ಜಮೀರ್ ಅಹ್ಮದ್​ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ!

ದಾವಣಗೆರೆ ದಕ್ಷಿಣ ಉಪಚುನಾವಣೆಯ ಆಂತರಿಕ ಬಂಡಾಯ ಸಂಬಂಧಿತ ಆಡಿಯೋ ವೈರಲ್ ಹಿರಿಯ ನಾಯಕ ಜಮೀರ್ ಅಹ್ಮದ್ ಖಾನ್​ಗೆ ಮುಳುವಾದಂತೆ ಕಾಣಿಸುತ್ತಿದೆ. ನೂತನ ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಮೊದಲ ಹಂತದಲ್ಲಿ ಸ್ಥಾನ ಕೈತಪ್ಪಿದ್ದು, ಮುಂದೆಯೂ ಅವಕಾಶ ತಪ್ಪುವ ಮುನ್ಸೂಚನೆ ಲಭ್ಯವಾಗಿದೆ. ಇದರ ಬೆನ್ನಲ್ಲೇ ಜಮೀರ್ ಪರವಾಗಿ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದಾರೆ.

ಜಮೀರ್ ಅಹ್ಮದ್​ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ!
ಜಮೀರ್ ಅಹ್ಮದ್ ಖಾನ್
Image Credit source: tv9

Updated on: Jun 04, 2026 | 1:18 PM

ಬೆಂಗಳೂರು, ಜೂನ್ 4: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್​ಗೆ (Zameer Ahmed Khan) ಡಿಕೆ ಶಿವಕುಮಾರ್ (DK Shivakumar) ನೂತನ ಸಂಪುಟದಲ್ಲಿ ಮೊದಲ ಅವಕಾಶ ಕೈತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ 2.0 ಸರ್ಕಾರದಲ್ಲಿ ಜಮೀರ್​​ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ವೇಳೆ ಉಂಟಾದ ಆಂತರಿಕ ಭಿನ್ನಮತ ಹಾಗೂ ಬಂಡಾಯವೇ ಜಮೀರ್‌ಗೆ ಹಿನ್ನಡೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ದಾವಣಗೆರೆ ಉಪಚುನಾವಣೆ ಬಂಡಾಯ ಹಾಗೂ ಹೈಕಮಾಂಡ್ ಅಸಮಾಧಾನ

ಏಪ್ರಿಲ್ 9 ರಂದು ನಡೆದಿದ್ದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಬ್ಯಾಂಕ್ ಭಾರಿ ಪ್ರಮಾಣದಲ್ಲಿ ಒಡೆದುಹೋಗಿತ್ತು. ಸುಮಾರು 20 ಕ್ಕೂ ಹೆಚ್ಚು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದು ಅಲ್ಪಸಂಖ್ಯಾತರ ಮತಗಳನ್ನು ಹಂಚಿಕೊಂಡಿದ್ದರು. ಇದರೊಂದಿಗೆ ಎಸ್‌ಡಿಪಿಐ (SDPI) ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ಬರೋಬ್ಬರಿ 19,000 ಮತಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ತಂದಿತ್ತು. ಈ ಇಡೀ ಅಸಮಾಧಾನ ಮತ್ತು ಬಂಡಾಯದ ಹಿಂದೆ ಜಮೀರ್ ಅಹ್ಮದ್ ಖಾನ್ ಅವರ ಕೈವಾಡವಿದೆ ಎಂದು ಹೈಕಮಾಂಡ್‌ಗೆ ದೂರು ಸಲ್ಲಿಕೆಯಾಗಿತ್ತು. ವಿಡಿಯೋ ಹಾಗೂ ಆಡಿಯೋವೊಂದು ವೈರಲ್ ಆಗಿದ್ದು, ಅದು ಎಐ (AI) ಸೃಷ್ಟಿತ ಎಂದು ಜಮೀರ್ ಸಮರ್ಥಿಸಿಕೊಂಡಿದ್ದರೂ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರನ್ನು ಕೈಬಿಡಲಾಗಿದ್ದು, ಈಗ ಜಮೀರ್ ಅವರ ಹೆಸರನ್ನು ಮೊದಲ ಪಟ್ಟಿಯಿಂದ ದೂರ ಇಡಲಾಗಿದೆ.

ಪ್ರಮಾಣವಚನ ಕಾರ್ಯಕ್ರಮದ ನಡುವೆಯೇ ಎದ್ದುಹೋಗಿದ್ದ ಜಮೀರ್

ಬುಧವಾರ (ಜೂನ್ 3) ಲೋಕಭವನದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಜಮೀರ್ ಅಹ್ಮದ್ ಖಾನ್ ಅರ್ಧದಲ್ಲೇ ಎದ್ದುಹೋಗಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ವಂದೇ ಮಾತರಂ’ ಪ್ರಸಾರವಾಗುತ್ತಿದ್ದ ವೇಳೆಯೇ ಜಮೀರ್ ಎದ್ದುಹೋಗಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೂ ಸಹ ಮುಂದಿನ ದಿನಗಳಲ್ಲಿ ಜಮೀರ್​ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಜಮೀರ್ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್

ಜಮೀರ್ ಅಹ್ಮದ್ ಖಾನ್​ಗೆ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರ ಪರವಾಗಿ ಧ್ವನಿ ಎತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಸೇವೆ ಮತ್ತು ಶಕ್ತಿ ನಮ್ಮ ಪಕ್ಷಕ್ಕೆ ತೀರಾ ಅಗತ್ಯವಿದೆ. ಜಮೀರ್ ಅವರಿಗೆ ಸಚಿವ ಸ್ಥಾನ ತಪ್ಪಿಸಲೆಂದೇ ಕೊನೆ ಹಂತದಲ್ಲಿ ವ್ಯವಸ್ಥಿತ ರಾಜಕಾರಣ ಮಾಡಲಾಗಿದ್ದು, ಉದ್ದೇಶಪೂರ್ವಕವಾಗಿ ಆಡಿಯೋವನ್ನು ಹರಿಬಿಡಲಾಗಿದೆ. ಒಂದು ಆಡಿಯೋ ಬಿಟ್ಟರೇನು, ಎರಡು ಆಡಿಯೋ ಬಿಟ್ಟರೇನು? ಒಟ್ಟಿನಲ್ಲಿ ಅವರ ಸಚಿವ ಸ್ಥಾನ ತಪ್ಪಿಸಬೇಕೆಂಬ ವಿರೋಧಿಗಳ ಉದ್ದೇಶ ಸಫಲವಾಯಿತು ಎಂದು ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು

ಅಲ್ಲದೆ, ಇದಕ್ಕೂ ಹಳೆಯ ಸಿಡಿ ಫ್ಯಾಕ್ಟರಿ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಜಮೀರ್ ಶಕ್ತಿಯನ್ನು ಪಕ್ಷ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Thu, 4 June 26

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us