ಹನ್ನೆರೆಡು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತಾದ ‘ಮೇಜರ್’ ಚಿತ್ರ ತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ಈ ಚಿತ್ರದಲ್ಲಿ ತೆಲುಗಿನ ಜನಪ್ರಿಯ ನಟ ಅದಿವಿ ಶೇಷ್ ಬಣ್ಣ ಹಚ್ಚಲಿದ್ದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬೈ ಮೇಲೆ ಉಗ್ರರ ದಾಳಿಯಾದ ಸಂದರ್ಭದಲ್ಲಿ ಅದಿವಿ ಶೇಷ್ ಅಮೆರಿಕಾದಲ್ಲಿ ಇದ್ದರಂತೆ. ಅಂದಿನ ತಮ್ಮ ತೊಳಲಾಟವನ್ನು ಹಂಚಿಕೊಂಡ ಅವರು, ಮೇಜರ್ ಉನ್ನಿ ಕೃಷ್ಣನ್ ಹುತಾತ್ಮರಾದ ಸುದ್ದಿ ಕೇಳಿ ಮನಸ್ಸು ಭಾರವಾಗಿತ್ತು. ಅವರ ಭಾವಚಿತ್ರವನ್ನು ನೋಡಿದಾಗಲಂತೂ ನನಗೆ ನನ್ನ ಹಿರಿಯಣ್ಣನನ್ನು ಕಳೆದುಕೊಂಡಂತೆ ಸಂಕಟವಾಗಿತ್ತು. ಅದಾದ ಮೇಲೆ ಉನ್ನೀಕೃಷ್ಣನ್ ಕುರಿತು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ ಅವರ ಕುರಿತು ಸಿನಿಮಾ ಮಾಡಬೇಕೆಂಬ ಆಸೆ ಮೊಳಕೆಯೊಡೆದಿತ್ತು ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಸಿನಿಮಾ ಮಾಡಲೇಬೇಕು ಎಂದು ನಿರ್ಧರಿಸಿದಾಗ ಅದಿವಿ ಶೇಷ್ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಮನೆಯವರನ್ನು ಹಲವು ಬಾರಿ ಭೇಟಿ ಮಾಡಿದ್ದರಂತೆ.
ಆದರೆ, ಅನೇಕ ಜನ ತಾವು ಸಿನಿಮಾ ಮಾಡುವುದಾಗಿ ಮುಂದೆ ಬಂದಾಗ ಅದಿವಿ ಶೇಷ್ ಧೃಡ ನಿರ್ಧಾರ ಮಾಡಿ ಸಂದೀಪ್ ಉನ್ನಿಕೃಷ್ಣನ್ ಅವರ ಪೋಷಕರ ಬಳಿ ಸಿನಿಮಾ ಆಗಲಿ, ಆಗದೇ ಇರಲಿ ನಿಮ್ಮನ್ನು ಜೀವನ ಪೂರ್ತಿ ನನ್ನ ಪೋಷಕರಂತೆಯೇ ನೋಡುತ್ತೇನೆ. ಇದೊಂದು ಅವಕಾಶ ನೀಡಿ ಎಂದು ಕೇಳಿಕೊಂಡರಂತೆ. ಕೊನೆಗೆ ಐದಾರು ಬಾರಿ ಕೇಳಿದ ನಂತರ ಅವರಿಂದ ಅನುಮತಿ ಸಿಕ್ಕಿತಂತೆ.
ಈ ಕುರಿತು ಮಾತನಾಡುವಾಗ ಭಾವುಕ ಸಂಗತಿಯೊಂದನ್ನು ಹಂಚಿಕೊಂಡ ಅದಿವಿ, ಉನ್ನಿಕೃಷ್ಣನ್ ಅವರ ತಾಯಿ ನನ್ನನ್ನು ಅಪ್ಪಿಕೊಂಡು ನಿನ್ನಲ್ಲಿ ನನ್ನ ಮಗ ಕಾಣುತ್ತಿದ್ದಾನೆ ಎಂದಿದ್ದರು. ಅದನ್ನು ನಾನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.