ಈ ವರ್ಷದ ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್ ಮಂಡಿಸುವ ವೇಳೆಯಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದರು. ಏಪ್ರಿಲ್ 1ನೇ ತಾರೀಕಿನಿಂದ ಈ ಬದಲಾವಣೆಗಳು ಜಾರಿಗೆ ಬರಲಿದ್ದು, 75 ವರ್ಷ ಮತ್ತು ಮೇಲ್ಪಟ್ಟವರ ಪಿಂಚಣಿ ಹಾಗೂ ಅದೇ ಬ್ಯಾಂಕ್ನಲ್ಲಿ ದೊರೆಯುವ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿಗೆ ಏಪ್ರಿಲ್ 1ರಿಂದ ಐಟಿಆರ್ ಫೈಲಿಂಗ್ನಿಂದ ವಿನಾಯಿತಿ ಇದೆ. ಇನ್ನು ಯಾರು ಐಟಿಆರ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಹೆಚ್ಚಿನ ದರದ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಹಾಗೂ ಇಪಿಎಫ್ ಖಾತೆಗೆ ವಾರ್ಷಿಕವಾಗಿ ರೂ. 2.5 ಲಕ್ಷದ ಮೇಲೆ ಹಣ ಜಮೆ ಮಾಡುವವರಿಗೆ ತೆರಿಗೆ ಹಾಕುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾವ ಮಾಡಿದ್ದರು.
ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬರುವ 5 ಬದಲಾವಣೆಗಳು:
ಪ್ರಾವಿಡೆಂಟ್ ಫಂಡ್ (ಭವಿಷ್ಯ ನಿಧಿ) ನಿಯಮ: ಉದ್ಯೋಗಿಗಳು ಜಮೆ ಮಾಡುವ ಭವಿಷ್ಯ ನಿಧಿ ಹಣಕ್ಕೆ ವಾರ್ಷಿಕವಾಗಿ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಬಂದಲ್ಲಿ ಅದಕ್ಕೆ ತೆರಿಗೆ ಬೀಳುತ್ತದೆ. ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್)ಗೆ ಹೆಚ್ಚಿನ ಹಣ ಜಮೆ ಮಾಡುವ ಉದ್ಯೋಗಿಗಳಿಗೆ ತೆರಿಗೆ ಹಾಕುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಯಾವ ವ್ಯಕ್ತಿಗಳ ಆದಾಯ ತಿಂಗಳಿಗೆ 2 ಲಕ್ಷ ರೂಪಾಯಿಗಿಂತ ಕಡಿಮೆ ಇರುತ್ತದೋ ಅಂಥವರಿಗೆ ಈಗಿನ ಪ್ರಸ್ತಾವದಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ನಿರ್ಮಲಾ ಹೇಳಿದ್ದಾರೆ.
ಟಿಡಿಎಸ್: ಹೆಚ್ಚು ಮಂದಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಫೈಲ್ ಮಾಡಲಿ ಎಂಬ ಕಾರಣಕ್ಕೆ ಬಜೆಟ್ 2021ರಲ್ಲಿ ಹಣಕಾಸು ಸಚಿವೆ ಹೆಚ್ಚಿನ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅಥವಾ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಪ್ರಸ್ತಾವ ಮಾಡಿದ್ದಾರೆ. ಬಜೆಟ್ನಲ್ಲಿ ಹೊಸದಾಗಿ ಸೆಕ್ಷನ್ 206AB ಮತ್ತು 206CCA ಸೇರಿಸಲಾಗಿದೆ. ಯಾರು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಹೆಚ್ಚಿನ ದರದ ಟಿಡಿಎಸ್ ಹಾಗೂ ಟಿಸಿಎಸ್ ಬೀಳುತ್ತದೆ.
75 ವರ್ಷ ಮೇಲ್ಪಟ್ಟವರಿಗೆ ಐಟಿಆರ್ ಫೈಲಿಂಗ್ನಿಂದ ವಿನಾಯಿತಿ: ಹಿರಿಯ ನಾಗರಿಕರಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ನಿಂದ ಬಜೆಟ್ನಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ ಇದು ಯಾರಿಗೆ ಅನ್ವಯ ಆಗುತ್ತದೆ ಅಂದರೆ, ಯಾವ ಹಿರಿಯ ನಾಗರಿಕರು ತಮ್ಮ ಪಿಂಚಣಿ (ಪೆನ್ಷನ್) ಮತ್ತು ಬ್ಯಾಂಕ್ಗಳಿಂದ ಬಡ್ಡಿಯ ಆದಾಯದ ಮೇಲೆ ಆಧಾರ ಪಟ್ಟು, ಪಿಂಚಣಿ ಖಾತೆಯನ್ನು ಹೊಂದಿರುತ್ತಾರೋ ಅಂಥವರಿಗೆ ಅನ್ವಯಿಸುತ್ತದೆ.
ಮುಂಚಿತವಾಗಿಯೇ ಭರ್ತಿ ಮಾಡಿದ ಐಟಿಆರ್ ಅರ್ಜಿಗಳು: ತೆರಿಗೆ ಪಾವತಿಸುವವರಿಗೆ ಸಲೀಸಾಗಲಿ ಎಂಬ ಕಾರಣಕ್ಕೆ ವೇತನದ ಆದಾಯ, ತೆರಿಗೆ ಪಾವತಿ, ಟಿಡಿಎಸ್ ಮುಂತಾದವಕ್ಕೆ ವೈಯಕ್ತಿಕ ತೆರಿಗೆದಾರರಿಗೆ ಮುಂಚಿತವಾಗಿಯೇ ಭರ್ತಿ ಮಾಡಿದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ನೀಡಲಾಗುವುದು. ರಿಟರ್ನ್ಸ್ ಫೈಲಿಂಗ್ ಇನ್ನಷ್ಟು ಸುಲಭ ಆಗಲಿ ಎಂಬ ಕಾರಣಕ್ಕೆ ಲಿಸ್ಟೆಡ್ ಸೆಕ್ಯೂರಿಟಿಗಳ ಕ್ಯಾಪಿಟಲ್ ಗೇಯ್ನ್ಸ್, ಡಿವಿಡೆಂಡ್ ಆದಾಯ ಮತ್ತು ಬ್ಯಾಂಕ್, ಅಂಚೆ ಕಚೇರಿಯಿಂದ ಬಂದ ಬಡ್ಡಿ ಇತ್ಯಾದಿಗಳನ್ನು ಸಹ ಮುಂಚಿತವಾಗಿ ಭರ್ತಿ ಮಾಡಲಾಗುವುದು. ಐಟಿಆರ್ ಫೈಲಿಂಗ್ ಸುಲಭವಾಗಲಿ ಎಂದು ಹೀಗೆ ಮಾಡಲಾಗುತ್ತದೆ.
ಎಲ್ಟಿಸಿ: ಲೀವ್ ಟ್ರಾವೆಲ್ ಕನ್ಸೆಷನ್ (ಎಲ್ಟಿಸಿ) ನಗದಿಗೆ ಕೇಂದ್ರ ಸರ್ಕಾರವು 2021ರ ಬಜೆಟ್ನಲ್ಲಿ ವಿನಾಯಿತಿಯನ್ನು ಪ್ರಸ್ತಾವ ಮಾಡಿದೆ. ಕೊರೊನಾ ಕಾರಣದಿಂದ ಪ್ರಯಾಣ ನಿರ್ಬಂಧ ಇದ್ದದ್ದಕ್ಕೆ ಯಾರು ಎಲ್ಟಿಸಿ ತೆರಿಗೆ ಅನುಕೂಲವನ್ನು ಕ್ಲೇಮ್ ಮಾಡಿಕೊಳ್ಳಲು ಆಗದಿದ್ದರಿಂದ ಕಳೆದ ವರ್ಷ ಸರ್ಕಾರದಿಂದ ಈ ಯೋಜನೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?