
ಯಾದಗಿರಿ, (ಏಪ್ರಿಲ್ 21): ಸಿದ್ದರಾಮಯ್ಯ (Siddaamaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ (Congress Government) ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯಕವಾಗಿವೆ. ಅದರಲ್ಲೂ ಪ್ರತಿ ತಿಂಗಳು 2000 ರೂ ನೀಡುವ ಗೃಹಲಕ್ಷ್ಮೀ ಯೋಜನೆಯಿಂದ (gruha lakshmi scheme) ಅದೆಷ್ಟೋ ಬಡವರಿಗೆ ಸಹಾಯಕವಾಗಿದೆ. ಈ ಹಣವನ್ನು ಕೂಡಿಟ್ಟು ನಾನಾ ರೀತಿ ಉಪಯೋಗಕ್ಕೆ ಬಳಿಸಿಕೊಂಡಿದ್ದಾರೆ. ಅದರಂತೆ ಯಾದಗಿರಿ(Yadgir) ತಾಲೂಕಿನ ಹತ್ತಿಕುಣಿ ಗ್ರಾಮದ ಮಹಿಳೆಯೋರ್ವಳು ಇದೇ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಇದೀಗ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾಳೆ. ಹೌದು…ಕೂಲಿ ಕೆಲಸ ಬಿಟ್ಟು ಗೃಹ ಲಕ್ಷ್ಮೀ ಹಣದಿಂದ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾಳೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಮುಮ್ತಾಜ್ ಬೇಗಂ ಎಂಬ ಮಹಿಳೆ ಇದೆ ಯೋಜನೆಯಿಂದ ಬಂದ ಹಣದಿಂದ ಸ್ವಂತ ಉದ್ಯಮವೊಂದನ್ನ ಆರಂಭಿಸಿದ್ದಾಳೆ. ಗೃಹ ಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಮನೆಯ ಮುಂದೆ ಚಿಕ್ಕದಾದ ಕಿರಾಣಿ ಅಂಗಡಿಯನ್ನ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾಳೆ. ಈ ಯೋಜನೆ ಜಾರಿಗೆ ಮಾಡಿದ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧನ್ಯವಾದಗಳು ತಿಳಿಸುತ್ತಿದ್ದಾಳೆ.
ಕಳೆದ 20-20 ತಿಂಗಳಿನಿಂದ ತಿಂಗಳಿಗೆ 2 ಸಾವಿರ ಬಂದಂತ ಹಣವನ್ನ ಖರ್ಚು ಮಾಡದೆ ಜಮಾ ಮಾಡಿಕೊಂಡಿಟ್ಟುಕೊಂಡಿದ್ದಳು. ತಾನು ಸಹ ಯಾವುದೇ ಖರ್ಚಿಗೆ ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ ಗೃಹ ಲಕ್ಷ್ಮೀ ಯೋಜನೆಯಿಂದ ಬಂದ ಸುಮಾರು 40 ಸಾವಿರಕ್ಕೂ ಅಧಿಕ ಹಣವನ್ನ ಪೈಸೆ ಪೈಸೆಗೆ ಲೆಕ್ಕ ಹಾಕಿ ಕೂಡಿಟ್ಟಿದ್ದು, ಇದೀಗ ಎಲ್ಲಾ ಹಣವನ್ನ ಸೇರಿಸಿ ಮನೆಯ ಮುಂದೆ ಸಣ್ಣ ಕಿರಾಣಿ ಅಂಗಡಿ ಹಾಕಿಕೊಂಡಿದ್ದಾಳೆ. ಈ ಕಿರಾಣಿ ಅಂಗಡಿ ಆರಂಭಿಸಲು ಯಾವುದೇ ಮನೆಯಿಂದ ನಯಾ ಪೈಸೆ ಪಡೆದಿಲ್ಲ. ಕೇವಲ ಗೃಹ ಲಕ್ಷ್ಮೀ ಯೋಜನೆ ಹಣದಿಂದಲೇ ಅಂಗಡಿ ಆರಂಭಿಸಿದ್ದಾಳೆ.
ಅಂಗಡಿಯಲ್ಲಿ ಬಿಸ್ಕಾಟ್,ಚಾಕಲೇಟ್ ಮತ್ತೆ ಅಡುಗೆಗೆ ಬಳಕೆಯಾಗುವ ಸಕ್ಕರೆ,ಹಿಟ್ಟು,ಅಕ್ಕಿ ಸೇರದಂತೆ ನಾನಾ ಪದಾರ್ಥಗಳನ್ನು ತಂದು ಮಾರಾಟ ಮಾಡುತ್ತಿದ್ದಾಳೆ. ಇದಕ್ಕೂ ಮೊದಲು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಬೆಳಗ್ಗೆಯಿಂದ ಸಂಜೆ ತನಕ ಬಿಸಿಲಿನಲ್ಲಿ ಕೂಲಿ ಕೆಲಸ ಮಾಡಿದ್ರೆ 200 ರೂ. ಕೊಡುತ್ತಿದ್ದರು. ಆದ್ರೆ ಈಗ ಅಂಗಡಿಯಿಂದ ಸುಮಾರು ನಿತ್ಯ 300-400 ಲಾಭ ಪಡೆಯುತ್ತಿದ್ದಾಳೆ. ಈ ಯೋಜನೆಯಿಂದ ಮುಮ್ತಾಜ್ ಬೇಗಂ ಜೀವನ ಬದಲಾಗಿದೆ ಅಂತಾರೆ ಗ್ರಾಮಸ್ಥರು..
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರಂಟಿಗಳನ್ನ ಜಾರಿ ಮಾಡುವ ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಹೇಳಿದಂತೆ ಐದು ಗ್ಯಾರಂಟಿಗಳನ್ನ ಜಾರಿ ಮಾಡಿದೆ. ಈ ಐದು ಗ್ಯಾರಂಟಿಗಳಿಂದ ಸಾಕಷ್ಟು ಬಡ ಮತ್ತು ಮದ್ಯದ ವರ್ಗದ ಜನರಿಗೆ ಸಾಕಷ್ಟು ಅನುಕೂಲ ಕೂಡ ಆಗಿದೆ. ಅದರಲ್ಲೂ ಗೃಹ ಲಕ್ಷ್ಮೀ ಯೋಜನೆಯಿಂದ ರಾಜ್ಯದ ಸಾಕಷ್ಟು ಬಡ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ಮೂಲಕ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳಿಂದ ಜನರಿಗೆ ಒಂದಲ್ಲ ಒಂದು ರೀತಿ ಸಹಾಯಕವಾಗಿದೆ. ಅದರಲ್ಲೂ ಈ ಗೃಹ ಲಕ್ಷ್ಮೀ ಯೋಜನೆಯಿಂದ ಸಾಕಷ್ಟು ಮಹಿಳೆಯರ ಜೀವನದಲ್ಲಿ ಬದಲಾಣೆ ಆಗಿದೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಈ ಮುಮ್ತಾಜ್ ಬೇಗಂ ಕಟ್ಟಿಕೊಂಡಿರುವ ಸ್ವಾವಲಂಬಿ ಬದುಕೆ ಸಾಕ್ಷಿ ಅಂದ್ರೆ ತಪ್ಪಾಗಲಾರದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ