ವಿಚಾರಣೆ ನೆಪದಲ್ಲಿ ಕ್ಯಾನ್ಸರ್​​ ರೋಗಿ ಮೇಲೆ ಕ್ರೌರ್ಯ?: ಖಾಕಿ ಏಟಿಗೆ ಮುರೀತಾ ವ್ಯಕ್ತಿ ಮೂಳೆ?

ಯಾದಗಿರಿಯಲ್ಲಿ ಕ್ಯಾನ್ಸರ್ ರೋಗಿ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿರುವ ಆರೋಪ ಕೇಳಿಬಂದಿದೆ. ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಮನಬಂದಂತೆ ಹಲ್ಲೆ ನಡೆಸಿದ್ದು, ಮೆಹಬೂಬ್ ಕಾಲು ಮುರಿದು ಗಾಯಗೊಂಡಿದ್ದಾರೆ. ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ಮೇಲೆ ನಡೆದ ಈ ಅಮಾನವೀಯ ಕೃತ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಗೊಂಡ ಮೆಹಬೂಬ್‌ಗೆ ಕಲಬುರಗಿಯ ಜಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಚಾರಣೆ ನೆಪದಲ್ಲಿ ಕ್ಯಾನ್ಸರ್​​ ರೋಗಿ ಮೇಲೆ ಕ್ರೌರ್ಯ?: ಖಾಕಿ ಏಟಿಗೆ ಮುರೀತಾ ವ್ಯಕ್ತಿ ಮೂಳೆ?
ಕ್ಯಾನ್ಸರ್​​ ರೋಗಿ ಮೇಲೆ ನಡೆದಿರುವ ಹಲ್ಲೆ
Edited By:

Updated on: Jan 16, 2026 | 2:38 PM

ಯಾದಗಿರಿ, ಜನವರಿ 16: ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಿ ಕ್ಯಾನ್ಸರ್​​ ರೋಗಿಗೆ ಬಾಸುಂಡೆ ಬರುವ ರೀತಿ ಪೊಲೀಸರು ಹೊಡೆದ ಪರಿಣಾಮ ಆತನ ಕಾಲು ಮುರಿದಿರುವ ಆರೋಪ ಯಾದಗಿರಿಯಲ್ಲಿ ಕೇಳಿಬಂದಿದೆ. ಕೆಂಭಾವಿ ನಿವಾಸಿ ಮೆಹಬೂಬ್ ಎಂಬರಿಗೆ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಘಟನೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ಏಟಿನಿಂದ ಗಾಯಗೊಂಡಿರುವ ಮಹೆಬೂಬ್​​ನ ಕಲಬುರಗಿಯ ಜಿಮ್ಸ್​​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

5 ತಿಂಗಳು ಹಿಂದಿನ ಪ್ರಕರಣದ ವಿಚಾರಣೆ

ಮೆಹಬೂಬ್​​ ಮತ್ತು ಉತ್ತರ ಪ್ರದೇಶ ಮೂಲದ ಸಾಹಿಲ್ ಎಂಬಾತ ಸೇರಿ ಜಾತ್ರೆಗಳಲ್ಲಿ ಆಟಿಕೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಆಗಸ್ಟ್​​ ವೇಳೆಗೆ ಆಟೋದಿಂದ ಬಿದ್ದು ಸಾಹಿಲ್ ಮೃತಪಟ್ಟಿದ್ದ. ಕಳೆದ ಐದು ತಿಂಗಳ ಹಿಂದೆ ನಡೆದಿರೋ ಅಪಘಾತದ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಮೆಹಬೂಬ್​​ನ ವಿಚಾರಣೆಗೆಂದು ಪೊಲೀಸರು ಕರೆದಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ಮೆಹಬೂಬ್​​ ಓಡಾಡಿಕೊಂಡಿದ್ದ ಎನ್ನಲಾಗಿದೆ. ಕೊನೆಗೂ ಕೈಗೆ ಸಿಕ್ಕ ಆತನನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ವಿಚಾರಣೆ ನೆಪದಲ್ಲಿ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:  ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ; ನಿಗೂಢ ಕೊಲೆಯ ಸುಳಿವು ನೀಡಿದ್ದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು

ಮೆಹಬೂಬ್ ಬ್ಲಡ್​​ ಕ್ಯಾನ್ಸರ್ ರೋಗಿ

ಇನ್ನು ಪೊಲೀಸರು ನೀಡಿದ ಹೊಡೆತದ ಏಟಿಗೆ ಮೆಹಬೂಬ್​​ ಕಾಲುಗಳು ಮತ್ತು ಹಿಮಭಾಗದಲ್ಲಿ ಬಾಸುಂಡೆಗಳು ಮೂಡಿವೆ. ಈಗಾಗಲೇ ಮೆಹಬೂಬ್​​ ಬ್ಲಡ್​​ ಕ್ಯಾನ್ಸರ್​​ನಿಂದ ಬಳಲುತ್ತಿರುವ ರೋಗಿಯಾಗಿದ್ದು, ಪೊಲೀಸರು ನಡೆಸುವ ಕ್ರೌರ್ಯಕ್ಕೆ ಆತನ ಕಾಲು ಮೂಳೆ ಮುರಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ನಡೆಸಿರುವ ಹಲ್ಲೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.