ಅನುಮತಿ ಪಡೆಯದೆಯೇ ಬಿಜೆಪಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದೆ, ಚುನಾವಣೆ ಸ್ಪರ್ಧಿಸಲ್ಲ ಎಂದ ಮಾನಂತವಾಡಿಯ ಮಣಿಕುಟ್ಟನ್
Kerala Assembly Elections 2021: ನನ್ನ ಮಾತು ಆಲಿಸಿ. ಬಿಜೆಪಿ ಕೇಂದ್ರ ನಾಯಕತ್ವ ನನ್ನನ್ನು ಮಾನಂತವಾಡಿಯ ಬಿಜೆಪಿ ಶಾಸಕ ಅಭ್ಯರ್ಥಿಯನ್ನಾಗಿ ಪರಿಗಣಿಸಿದ್ದರು. ಪ್ರೀತಿಯಿಂದಲೇ ಆ ಅವಕಾಶವನ್ನು ನಿರಾಕರಿಸುತ್ತಿದ್ದೇನೆ ಎಂದು ಮಣಿಕುಟ್ಟನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ವಯನಾಡ್: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಪ್ರಕಟಿಸಿದ್ದು, ವಯನಾಡ್ ಜಿಲ್ಲೆಯ ಮಾನಂತವಾಡಿ ವಿಧಾನಸಭಾ ಕ್ಷೇತ್ರದಿಂದ 31ರ ಹರೆಯದ ಮಣಿಕುಟ್ಟನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ ಬಿಜೆಪಿ ನನ್ನ ಅನುಮತಿ ಪಡೆಯದೆಯೇ ಅಭ್ಯರ್ಥಿಯನ್ನಾಗಿ ಮಾಡಿದೆ, ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ನನಗಿಲ್ಲ ಎಂದು ಮಣಿಕುಟ್ಟನ್ ಹೇಳಿದ್ದಾರೆ. ಮಾನಂತವಾಡಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜನಾಂಗದವರಿಗೆ ಮೀಸಲು ಕ್ಷೇತ್ರವಾಗಿದೆ. ಹಾಗಾಗಿ ಅಲ್ಲಿನ ನಿವಾಸಿ ಎಂಬಿಎ ಪದವೀಧರ ಮಣಿಕುಟ್ಟನ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿತ್ತು.ವಯನಾಡಿನ ಪಣಿಯಾ ಬುಡಕಟ್ಟು ಜನಾಂಗದಲ್ಲಿ ಎಂಬಿಎ ಪದವಿ ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ ಮಣಿಕುಟ್ಟನ್.
ನನ್ನ ಮಾತು ಆಲಿಸಿ. ಬಿಜೆಪಿ ಕೇಂದ್ರ ನಾಯಕತ್ವ ನನ್ನನ್ನು ಮಾನಂತವಾಡಿಯ ಬಿಜೆಪಿ ಶಾಸಕ ಅಭ್ಯರ್ಥಿಯನ್ನಾಗಿ ಪರಿಗಣಿಸಿದ್ದರು. ಪ್ರೀತಿಯಿಂದಲೇ ಆ ಅವಕಾಶವನ್ನು ನಿರಾಕರಿಸುತ್ತಿದ್ದೇನೆ ಎಂದು ಮಣಿಕುಟ್ಟನ್ ಸೋಮವಾರ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರ ನಾಯಕತ್ವವು ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ನಾನೊಬ್ಬ ಸಾಮಾನ್ಯ ವ್ಯಕ್ತಿ. ನಾನು ಚುನಾವಣೆ ರಾಜಕಾರಣಕ್ಕಿಳಿಯಲು ಬಯಸುವುದಿಲ್ಲ. ನನಗೆ ಕೆಲಸ ಮತ್ತು ಕುಟುಂಬ ಮುಖ್ಯ, ಪಕ್ಷದ ಅವಕಾಶವನ್ನು ನಾನು ಖುಷಿಯಿಂದಲೇ ನಿರಾಕರಿಸುತ್ತಿದ್ದೇನೆ. ನನ್ನ ಹೆಸರು ಟಿವಿಯಲ್ಲಿ ಘೋಷಣೆ ಆದಾಗ ಅಚ್ಚರಿ ಮತ್ತು ಭಯವುಂಟಾಯಿತು. ಪಣಿಯಾ ಸಮುದಾಯದಿಂದ ಅಭ್ಯರ್ಥಿಯೊಬ್ಬರನ್ನು ಬಿಜೆಪಿ ಆಯ್ಕೆ ಮಾಡಿದ್ದಕ್ಕೆ ನನಗೆ ಖುಷಿಯಾಗಿದೆ. ಆದರೆ ನಾನು ಬಿಜೆಪಿ ಅಭ್ಯರ್ಥಿಯಾಗಲ್ಲ ಎಂದು ಅವರಿಗೆ ಫೋನ್ ಮಾಡಿ ತಿಳಿಸಿದ್ದೇನೆ ಎಂದು ಎನ್ಡಿಟಿವಿ ಜತೆ ಮಾತನಾಡಿದ ಮಣಿಕುಟ್ಟನ್ ಹೇಳಿದ್ದಾರೆ.
ಈ ಬೆಳವಣಿಗೆಗಳು ನಡೆಯುತ್ತಿದ್ದಾಗಲೇ ಮಣಿಕುಟ್ಟನ್ ತನ್ನ ಫೇಸ್ಬುಕ್ ಕವರ್ ಫೋಟೊದಲ್ಲಿ ಅಂಬೇಡ್ಕರ್ ಅವರ ಮಾತನ್ನು ಶೇರ್ ಮಾಡಿದ್ದಾರೆ. ಈ ಲ್ಯಾಂಪ್ ಕಂಬಕ್ಕೆ ನನ್ನನ್ನು ತಲೆಕೆಳಗಾಗಿ ಕಟ್ಟಿ ತೂಗಿಹಾಕಿದರೂ ನಾನು ನನ್ನ ಜನರನ್ನು ಬಿಟ್ಟುಕೊಡಲಾರೆ ಎಂದು ಅಂಬೇಡ್ಕರ್ ಚಿತ್ರದಲ್ಲಿ ಬರೆದಿರುವ ಪೋಸ್ಟೊಂದನ್ನು ಮಣಿಕುಟ್ಟನ್ ಅಪ್ಡೇಟ್ ಮಾಡಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಭಾನುವಾರ ಬಿಡುಗಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ಚುನಾವಣಾ ಕ್ಷೇತ್ರ ಮತ್ತು ಕಾಸರಗೋಡು ಜಿಲ್ಲೆೆಯ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 115 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿದೆ. ತಿರುವನಂತಪುರಂನಲ್ಲಿ ನಟ ಕೃಷ್ಣಕುಮಾರ್, ವಟ್ಟಿಯೂರ್ಕಾವ್ನಲ್ಲಿ ವಿ.ವಿ.ರಾಜೇಶ್, ನೇಮಂನಲ್ಲಿ ಕುಮ್ಮನಂ ರಾಜಶೇಖರನ್ ಸ್ಪರ್ಧಿಸಲಿದ್ದಾರೆ. ಇನ್ನುಳಿದ 25 ಸೀಟುಗಳಲ್ಲಿ ಎನ್ಡಿಎ ಮೈತ್ರಿ ಪಕ್ಷಗಳು ಸ್ಪರ್ಧಿಸಲಿವೆ. ಇತ್ತೀಚೆಗೆ ಬಿಜೆಪಿಗೆ ಸೇರುವ ಮೂಲಕ ರಾಜಕೀಯಕ್ಕಿಳಿದಿರುವ ಮೆಟ್ರೊ ಮ್ಯಾನ್ ಇ.ಶ್ರೀಧರನ್ ಪಾಲಕ್ಕಾಡ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಹಿರಿಯ ನಾಯಕರಾದ ಎಂ.ಟಿ ರಮೇಶ್ (ಕೋಯಿಕ್ಕೋಡ್ ಉತ್ತರ), ಸಿ.ಕೆ. ಪದ್ಮನಾಭನ್ (ಧರ್ಮಡಂ), ಪಿ.ಕೆ. ಕೃಷ್ಣದಾಸ್ (ಕಾಟ್ಟಾಕ್ಕಡ) ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಕ್ಯಾಲಿಕಟ್ ವಿವಿ ಮಾಜಿ ಉಪ ಕುಲಪತಿ ಡಾ. ಅಬ್ದುಲ್ ಸಲಾಂ ತಿರೂರ್ನಲ್ಲಿ, ಮಾಜಿ ಡಿಜಿಪಿ ಜೇಕಬ್ ಥಾಮಸ್ ಇರಿಞಾಲಿಕ್ಕುಡದಲ್ಲಿ, ಶೊರ್ನೂರ್ನ ಲ್ಲಿ ಸಂದೀಪ್ ವಾರ್ಯರ್, ತ್ರಿಶ್ಶೂರ್ನಲ್ಲಿ ಸುರೇಶ್ ಗೋಪಿ ಸ್ಪರ್ಧಿಸಲಿದ್ದಾರೆ.
ತ್ರಿಶ್ಶೂರಿನಲ್ಲಿಯೇ ಸ್ಪರ್ಧಿಸುತ್ತೇನೆ: ಸುರೇಶ್ ಗೋಪಿ
ನಾನು ತ್ರಿಶ್ಶೂರ್ ವಿಧಾನಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಮಲಯಾಳಂ ನಟ ಸುರೇಶ್ ಗೋಪಿ ಹೇಳಿದ್ದಾರೆ. ನಾನು ತ್ರಿಶ್ಶೂರ್ನಲ್ಲಿಯೇ ಸ್ಪರ್ಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಯಕೆ. 10 ದಿನಗಳ ಕಾಲ ವಿಶ್ರಾಂತಿ ಪಡೆದು ನಾನು ಚುನಾವಣಾ ಪ್ರಚಾರಕ್ಕಿಳಿಯಲಿದ್ದೇನೆ. ಕೊವಿಡ್ ವ್ಯಾಕ್ಸಿನ್ ಪಡೆದ ನಂತರವೇ ಚುನಾವಣೆ ಪ್ರಚಾರಕ್ಕಿಳಿಯಲಿದ್ದೇನೆ ಎಂದಿದ್ದಾರೆ ಸುರೇಶ್ ಗೋಪಿ.
ಕಳಕ್ಕೂಟಂನಲ್ಲಿ ಶೋಭಾ ಸುರೇಂದ್ರನ್ ಸ್ಪರ್ಧೆ
ಕಳಕ್ಕೂಟಂನಲ್ಲಿ ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಕಣಕ್ಕಿಳಿಯಲಿದ್ದಾರೆ. ಭಾನುವಾರ ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೋಭಾ ಹೆಸರು ಇರಲಿಲ್ಲ. ಬಿಜೆಪಿಯಲ್ಲಿ ಭಿನ್ನಮತವೆದ್ದಿದೆ ಹಾಗಾಗಿ ಶೋಭಾ ಅವರನ್ನು ಕಡೆಗಣಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗೆ ಪ್ರತಿಕ್ರಿಯೆ ನೀಡಿದ್ದ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್, ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಶೋಭಾ ಹೇಳಿದ್ದಾರೆ ಎಂದಿದ್ದರು. ಮಂಗಳವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶೋಭಾ ಚುನಾವಣೆಗೆ ಸ್ಪರ್ಧಿಸಲು ಸಮ್ಮತಿ ಸೂಚಿಸಿದ್ದರಿಂದ ರಾಜ್ಯ ಬಿಜೆಪಿ ಶೋಭಾ ವರಿಗೆ ಕಳಕ್ಕೂಟಂ ಚುನಾವಣಾ ಕ್ಷೇತ್ರವನ್ನು ನೀಡಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ದೆಹಲಿ ನಾಯಕರು ಮಾಡಲಿದ್ದಾರೆ.