ಆಯತಪ್ಪಿ ಆಟೋದಿಂದ ಕೆಳಗೆ ಬಿದ್ದು 9 ವರ್ಷದ ಬಾಲಕ ಸ್ಥಳದಲ್ಲೇ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2022 | 8:25 AM

ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಅಪರಿಚಿತರ ಮೇಲಿ ಮಾಡುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ನಿನ್ನೆ ತಡರಾತ್ರಿ ಮತ್ತೋರ್ವ ಅಪರಿಚಿತನ ಮೇಲೆ ಸ್ಥಳಿಯರು ಹಲ್ಲೆ ಮಾಡಿರುವಂತಹ ಘಟನೆ ನಗರದ ಕಾಲೇಬಾಗ್ ಏರಿಯಾದಲ್ಲಿ ನಡೆದಿದೆ.

ಆಯತಪ್ಪಿ ಆಟೋದಿಂದ ಕೆಳಗೆ ಬಿದ್ದು 9 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಕುಶಲ್ (9) ಮೃತ ದುರ್ದೈವಿ.
Follow us on

ತುಮಕೂರು: ಆಟೋದಿಂದ ಕೆಳಗೆ ಬಿದ್ದು 9 ವರ್ಷದ ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದ ಲಿಂಗೇನಹಳ್ಳಿ ಬಳಿ ನಡೆದಿದೆ. ಕುಶಲ್ (9) ಮೃತ ದುರ್ದೈವಿ. ಆಟೋದಿಂದ ಆಯತಪ್ಪಿ ಕೆಳಗೆ ಬಿದ್ದು, ಬಾಲಕನ ತಲೆ ಮೇಲೆ ಆಟೋ ಹರಿದ ಪರಿಣಾಮ ಕುಶಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ರಸ್ತೆ ಗುಂಡಿಗೆ ಬಿದ್ದು ಇಬ್ಬರು ಬೈಕ್​ ಸವಾರರು ಸಾವನ್ನಪ್ಪಿರುವಂಹ ಘಟನೆ ತಾಲೂಕಿನ ‌ನಾಗಾವಿ ಗ್ರಾಮದ ಬಳಿ ನಡೆದಿದೆ. ಮಂಜುನಾಥ್(19), ಬಸವರಾಜ್(17) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಎಲಿಶಿರುಂದ ಗ್ರಾಮಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಅಕ್ಕನ ಮಗನ ಬರ್ತಡೇ ಕೇಕ್ ತೆಗೆದುಕೊಂಡು ರಾತ್ರಿ ವೇಳೆ ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯಕ್ಕೆ ಸವಾರರು ಬಲಿಯಾಗಿದ್ದಾರೆ. ರಸ್ತೆ ಕೊಚ್ಚಿ ಹೋಗಿದ್ರೂ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ತೊರಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ 50 ಅಡಿ ಆಳ ರಸ್ತೆ ಕೊಚ್ಚಿ ಹೋಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎಲಿಶಿರುಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ಮತ್ತೋರ್ವ ಅಪರಿಚಿತನ ಮೇಲೆ ಸ್ಥಳಿಯರು ಹಲ್ಲೆ

ವಿಜಯಪುರ: ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಅಪರಿಚಿತರ ಮೇಲಿ ಮಾಡುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ನಿನ್ನೆ ತಡರಾತ್ರಿ ಮತ್ತೋರ್ವ ಅಪರಿಚಿತನ ಮೇಲೆ ಸ್ಥಳಿಯರು ಹಲ್ಲೆ ಮಾಡಿರುವಂತಹ ಘಟನೆ ನಗರದ ಕಾಲೇಬಾಗ್ ಏರಿಯಾದಲ್ಲಿ ನಡೆದಿದೆ. ಕಾಲೇಬಾಗ್ ಪ್ರದೇಶದಲ್ಲಿ ಅಪರಿಚಿತ ಯುವಕ ಬಂದಿದ್ದು, ಆತ ಮಕ್ಕಳ‌‌‌ ಕಳ್ಳನೆಂದು ಭಾವಿಸಿ  ಸ್ಥಳಿಯರು ಹಲ್ಲೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಗಾಂಧಿಚೌಕ್ ಠಾಣೆಯ ಪೊಲೀಸರು ಅಪರಿಚಿತನನ್ನು ವಶಕ್ಕೆ ಪಡೆದಿದ್ದಾರೆ. ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿವೆ. ಸಪ್ಟೆಂಬರ್ 24 ರಂದು ದೆಹಲಿ ಮೂಲದ ನಾಲ್ವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ ಮಾಡಲಾಗಿತ್ತು. ಬಳಿಕ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಬಳಿ ಅಪರಿಚಿತನನ್ನು ಮಕ್ಕಳ ಕಳ್ಳನೆಂದು‌ ಭಾವಿಸಿ ಹಲ್ಲೆ ಮಾಡಿ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಬಳಿಕ ಸರ್ವೇ ಮಾಡಲು ಬಂದಿದ್ದ ಭೂವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಓರ್ವ ಸಹಾಯಕನ್ನು ಮಕ್ಕಳ ಕಳ್ಳರೆಂದು ಹಲ್ಲೆ ಮಾಡಿದ ಘಟನೆ ಇಂಡಿ ತಾಲೂಕಿನಲ್ಲಿ ನಡೆದಿತ್ತು.

ಈ ಘಟನೆಗಳ ಬಳಿಕ ತಡರಾತ್ರಿ ನಗರದಲ್ಲಿ ಮತ್ತೋರ್ವ ಅಪರಿಚಿತನನ್ನು ಮಕ್ಕಳ‌‌ ಕಳ್ಳನೆಂದು ತಿಳಿದು ಹಲ್ಲೆ ಮಾಡಲಾಗಿದೆ. ಮಕ್ಕಳ‌‌ ಕಳ್ಳರೆಂಬ ಸಂಶಯದ ಮೇಲೆ ಯಾರ ಮೇಲು ಹಲ್ಲೆ ಮಾಡಬಾರದು. ಸಂಶಯ ಬಂದರೆ ಪೊಲೀಸ್ ಠಾಣೆಗೆ ಮಾಹಿತಿ‌ ನೀಡಬೇಕೆಂದು ಎಸ್ಪಿ ಆನಂದಕುಮಾರ ಮನವಿ ಮಾಡಿಕೊಂಡಿದ್ದಾರೆ. ಇದರ ಹೊರತು ಹಲ್ಲೆ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳೊದಾಗಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಾಗಿಯೂ ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ ಮಾಡೋ ಘಟನೆಗಳಿಗೆ ಬ್ರೇಕ್ ಬೀಳುತ್ತಿಲ್ಲಾ.

ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿ ಕರು ಬಲಿ

ಮೈಸೂರು: ಚಿರತೆ ದಾಳಿಯಿಂದ ಮನೆ ಮುಂದೆ ಕಟ್ಟಿ ಹಾಕಿದ್ದ ಕರು ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕು ಪೆಂಜಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೆಂಜಹಳ್ಳಿ ಮಹದೇವರಿಗೆ ಸೇರಿದ ಕರುವನ್ನು ಚಿರತೆ ಎಳೆದುಕೊಂಡು ಹೋಗುತ್ತಿದ್ದು, ಜನರ ಕೂಗಾಟ ಕೇಳಿ ಕರು ಬಿಟ್ಟು ಪರಾರಿಯಾಗಿದೆ. ಅಷ್ಟರಲ್ಲಾಗಲೇ ಕರು ಸಾವನ್ನಪ್ಪಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿದರು. ಕಾರು ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ ಉಂಟಾಗಿದ್ದು ಓರ್ವ ಟೆಕ್ಕಿ ಸಾವನ್ನಪ್ಪಿದ್ದಾರೆ. ಮೈಸೂರು ಬೆಂಗಳೂರು ರಸ್ತೆ ಕಳಸ್ತವಾಡಿ ಬಳಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಭರತ್ ಪ್ರಸಾದ್ ಸ್ಥಳದಲ್ಲೇ ಸಾವು. ಭಾವಿ ಪತ್ನಿ ಚೈತ್ರಗೆ ಗಂಭೀರ ಗಾಯವಾಗಿದ್ದು, ಮೈಸೂರಿನಿಂದ ಬೆಂಗಳೂರಿಗೆ ತೆರಳಿವಾಗ ಘಟನೆ ನಡೆದಿದೆ. ಎನ್.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.