜಲಾಶಯ ಭರ್ತಿ: ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ
ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ನಾರಾಯಣಪುರ ಸಮೀಪದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ನದಿ ತೀರದ ಗ್ರಾಮಸ್ಥರು ಎಚ್ಚರದಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ. ನದಿಯ ತಟದಲ್ಲಿ ಪಂಪ್ಸೆಟ್ ಅಳವಡಿಸುವುದು, ಈಜುವುದು, ಸೆಲ್ಫಿ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಜನರು ಎಚ್ಚರಿಕೆಯಿಂದ ಇದ್ದರೆ ಪ್ರಾಣಹಾನಿ ತಪ್ಪಿಸಬಹುದು ಎಂದು ಅವರು ಸಲಹೆ ಮಾಡಿದ್ದಾರೆ. ಪ್ರಸ್ತುತ ನಾರಾಯಣಪುರ ಡ್ಯಾಂನಿಂದ ನದಿಗೆ 1.06 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. 14 ಸ್ಪಿಲ್ ವೇ ಗೇಟ್ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ವಿಜಯಪುರ: ನಿಡಗುಂದಿ ತಾಲ್ಲೂಕಿನ ಯಲಗೂರು ಬಳಿ ಇರುವ ಲಾಲ್ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು, ನೀರುನುಗ್ಗುವ ಸಾಧ್ಯತೆಯಿರುವ ಸ್ಥಳಗಳಲ್ಲಿ ಇರುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಯಲರೂರು ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿ ಡಂಗೂರ ಸಾರಿಸಿ, ತಿಳಿಸಿದ್ದಾರೆ.
ಬೆಳಗಾವಿ: ಮನೆಕುಸಿತ, ಕಣ್ಣೀರಿಡುತ್ತಿರುವ ಕುಟುಂಬ
ಬೆಳಗಾವಿ: ನಗರದಲ್ಲಿ ಮಳೆಯ ಅಬ್ಬರಕ್ಕೆ ಅನಗೋಳದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ 11 ಜನರು ಅಪಾಯದಿಂದ ಪಾರಾಗಿದ್ದಾರೆ. ಮನೆ ಬೀಳುವಾಗಲೇ 2 ಕುಟುಂಬಗಳು ಹೊರಗೆ ಓಡಿ ಜೀವ ಉಳಿಸಿಕೊಂಡಿವೆ. ಅಶೋಕ ಬೆಂಡಿಗೇರಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಅಣ್ಣವ್ವ ಕೊಪ್ಪದ್, ಆಶಾ ಕೊಪ್ಪದ್ ಕುಟುಂಬಗಳು ಇದೀಗ ತಮ್ಮದೆನ್ನುವ ಎಲ್ಲವನ್ನೂ ಕಳೆದುಕೊಂಡು ಕಣ್ಣೀರಿಡುತ್ತಿವೆ. ಬಟ್ಟೆ, ಪಾತ್ರೆ, ಆಹಾರ ಸಾಮಗ್ರಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಒಂದು ವೇಳೆ ಮಧ್ಯರಾತ್ರಿ ರಾತ್ರಿ ಮನೆ ಬಿದ್ದಿದ್ದರೆ ಎಲ್ಲರೂ ಸಾಯುತ್ತಿದ್ದೆವು. ಸರ್ಕಾರ ಪರಿಹಾರ ನೀಡದಿದ್ದರೆ ನಾವೆಲ್ಲ ಬೀದಿಪಾಲಾಗುತ್ತೇವೆ ಎಂದು ಅಣ್ಣವ್ವ ಕೊಪ್ಪದ್ ಕಣ್ಣೀರು ಹಾಕಿದರು.
ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯದಲ್ಲಿ ತ್ರಿವರ್ಣ ಧ್ವಜ
ತುಮಕೂರು: ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ‘ಹರ್ ಘರ್ ತಿರಂಗಾ’ ಘೋಷ ವಾಕ್ಯದೊಂದಿಗೆ ರಾಷ್ಟ್ರಧ್ವಜ ಹಾರಾಡಿತು. ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಗಳು ಕಂಗೊಳಿಸಿದವು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪಾಲ್ಗೊಂಡಿದದರು. ಧುಮ್ಮಿಕ್ಕುವ ಜಲಾಶಯದ ನೀರಿನ ಹಿನ್ನೋಟದಲ್ಲಿ ತಿರಂಗ ಗಮನ ಸೆಳೆಯಿತು.
ಮಳೆ ಕಡಿಮೆಯಾಗಲಿ: ದೇವರಿಗೆ ಮೊರೆ
ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆ ಅನಾಹುತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಳೆದೇವರು ಎಂದೇ ಹೆಸರುವಾಸಿಯಾಗಿರುವ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪೂಜೆ ಸಲ್ಲಿಸಿ, ಮಳೆ ಪ್ರಮಾಣ ಕಡಿಮೆಯಾಗಲಿ ಎಂದು ಮೊರೆಯಿಟ್ಟಿದೆ. ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ಮೇರೆಗೆ ಪೂಜೆ ಸಲ್ಲಿಸಿದೆವು’ ಎಂದು ಕೊಪ್ಪದ ಕಾಂಗ್ರೆಸ್ ನಾಯಕ ಹಾಗೂ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಹೇಳಿದರು. ಋಷ್ಯಶಂಗನಿಗೆ ಮಳೆ ಬೇಕು ಎಂದಾಗ ಕರುಣಿಸುವ, ಬೇಡ ಎಂದಾಗ ನಿಲ್ಲಿಸುವ ಶಕ್ತಿ ಇದೆ ಎಂದು ಭಕ್ತರು ನಂಬುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮೂಡಿಗೆರೆ ತಾಲ್ಲೂಕಿನ ಹೊಸಕೆರೆ, ಭೈರಾಪುರ, ಊರುಬಗೆಯಲ್ಲಿ ನೂರಾರು ಎಕರೆ ಗದ್ದೆಗಳು ಜಲಾವೃತಗೊಂಡಿವೆ. ತುಂಬಳ್ಳಿಪುರ ಎಂಬಲ್ಲಿ ಗುಡ್ಡ ಕುಸಿದು ಕಾಫಿ ತೋಟ ನಾಶವಾಗಿದೆ. ಕಾಫಿ ತೋಟದಲ್ಲಿದ್ದ ಮೆಣಸು ಹಾಗೂ ಅಡಕೆ ಬೆಳೆಯೂ ಹಾಳಾಗಿದೆ.
ಚಿತ್ರದುರ್ಗ: ವೇದಾವತಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಸಾಗರವು ಬಹುತೇಕ ಭರ್ತಿಯಾಗಿದೆ. ಜಲಾಶಯದಲ್ಲಿ ಪ್ರಸ್ತುತ 125.50 ಅಡಿ ನೀರು ನಿಂತಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 4.50 ಅಡಿ ಬಾಕಿಯಿದೆ. 1934ರ ಬಳಿಕ ಮೊದಲ ಬಾರಿಗೆ ಅತಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ.
ಬಾಗಿನ ಅರ್ಪಿಸಲು ಬಂದ ಶಾಸಕನಿಗೆ ಘೇರವಾವ್
ತುಮಕೂರು: ಶಿರಾ ತಾಲ್ಲೂಕಿನ ಹಂದಿಗುಂಟೆ ಗ್ರಾಮದ ಕೆರೆ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಬಂದಿದ್ದ ಶಾಸಕ ರಾಜೇಶ್ ಗೌಡ ಅವರಿಗೆ ಗ್ರಾಮಸ್ಥರು ಘೇರಾವ್ ಮಾಡಿದ ಘಟನೆ ನಡೆದಿದೆ. ನಮ್ಮೂರಿಗೆ ನಯಾಪೈಸೆ ಅಭಿವೃದ್ಧಿ ಕಾಮಗಾರಿ ಕೊಟ್ಟಿಲ್ಲ ಎಂದು ಆರೋಪಿಸಿದ ಹಂದಿಕುಂಟೆ ಗ್ರಾಮಸ್ಥರು ತಾವೇ ಸ್ವತಃ ಕೆರೆಗೆ ಬಾಗಿನ ಅರ್ಪಿಸಿದರು. ಶಾಸಕರಿಗೆ ಘೇರಾವ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್-ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.ಸೇತುವೆ ಮೇಲೆ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಕೊಡಗು: ಮಳೆ ತುಸು ಇಳಿಕೆ
ಮಡಿಕೇರಿ: ಕೊಡಗಿನಾದ್ಯಂತ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹವೂ ಕಡಿಮೆಯಾಗುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆ, ಬೇಂಗೂರು-ದೋಣಿ ಕಡವು, ಮೂರ್ನಾಡು-ನಾಪೋಕ್ಲು, ನಾಪೋಕ್ಲು-ಚೆರಿಯಪರಂಬು ರಸ್ತೆಗಳು ಇನ್ನೂ ತೆರವಾಗಿಲ್ಲ. ಕಳೆದ ಒಂದು ತಿಂಗಳ ಸತತ ಮಳೆಯಿಂದ ಕಂಗೆಟ್ಟಿರುವ ಜನರು ಮಳೆ ಇಳಿಮುಖವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
Published On - 9:58 am, Tue, 9 August 22