ಯಾದಗಿರಿ: ದಲಿತರ ಆಸ್ತಿ ಪಹಣಿಯಲ್ಲೂ ವಕ್ಫ್​ ಬೋರ್ಡ್​ ಹೆಸರು, ಸರ್ಕಾರದ ವಿರುದ್ಧ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Nov 06, 2024 | 8:41 AM

ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ನೂರಾರು ರೈತರ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ನಮೂದು ಆಗಿದೆ. ಈಗ ನಗರ ಪ್ರದೇಶ ನಿವಾಸಿಗಳ ಆಸ್ತಿ ಪಹಣಿಯಲ್ಲೂ ವಕ್ಫ್​ ಬೋರ್ಡ್​​ ಹೆಸರು ನಮೂದು ಆಗಿದೆ. ನಗರ ಪ್ರದೇಶದಲ್ಲಿರುವ ಆಸ್ತಿಯ ಪಹಣಿಯಲ್ಲೂ ವಕ್ಫ ಬೋರ್ಡ್ ಸೇರ್ಪಡೆಯಾಗಿದೆ. ಜಮೀನು ಕಳೆದುಕೊಂಡ ದಲಿತ ಕುಟುಂಬ ವರ್ಷಗಳಿಂದ ಹೋರಾಟ ನಡೆಸುತ್ತಿದೆ.

ಯಾದಗಿರಿ: ದಲಿತರ ಆಸ್ತಿ ಪಹಣಿಯಲ್ಲೂ ವಕ್ಫ್​ ಬೋರ್ಡ್​ ಹೆಸರು, ಸರ್ಕಾರದ ವಿರುದ್ಧ ಆಕ್ರೋಶ
ದಲಿತರ ಆಸ್ತಿ ಪಹಣಿಯಲ್ಲೂ ವಕ್ಫ್​ ಬೋರ್ಡ್​ ಹೆಸರು
Follow us on

ಯಾದಗಿರಿ, ನವೆಂಬರ್ 06: ಕರ್ನಾಟಕದಲ್ಲಿ ವಕ್ಫ ಬೋರ್ಡ್​ (Karnataka Waqf Board) ಆಸ್ತಿ ವಿಚಾರವಾಗಿ ಚರ್ಚೆ ಜೋರಾಗಿದೆ. ಯಾದಗಿರಿ (Yadgiri) ನಗರದ ಹೃದಯ ಭಾಗದಲ್ಲಿರುವ ದಲಿತರ ಜಮೀನಿನ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರ್ಪಡೆಯಾಗಿದೆ. ಮಲ್ಲಪ್ಪ ಹರಿಜನ ಎಂಬವರಿಗೆ ಸೇರಿರುವ 4 ಎಕರೆ 27 ಗುಂಟೆ ಜಮೀನು ಈಗ ವಕ್ಫ ಆಸ್ತಿಯಾಗಿದೆ. ಜೊತೆಗೆ ಇದೇ ಜಮೀನಿನಲ್ಲಿ ಮುಸ್ಲಿಂ ಸಮುದಾಯದ ಖಬರಸ್ತಾನ ಇದೆ.

ಅಂಬೇಡ್ಕರ್ ಬಡಾವಣೆಯ ಬಳಿಯಿರುವ ಈ ಖಬರಸ್ತಾನ ಹಿಂದೆ ಮಲ್ಲಪ್ಪ ಹರಿಜನ್​ಗೆ ಸೇರಿದ ಜಮೀನಾಗಿತ್ತು. ಸರ್ವೇ ನಂ 263/2 ನ ಈ ಜಮೀನು 1963 ರಿಂದ 1984ರವರೆಗೆ ಪಟ್ಟೇದಾರ ಅವರ ಹೆಸರಿನಲ್ಲಿತ್ತು. ಆದರೆ, 1984ರ ನಂತರ ಏಕಾಏಕಿ ವಕ್ಫ ಬೋರ್ಡ್ ಹೆಸರಿಗೆ ಬದಲಾಗಿದೆ. ಯಾವುದೇ ನೋಟೀಸ್ ನೀಡದೆ ನಮ್ಮ ಹಿರಿಯರಿಂದ ಬಂದ ಜಮೀನು ಮೋಸದಿಂದ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಹೀಗಾಗಿ ನ್ಯಾಯಬೇಕು ಅಂತ ಮಲ್ಲಪ್ಪನ ಮೊಮ್ಮಗ ಈಗ ಹೋರಾಟ ನಡೆಸುತ್ತಿದ್ದಾರೆ.

ಪಟ್ಟೇದಾರ ಮಲ್ಲಪ್ಪ ಪೀರಪ್ಪ ಹರಿಜನ ಅವರು ಜಮೀನು ಮಾರಾಟ ಅಥವಾ ಸರ್ಕಾರಕ್ಕೆ ಬಿಟ್ಟುಕೊಟ್ಟಿಲ್ಲ ಜೊತೆಗೆ ಖರೀದಿ ಪತ್ರವೂ ಆಗಿಲ್ಲ. ಪಟ್ಟೇದಾರನಿಗೆ ಯಾವುದೇ ಪರಿಹಾರವೂ ನೀಡಿಲ್ಲ. 1983-84ರಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಆಸ್ತಿ ಎಂದು ಪಹಣಿಯ ಕಾಲಂ ನಂಬರ್​11 ರಲ್ಲಿ ನಮೂದು ಮಾಡಲಾಗಿದೆ. 1985 ರಿಂದ ಇಂದಿನವರೆಗೂ ಸತತವಾಗಿ ಹೋರಾಟ ಮಾಡುತ್ತಿರುವ ದಲಿತ ಕುಟುಂಬ ವಕ್ಫ್ ಬೋರ್ಡ್​ಗೆ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರದ 30 ಎಕರೆ ಭೂಮಿ ಆಂಧ್ರ ಮೂಲದ ಪ್ರಭಾವಿಗಳಿಂದ ಒತ್ತುವರಿ

ತಮ್ಮ ಆಸ್ತಿಯಲ್ಲಿ ವಕ್ಫ್ ಬೋರ್ಡ್ 4 ಎಕರೆ ಜಮೀನನ್ನು ಖಬರಸ್ತಾನ್​ಗೆ ಮಂಜೂರು ಮಾಡಿದೆ. ಹಲವು ವರ್ಷಗಳಿಂದ ನಮ್ಮ ಭೂಮಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಮುಸ್ಲಿಮರು ದೌರ್ಜನ್ಯ ಮಾಡಿ ನಮ್ಮ ಆಸ್ತಿ ಕಸಿದುಕೊಂಡಿದ್ದಾರೆ. ಕೂಡಲೇ ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆ ಮಾಡಿದ್ದನ್ನು ರದ್ದುಪಡಿಸಿಬೇಕು. ನಮ್ಮ ಆಸ್ತಿ ಖಬರಸ್ತಾನ್​ಗೆ ನೀಡಿದ್ದು ಎಷ್ಟು ಸರಿ? ಸರ್ಕಾರ ನಮಗೆ ನ್ಯಾಯ ಕೊಡಿಸಬೇಕೆಂದು ದಲಿತ ಕುಟುಂಬ ಒತ್ತಾಯ ಮಾಡುತ್ತಿದೆ.

ಜಿಲ್ಲೆಯ ಸಾಕಷ್ಟ ಜಮೀನು ವಕ್ಫ ಬೋರ್ಡ್ ಹೆಸರಿಗೆ ಆಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿ ಆಗುತ್ತಿದೆ. ಹೀಗಾಗಿ ಕೂಡಲೆ ಸರ್ಕಾರ ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ವಕ್ಫ ಬೋರ್ಡ್​ನ ರಾದಂತ ಬಯಲಾಗುತ್ತಿದೆ. ರೈತರು ತಮ್ಮ ಜಮೀನು ದಶಮಾನಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಈಗ ವಕ್ಫ ಬೋರ್ಡ್ ಪಹಣಿಯಲ್ಲಿ ತನ್ನ ಹೆಸರು ಸೇರುತ್ತಿರುವುದರಿಂದ ರೈತರಿಗೆ ಆತಂಕ ಎದುರಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಆಗಿರುವ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:33 am, Wed, 6 November 24