ಕೊಲ್ಕತ್ತಾ: ಅಧಿಕಾರ ಪಡೆಯುವ ಗುರಿಯಲ್ಲಿ ತೃಣಮೂಲ ಕಾಂಗ್ರೆಸ್ನಿಂದ ಆಗಮಿಸುವವರನ್ನೆಲ್ಲಾ ಒಳಗೆ ಬಿಟ್ಟುಕೊಂಡಿರುವ ಬಿಜೆಪಿಗೆ ಈಗ ಈ ಅತಿಥಿಗಳೇ ಮುಳ್ಳಾಗಿ ಪರಿಣಮಿಸುತ್ತಿದ್ದಾರೆ. ನಿನ್ನೆ ಕೊಲ್ಕತ್ತಾ ಬಿಜೆಪಿ ಚುನಾವಣಾ ಕಚೇರಿಯ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ನಿಂದ ಆಗಮಿಸಿದವರಿಗೆ ಟಿಕೆಟ್ ಘೋಷಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಬಂಗಾಳ ಬಿಜೆಪಿ ಹಿರಿಯ ಮುಖಂಡರಾದ ಮುಕುಲ್ ರಾಯ್, ಅರ್ಜುನ್ ಸಿಂಗ್ ಮತ್ತು ಶಿವ ಪ್ರಕಾಶ್ ಅವರುಗಳಿಗೆ ಈ ಪ್ರತಿಭಟನೆಯ ಬಿಸಿ ಜೋರಾಗಿಯೇ ತಟ್ಟುವ ಸಾಧ್ಯತೆಗಳು ಕಂಡುಬಂದಿದೆ.
ಅದರಲ್ಲೂ ಗುವಾಹಟಿಯಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದ ಗೃಹ ಸಚಿವ ಅಮಿತ್ ಶಾ ಅನಿರಿಕ್ಷಿತವಾಗಿ ಕೊಲ್ಕತ್ತಾದಲ್ಲಿ ತಂಗಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಹ ಇಂದಿನಿಂದ ಎರಡು ದಿನಗಳ ಕಾಲ ಚುನಾವಣಾ ಪ್ರಚಾರ ಕೈಗೊಳ್ಳಲು ಕೊಲ್ಕತ್ತಾ ತಲುಪಿದ್ದರು. ಈ ಎರಡೂ ನಾಯಕರು ಕೊಲ್ಕತ್ತಾದಲ್ಲಿ ಇರುವಾಗಲೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.
ಟಿಕೆಟ್ ಘೋಷಣೆ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಹಿರಿಯ ನಾಯಕರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತಿಭಟನೆಯ ಬಿಸಿಗೆ ಕೆಲವೆಡೆ ಬಿಜೆಪಿ ಕಚೇರಿಗಳು ಸಹ ಧ್ವಂಸವಾಗಿವೆ. ಮಾಜಿ ತೃಣಮೂಲ ಶಾಸಕ ರವೀಂದ್ರನಾಥ್ ಭಟ್ಟಾಚಾರ್ಯ, ಮೋಹಿತ್ ಘಾಟಿ ಅವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ. ಚಿನ್ಸುರಾ ಮತ್ತು ಸಿಂಗೂರ್ಗಳಲ್ಲಿ ಬಿಜೆಪಿ ಕಚೇರಿಗಳು ಪ್ರತಿಭಟನೆಯ ಬಿಸಿಗೆ ಧ್ವಂಸವಾಗಿವೆ.
#WATCH West Bengal: BJP workers protest at Hastings in Kolkata, demanding that the party’s candidate from Canning Paschim Assembly constituency be changed.
Party has fielded Arnab Roy from the constituency. pic.twitter.com/gRz7BG8Zpu
— ANI (@ANI) March 16, 2021
ತೃಣಮೂಲ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗುವ ನಿರೀಕ್ಷೆಗಳು ಇಲ್ಲದ ಕಾರಣ ಹಲವು ನಾಯಕರು ಬಿಜೆಪಿ ಸೇರಿದ್ದರು. ಅವರಿಗೆ ಮಣೆ ಹಾಕಿದ್ದ ಬಿಜೆಪಿಯ ನಡೆ ಪಕ್ಷದ ಮೂಲ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿತ್ತು. ಅಭ್ಯರ್ಥಿಗಳ ಬಲಾಬಲಗಳನ್ನು ಅಳೆದೂ ತೂಗಿ ಬಿಜೆಪಿ ಟಿಕೆಟ್ ನೀಡಿತ್ತು. ಆದರೂ ಕಾರ್ಯಕರ್ತರ ಅಭಿಪ್ರಾಯವನ್ನು ಕಡೆಗಣಿಸಲಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿತ್ತು.
ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿ ಸೇರಿದವರಲ್ಲೇ ಭಿನ್ನಮತ
ಹಲವು ಸ್ಥಳೀಯ ನಾಯಕರು ಟಿಎಂಸಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹಲ್ದಿಯಾ ನಗರ ಪಾಲಿಕೆಯ ಮಾಜಿ ಅಧ್ಯಕ್ಷ ಶ್ಯಾಮಲ್ ಕುಮಾರ್ ಆದಕ್, ಸ್ಥಳೀಯ ಮುಖಂಡರಾದ ಸ್ವಪನ್ ದಾಸ್ ಮತ್ತು ಸುಪ್ರಿಯಾ ಮೇಟಿಯವರು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈಗಾಗಲೇ ತಮ್ಮ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಟಿಎಂಸಿಯ ದೆಬಶ್ರೀ ರಾಯ್ ಟಿಎಂಸಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಮೂಲತಃ ಕಲಾವಿದೆ, ನಟಿಯೂ ಆಗಿದ್ದ ಅವರು ಟಿಎಂಸಿಯಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಟಿಎಂಸಿ ದೆಬಶ್ರೀ ರಾಯ್ರಿಗೆ ಟಿಕೆಟ್ ನೀಡದೇ ನಿರಾಸೆ ಉಂಟುಮಾಡಿತ್ತು. ಈ ಕಾರಣ ನೀಡಿ ಉತ್ತರ 24 ಪರಗಣದ ರಾಯ್ದಿಗಿ ಕ್ಷೇತ್ರದ ಶಾಸಕಿ ರಾಜೀನಾಮೆ ಸಲ್ಲಿಸಿ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಅವರು ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಬಂಗಾಳದ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಆದರೆ ದೆಬಶ್ರೀ ರಾಯ್ ಅವರು ಬಿಜೆಪಿ ಸೇರುವುದು ಅಷ್ಟು ಸುಲಭದ್ದಲ್ಲ. ಅವರ ಸೇರ್ಪಡೆಗೆ ಟಿಎಂಸಿಯಿಂದ ಬಿಜೆಪಿ ಸೇರಿದ ಸೋವನ್ ಚಟರ್ಜಿ ಅವರ ವಿರೋಧವಿದೆ. ಸೋವನ್ ಚಟರ್ಜಿ ಕೊಲ್ಕತ್ತಾದ ಮೇಯರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದವರು. ತಳಮಟ್ಟದ ಕಾರ್ಯಕರ್ತ ಜತೆ ಸಂಪರ್ಕ ಹೊಂದಿರುವ ಅವರಿಂದ ಬಿಜೆಪಿ ಪಡೆಯುವ ಲಾಭ ಒಂದೆರಡಲ್ಲ. ಇಂತಹ ನಾಯಕ ಹೇಳಿದ್ದೇನೆಂದರೆ, ‘ಒಂದು ವೇಳೆ ದೆಬಶ್ರೀ ರಾಯ್ ಬಿಜೆಪಿ ಸೇರಿದರೆ ನಾನು ಬಿಜೆಪಿ ತೊರೆಯುತ್ತೇನೆ’. ಇವರಿಬ್ಬರೂ ಮೂಲತಃ ಟಿಎಂಸಿಗರೇ ಆಗಿದ್ದರೂ ಬಿಜೆಪಿ ಸೇರುವ ವಿಷಯದಲ್ಲಿ ಒಮ್ಮತ ಮೂಡುವ ಸಂಭವ ಕಾಣುತ್ತಿಲ್ಲ.
ಸದ್ಯ ಗೆಲ್ಲಲೇಬೇಕು ಎಂಬುದಷ್ಟೇ ಬಿಜೆಪಿ ಎದುರಿರುವ ಗುರಿ. ಇದೇ ಕಾರಣದಿಂದ ಬಿಜೆಪಿ ಟಿಎಂಸಿಯ ತಳಮಟ್ಟದ ನಾಯಕರನ್ನು ಪಕ್ಷಕ್ಕೆ ಆದರದಿಂದ ಬರಮಾಡಿಕೊಳ್ಳುತ್ತಿದೆ. ಆದರೆ, ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸೇರಿದ ನಾಯಕರ ಬಗ್ಗೆ ಇದೇ ‘ಆದರ’ ಮುಂದಿನ ಎಷ್ಟು ದಿನಗಳ ಕಾಲ ಸಕ್ರಿಯವಾಗಿರಲಿದೆ ಎಂಬ ಪ್ರಶ್ನೆಯಿದೆ. ಏಕೆಂದರೆ, ಗೆದ್ದರೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ಸೇರಿದ ನಾಯಕರಿಗೆ ಅಧಿಕಾರ ಹಂಚುವ ಸಾಹಸ ಬಿಜೆಪಿಗೆ ಎದುರಾಗುವುದು ಗ್ಯಾರಂಟಿ. ಸೋತರೆ, ಚುನಾವಣೆಯ ಹೊಸ್ತಿಲಲ್ಲಿ ಸೇರಿದ ಎಷ್ಟು ನಾಯಕರು ಬಿಜೆಪಿಯಲ್ಲೇ ಉಳಿಯಲಿದ್ದಾರೆ, ಪಕ್ಷ ಸಂಘಟನೆ ಮಾಡಲಿದ್ದಾರೆ ಎಂಬುದು ಯಕ್ಷಪ್ರಶ್ನೆ.
Published On - 1:07 pm, Tue, 16 March 21