ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ.
ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ ಕೃಷಿ ಕಾಯಕವನ್ನೇ ಮಾಡಿಕೊಂಡಿದ್ದಾರೆ.
ಕೃಷಿಯೇ ಇವರ ಜೀವನಕ್ಕೆ ಆಧಾರ..
ಸಕ್ಕರೆ ಕಾಯಿಲೆಯಿಂದ ಒಂದು ಕಾಲು ಕಳೆದುಕೊಂಡ ದುರ್ದೈವಿ
ಆದ್ರೆ ಕೆಲ ವರ್ಷಗಳ ಹಿಂದೆ ವಿಪರೀತ ಸಕ್ಕರೆ ಕಾಯಿಲೆಯಿಂದ ತಮ್ಮ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು. ಪರಿಣಾಮ ಮೂರು ವರ್ಷ ಕೃಷಿ ಕಾರ್ಯದಿಂದ ದೂರವಿರಬೇಕಾಯಿತು. ಆದ್ರೆ ಮನೆಯಲ್ಲಿ ಕೂತು ಜೀವನ ಸಾಗಿಸಲು ಮನಸ್ಸು ಒಪ್ಪಿಲ್ಲ. ಹೀಗಾಗಿ ಕಾಯಕವೇ ಕೈಲಾಸ ಅಂತಾ ಕೃತಕ ಕಾಲು ಜೋಡಿಸಿಕೊಂಡು ಮತ್ತೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಇತರರಿಗೆ ಮಾದರಿ ಈ ಸ್ವಾವಲಂಬಿ
ಕೃಷಿಯ ಮೇಲೆ ಅಪಾರ ಮೋಹ ಹೊಂದಿರುವ ಸ್ವಾಭಿಮಾನಿ ನಾರಾಯಣ ತಿಂಗಳಾಯ ತಮ್ಮ ಒಂದು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಾರೆ. ಹಗಲಿರುಳೆನ್ನದೇ ಭೂತಾಯಿಯ ಸೇವೆ ಮಾಡತ್ತಾರೆ. ಒಂದು ಕಾಲು ಇಲ್ಲ ನಾನ್ಯಾಕೆ ಗದ್ದೆಯಲ್ಲಿ ಕೆಲಸ ಮಾಡಬೇಕು ಎನ್ನದೇ ನಿರಂತರವಾಗಿ ಕಾಯಕದಲ್ಲಿ ತೊಡಗಿ ಸ್ವಾವಲಂಬಿಯಾಗಿ ಇತರರಿಗೆ ಮಾದರಿ ರೈತನಾಗಿದ್ದಾರೆ.
-ಹರೀಶ್ ಪಾಲೆಚ್ಚಾರ್
Published On - 6:44 pm, Sat, 4 July 20