ಆಸರೆಯಾಗಬೇಕಿದ್ದ 3 ಗಂಡು ಮಕ್ಕಳೂ ನೀರುಪಾಲು.. ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

| Updated By: KUSHAL V

Updated on: Aug 10, 2020 | 6:27 PM

ಬೀದರ್:ಆ ದಂಪತಿಗೆ ಇದ್ದ ನಾಲ್ಕು ಮಕ್ಕಳಲ್ಲಿ ಮೂವರು ಗಂಡು, ಒಂದು ಹೆಣ್ಣು. ಬಡತನದ ನಡುವೆಯೂ ಮೂವರು ಮಕ್ಕಳನ್ನು ಓದಿಸಿದ್ದರು ಆ ತಂದೆ-ತಾಯಿ. ಹಿರಿಯ ಮಗನಿಗೆ ಕೆಲಸವೂ ಸಿಕ್ಕಿತ್ತು. ಇದರಿಂದ ಮನೆಯ ಹಿರಿಯರಲ್ಲಿ ಸಂತಸವು ಮನೆ ಮಾಡಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ವೃದ್ಧ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಮಕ್ಕಳು ಇದೀಗ ವಿಧಿಯ ಆಟದಿಂದ ಮಸಣ ಸೇರಿದ್ದಾರೆ. ಎದೆ ಎತ್ತರ ಬೆಳೆದಿದ್ದ ಮೂವರು ಗಂಡು ಮಕ್ಕಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ ವೃದ್ಧ ದಂಪತಿಗಳು. ಹೌದು, ಇಂಥದ್ದೊಂದು ದಾರುಣ ಘಟನೆ ನಡೆದಿರುವುದು […]

ಆಸರೆಯಾಗಬೇಕಿದ್ದ 3 ಗಂಡು ಮಕ್ಕಳೂ ನೀರುಪಾಲು.. ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
Follow us on

ಬೀದರ್:ಆ ದಂಪತಿಗೆ ಇದ್ದ ನಾಲ್ಕು ಮಕ್ಕಳಲ್ಲಿ ಮೂವರು ಗಂಡು, ಒಂದು ಹೆಣ್ಣು. ಬಡತನದ ನಡುವೆಯೂ ಮೂವರು ಮಕ್ಕಳನ್ನು ಓದಿಸಿದ್ದರು ಆ ತಂದೆ-ತಾಯಿ. ಹಿರಿಯ ಮಗನಿಗೆ ಕೆಲಸವೂ ಸಿಕ್ಕಿತ್ತು. ಇದರಿಂದ ಮನೆಯ ಹಿರಿಯರಲ್ಲಿ ಸಂತಸವು ಮನೆ ಮಾಡಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ವೃದ್ಧ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಮಕ್ಕಳು ಇದೀಗ ವಿಧಿಯ ಆಟದಿಂದ ಮಸಣ ಸೇರಿದ್ದಾರೆ. ಎದೆ ಎತ್ತರ ಬೆಳೆದಿದ್ದ ಮೂವರು ಗಂಡು ಮಕ್ಕಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ ವೃದ್ಧ ದಂಪತಿಗಳು.

ಹೌದು, ಇಂಥದ್ದೊಂದು ದಾರುಣ ಘಟನೆ ನಡೆದಿರುವುದು ಬೀದರ್​ ಜಿಲ್ಲೆಯಲ್ಲಿ. ಎದೆಯೆತ್ತರ ಬೆಳೆದಿದ್ದ ಮೂವರು ಮಕ್ಕಳು ಒಮ್ಮೆಲೆ ನೀರುಪಾಲಾಗಿ ತೀರಿದರೆ ಹೆತ್ತ ಕರುಳಿಗೇನಾಗಿರಬೇಡ. ಹೌದು! ಊಹಿಸಲೂ ಭಯವಾಗುವಂಥ ದುರ್ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ವಾಡಿ ಗ್ರಾಮದಲ್ಲಿ ನಡೆದಿದೆ.

ಅಚಾನಕ್ಕಾಗಿ ಕೃಷಿಹೊಂಡಕ್ಕೆ ಬಿದ್ದ ಮೂವರು ಮಕ್ಕಳು
ಧೂಳಪ್ಪ ಹಾಗೂ ಬಸಮ್ಮ ದಂಪತಿಯ ಮಕ್ಕಳಾದ 21 ವರ್ಷದ ವಿರೇಂದ್ರ ರೆಡ್ಡಿ, 19 ವರ್ಷದ ಕರಿಬಸಪ್ಪ ರೆಡ್ಡಿ, 17 ವರ್ಷದ ಹನುಮಂತ ರೆಡ್ಡಿಯೇ ಮೃತ ದುರ್ದೈವಿಗಳು. ಮೂಲತಃ ಖಟಕ್ ಚಿಂಚೋಳಿ ಗ್ರಾಮದವರಾದ ಧೂಳಪ್ಪನ ಕುಟುಂಬ, ಚಳಕಾಪೂರ ವಾಡಿಯ ಬಸಪ್ಪ ಎಂಬುವವರ ಆರು ಎಕರೆ ಜಮೀನನ್ನು ಭೋಗ್ಯಕ್ಕೆ ತೆಗೆದುಕೊಂಡು ಕೃಷಿ ಮಾಡುತ್ತಿದ್ದರು. ಮಧ್ಯಾಹ್ನ ಹೊಲದಲ್ಲಿ ಕೆಲಸ ಮುಗಿಸಿ, ಮೂವರು ಸಹೋದರರು ಕೈ ಕಾಲು ತೊಳೆದುಕೊಳ್ಳಲು ಕೃಷಿಹೊಂಡಕ್ಕೆ ಹೋದಾಗ ಅಚಾನಕ್ಕಾಗಿ ಬಿದ್ದಿದ್ದಾರೆ.

15 ಅಡಿ ಆಳವಾಗಿರುವ ಕೃಷಿ ಹೊಂಡದಲ್ಲಿ ಮುಳುಗಿದ್ದಾರೆ. ಕೂಗಳತೆ ದೂರದಲ್ಲೇ ಕೆಲಸ ಮಾಡುತ್ತಿದ್ದ ಧೂಳಪ್ಪಗೆ ಮಕ್ಕಳು ವಾಪಸಾಗದೆ ಇರುವುದು ಕಂಡಿದೆ. ಮಕ್ಕಳನ್ನು ಕರೆಯಲು ಧೂಳಪ್ಪ ಹೋದಾಗ ಮಕ್ಕಳ ಶವಗಳನ್ನು ನೋಡಿ ಅಲ್ಲೇ ತತ್ತರಿಸಿ ಹೋಗಿದ್ದಾರೆ. ಈ ದುರ್ಘಟನೆಗೆ ಇಡೀ ಊರಿಗೆ ಊರೇ ಮರುಗುತ್ತಿದ್ದರೆ, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತು. ಮೊದಲೇ ಬಡತನದಲ್ಲಿದ್ದ ಧೂಳಪ್ಪನ ಕುಟುಂಬ ಐದು ಲಕ್ಷ ಸಾಲ ಮಾಡಿ ವ್ಯವಸಾಯ ಮಾಡುತ್ತಿದ್ದರು. ಅದರ ನಡುವೆಯೇ ಮೂವರು ಗಂಡು ಮಕ್ಕಳ ಜೊತೆಗೆ ಓರ್ವ ಮಗಳನ್ನು ಓದಿಸುತ್ತಿದ್ದರು.

ಬಿ.ಕಾಂ ಮುಗಿಸಿದ್ದ ದೊಡ್ಡ ಮಗ ವೀರೇಂದ್ರ ರೆಡ್ಡಿ ಐದನೇ ತಾರೀಖು ಖಾಸಗಿ ಕಂಪೆನಿಯ ನೌಕರಿಗೆ ಹಾಜರಾಗುವವನಿದ್ದ. ಕೊರೊನಾದಿಂದಾಗಿ ಕಾಲೇಜುಗಳು ಇಲ್ಲದ್ದರಿಂದ ಉಳಿದ ಇಬ್ಬರೂ ಮಕ್ಕಳು ಕೃಷಿಯಲ್ಲಿ ಪೋಷಕರಿಗೆ ನೆರವಾಗುತ್ತಿದ್ದರು. ಇದೀಗ ಈ ಘಟನೆ ಇಡೀ ಕುಟುಂಬದ ತುಂಬಾ ಕತ್ತಲಾವರಿಸುವಂತೆ ಮಾಡಿದೆ. ಇಡೀ ಚಳಕಾಪೂರ ವಾಡಿ ಗ್ರಾಮದ ತುಂಬ ಶೋಕದ ವಾತಾವರಣ. ಇಳಿ ವಯಸ್ಸಿನಲ್ಲಿ ಮಕ್ಕಳು ನೆರವಾಗುತ್ತಾರೆ ಎಂಬ ಎಣಿಕೆಯಲ್ಲಿದ್ದ ವೃದ್ಧ ದಂಪತಿಗಳು ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಮುಗಿಲು ಮುಟ್ಟಿದ ಗ್ರಾಮಸ್ಥರ ಆಕ್ರಂದನ
ಈ ಘಟನೆಯಿಂದ ಸ್ಥಳೀಯರು ಸಹ ಕನಲಿದ್ದು, ಧೂಳಪ್ಪನ ಕುಟುಂಬಕ್ಕೆ ಮಾನವೀಯತೆಯ ದೃಷ್ಟಿಯಿಂದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ಸಹ ನಡೆಸಿದ್ದಾರೆ. ಬೀದರ್ ಜಿಲ್ಲೆಯಾದ್ಯಂತ ಕೃಷಿಹೊಂಡಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಕನಿಷ್ಠ ಹತ್ತರಿಂದ ಹದಿನೈದು ಅಡಿಯ ಈ ಕೃಷಿಹೊಂಡಗಳಲ್ಲಿ ಮುಳುಗಿ ಅಸುನೀಗುತ್ತಿರುವ ದುರ್ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಹೊಂಡಗಳ ಸುತ್ತ ಬೇಲಿ ಹಾಕುವಂತೆ ರೈತರಿಗೆ ಜಾಗೃತಿ ಮೂಡಿಸಬೇಕಿದೆ.-ಸುರೇಶ್ ನಾಯಕ್