ಯಾದಗಿರಿ: ಶಹಾಪುರ ತಾಲೂಕಿನ ಬೇವನಹಳ್ಳಿ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 400 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ವಸತಿ ಶಾಲೆಗೆ ಸರ್ಕಾರ ತಿಂಗಳಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಆದರೆ ಇಲ್ಲಿ ವ್ಯವಸ್ಥೆನೇ ಬೇರೆಯಿದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯ ಒದಗಿಸಿ ಕೊಡದೆ ಇರುವ ಕಾರಣಕ್ಕೆ ವಿದ್ಯಾರ್ಥಿಗಳು ಬೀದಿಗಿಳಿಯುವಂತಾಗಿದೆ.
ಶಹಾಪುರ ತಾಲೂಕಿನ ಬೇವನಹಳ್ಳಿ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 400 ವಿದ್ಯಾರ್ಥಿಗಳು ಮಾರ್ಚ್ 22ಕ್ಕೆ ರೊಚ್ಚಿಗೆದ್ದಿದ್ದರು. ತಮಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ಹಾಗೂ ಸ್ಟಾಪ್ ನರ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ 30 ಕಿಲೋಮೀಟರ್ ದೂರದಲ್ಲಿರುವ ವಸತಿ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆದುಕೊಂಡು ಬಂದು ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರ ಕೊಡಲು ಮುಂದಾಗಿದ್ದರು. ಹೀಗಾಗಿ ಮಾರ್ಚ್ 22ಕ್ಕೆ ವಸತಿ ಶಾಲೆಯಲ್ಲಿರುವ 6 ರಿಂದ 12 ನೇ ತರಗತಿಯ 400 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ ಕಾಲ್ನಡಿಗೆ ಮೂಲಕ ದಾರಿ ಹಿಡಿದು ನಡೆಯುವುದಕ್ಕೆ ಆರಂಭಿಸಿದ್ದರು. ಸುಮಾರು 7 ಕಿಲೋಮೀಟರ್ ವರೆಗೆ ಬಂದಿದ್ದ ವಿದ್ಯಾರ್ಥಿಗಳು ನೇರವಾಗಿ ವಾರ್ಡನ್ ಹಾಗೂ ಈ ವಸತಿ ಶಾಲೆಯಲ್ಲಿರುವ ಸ್ಟಾಪ್ ನರ್ಸ್ ವಿರುದ್ಧ ದಿಕ್ಕಾರ ಕೂಗುತ್ತಿದ್ದರು. ಸರಿಯಾದ ವ್ಯವಸ್ಥೆ ಕಲ್ಪಿಸದ ವಾರ್ಡನ್ ಮತ್ತು ನರ್ಸ್ ಇಲ್ಲಿಂದ ಸ್ಥಳಾಂತರಿಸುವಂತೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು.
ವಾರ್ಡನ್ ವಿರುದ್ಧ ಆಕ್ರೋಶ
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಈ ವಸತಿ ಶಾಲೆಯಲ್ಲಿ ಇಲಾಖೆಯ ಗೈಡ್ ಲೈನ್ಸ್ ಪ್ರಕಾರ ಊಟದ ಮೇನು ಚಾರ್ಟ್ ಪ್ರಕಾರ ಊಟ ಮತ್ತು ತಿಂಡಿಯನ್ನ ನೀಡಬೇಕು. ಆದರೆ ವಿದ್ಯಾರ್ಥಿಗಳು ಮಾಡುತ್ತಿರುವ ಆರೋಪದ ಪ್ರಕಾರ, ಈ ವಸತಿ ಶಾಲೆಯಲ್ಲಿ ಇಲ್ಲಿವರೆಗೂ ವಾರ್ಡನ್ ಮೇನು ಚಾರ್ಟ್ ತೋರಿಸಿಯೇ ಇಲ್ಲವಂತೆ. ಎಲ್ಲಿ ಮೇನು ಚಾರ್ಟ್ನ ತೋರಿಸಿದರೆ ವಿದ್ಯಾರ್ಥಿಗಳು ಅದರ ಪ್ರಕಾರ ಊಟ ಕೇಳುತ್ತಾರೆ ಅಂತ ವಾರ್ಡನ್ ಮೇನು ಚಾರ್ಟ್ ಇಲ್ಲಿವರೆಗೆ ತೋರಿಸಿಲ್ಲವಂತೆ. ಕಳಪೆ ಮಟ್ಟದ ಊಟವನ್ನು ನೀಡಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿದ್ದಾರಂತೆ. ಇನ್ನು ವಿದ್ಯಾರ್ಥಿಗಳು ಕಳಪೆ ಮಟ್ಟದ ಊಟ ತಿಂದು ಅನಾರೋಗ್ಯಕ್ಕೆ ತುತ್ತಾಗಿರುವ ಉದಾಹರಣೆ ಕೂಡ ಇದೆ. ಇದೆ ಕಾರಣದಿಂದ ವಿದ್ಯಾರ್ಥಿಗಳಿಗೆ ರಕ್ತದ ಕೊರತೆ ಎದುರಾಗಿದಂತೆ.
ಸ್ಟಾಪ್ ನರ್ಸ್ ವಿರುದ್ಧ ಆರೋಪ
ಇವೆಲ್ಲಾ ವಾರ್ಡನ್ ಅವರ ಕಥೆಯಾದರೆ, ಸ್ಟಾಪ್ ನರ್ಸ್ ಅವರು ದಿನದ 24 ಗಂಟೆ ಇದೆ ವಸತಿ ಶಾಲೆಯಲ್ಲಿ ಇರಬೇಕು. ಆದರೆ ಇಲ್ಲಿನ ಸ್ಟಾಪ್ ನರ್ಸ್ ಸರ್ಕಾರಿ ಸಂಬಳ ಪಡೆದು ಹೊರಗಡೆ ಕೆಲಸ ಮಾಡುತ್ತಿದ್ದಾರಂತೆ. ಹೀಗಾಗಿ ಇಲ್ಲಿಯ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಏನಾದರು ಏರುಪೇರು ಆದರೆ ಯಾರು ಜವಾಬ್ದಾರರಾಗಿರುತ್ತಾರೆ. ರಾತ್ರಿ ವೇಳೆ ಸಾಕಷ್ಟು ಬಾರಿ ವಿದ್ಯಾರ್ಥಿಗಳು ಆರೋಗ್ಯದಲ್ಲಿ ಏರುಪೇರು ಆಗಿ ಶಹಾಪುರ ಆಸ್ಪತ್ರೆಗೆ ಹೋಗಿದ್ದಾರಂತೆ. ಇಷ್ಟೆಲ್ಲಾ ಸಮಸ್ಯೆಯಿದೆ ಅಂತ ಸ್ಟಾಪ್ ನರ್ಸ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳಿಗೆ ಹೊಡೆಯೋದಾಗಿ ಸ್ಟಾಪ್ ನರ್ಸ್ ದಮ್ಕಿ ಹಾಕುತ್ತಿದ್ದಾರಂತೆ. ಸಮಸ್ಯೆಗಳನ್ನು ಅಧಿಕಾರಿಗಳಿಗೆ ಗೊತ್ತಿದ್ದರು ಏನು ಕ್ರಮ ಕೈಗೊಂಡಿಲ್ಲ ಅಂತ ವಿದ್ಯಾರ್ಥಿಗಳು ರೊಚ್ಚಿಗೆದ್ದು, ಮಾರ್ಚ್ 22ಕ್ಕೆ ತರಗತಿಗೆ ಗೈರಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಅಂದರೆ ದೋರನಹಳ್ಳಿ ಬಳಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆ ಬಗೆ ಹರಿಸುತ್ತೇವೆಂದು ಭರವಸೆ ಕೊಟ್ಟಿದ್ದಾರೆ. ಇದೆ ಕಾರಣದಿಂದ ವಿದ್ಯಾರ್ಥಿಗಳು ನಡಿಗೆಯನ್ನ ಕೈಬಿಟ್ಟು ವಾಪಸ್ ಶಾಲೆಗೆ ಬಂದಿದ್ದಾರೆ.
ಇದನ್ನೂ ಓದಿ
ಚಿಕ್ಕಮಗಳೂರಿನಲ್ಲಿ ಅಪರೂಪದ ಕಾಡುಪಾಪ ದರ್ಶನ.. ನಾಯಿಗಳಿಂದ ರಕ್ಷಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟ ಜನ
Published On - 11:14 am, Wed, 24 March 21