
ಯಾದಗಿರಿ, ಮೇ 14: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಭಾರತೀಯ ಸೇನೆಯು ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogans) ಕೂಗಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕೆಲವು ಘಟನೆಗಳು ವರದಿಯಾಗಿವೆ. ಇದೀಗ, ಧರ್ಮ ಹಾಗೂ ಜನಾಂಗಗಳ ನಡುವೆ ದ್ವೇಷ ಹಬ್ಬಿಸುವ ವಿಡಿಯೋ (Hate Video) ಪೋಸ್ಟ್ ಮಾಡಿದ ಆರೋಪದಲ್ಲಿ ಯಾದಗಿರಿ ನಗರದ ನಿವಾಸಿ ಜಾಫರ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಮಾ ಪಠಣಕ್ಕೆ ಸಬಂಧಿಸಿದ ಬರಹ ಇರುವುದು ಎನ್ನಲಾದ ಕರಪತ್ರಗಳನ್ನು ಕೆಲವರು ಕಾಲಿನಿಂದ ಒದೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ, ‘ಕಲ್ಮಾಗೆ ಅವಮಾನ ಮಾಡಿದರೆ ನಾನು ಜೀವ ಕೊಡುವುದಕ್ಕೂ ಸಿದ್ಧನಿದ್ದೇನೆ. ಜೀವ ತೆಗೆಯಲೂ ಸಿದ್ಧನಿದ್ದೇನೆ’ ಎಂದು ಪೋಸ್ಟ್ ಮಾಡಿದ್ದ.
‘ನಮ್ಮವರೇ ಆದರೇನು, ಬೇರೆಯವರು ಆದರೇನು, ಜಗತ್ತಿನಲ್ಲಿ ಬೇರೆ ಯಾರ ಜೊತೆಗೆ ಬೇಕಾದರೂ ಪ್ರತೀಕಾರ ತೆಗೆದುಕೊಳ್ಳಿ. ಆದರೆ ಕಲ್ಮಾ ಜೊತೆ ಅಲ್ಲ. ಕಲ್ಮಾಗೆ ಅವಮಾನ ಮಾಡಿದರೆ ಜೀವ ತೆಗೆಯಲು ಸಿದ್ಧನಿದ್ದೇನೆ’ ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದ.
ಆರೋಪಿ ಜಾಫರ್ ಖಾನ್ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 192, 353(2) ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಛತ್ತೀಸ್‌ಗಢ ಮೂಲದ ಶುಭಾಂಶು ಶುಕ್ಲಾ ಎಂಬ ಟೆಕ್ಕಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಜಾಫರ್ ಖಾನ್ನ ಬಂಧನವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ ಎಂಬ ವಿಡಿಯೋ ವೈರಲ್: ಬೆಂಗಳೂರಿನಲ್ಲಿ ಯುವಕನ ಬಂಧನ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Wed, 14 May 25