
ಹುಬ್ಬಳ್ಳಿ: ಲಂಡನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿ ಮೂಲದ ಟೆಕ್ಕಿಯ ಮೃತದೇಹವನ್ನು 50 ದಿನಗಳ ಬಳಿಕ ಅಂದ್ರೆ ನಾಳೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಮಾ.13 ರಂದು ನವನಗರ ಮೂಲದ ಟೆಕ್ಕಿ ಗದಿಗೆಪ್ಪಗೌಡ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದ. 50 ದಿನಗಳ ಬಳಿಕ ಮಗನ ಪಾರ್ಥಿವ ಶರೀರದ ದರ್ಶನಕ್ಕೆ ಪೋಷಕರು ಹಾತೊರೆಯುತ್ತಿದ್ದಾರೆ.
ಮೃತನ ಪತ್ನಿ ಶಿವಲೀಲಾ ಹಾಗೂ ಪುತ್ರ ಶಿವಾನಂದ ಹಾಗೂ ಪತ್ನಿಯ ಸಹೋದರ ಜೊತೆ ಲಂಡನ್ನಲ್ಲಿ ಗದಿಗೆಪ್ಪಗೌಡ ವಾಸವಿದ್ದರು. ಮಗನ ಅಂತ್ಯ ಸಂಸ್ಕಾರವನ್ನು ಹುಬ್ಬಳ್ಳಿಯಲ್ಲೇ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದು, ಪುತ್ರನ ಪಾರ್ಥಿವ ಶರೀರಕ್ಕಾಗಿ ಪೋಷಕರು ಕಾದು ಕುಳಿತಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಟೆಕ್ಕಿಯ ಪಾರ್ಥಿವ ಶರೀರ ಭಾರತಕ್ಕೆ ತರಲು ವಿಳಂಬವಾಗಿದೆ. ಸೋಮವಾರ ಬೆಳಗಿನ ಜಾವ 3.30ಕ್ಕೆ ಮೃತದೇಹ ಬೆಂಗಳೂರಿಗೆ ಆಗಮಿಸಲಿದೆ. ನಂತರ ಆ್ಯಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ಮೃತದೇಹ ತಲುಪಲಿದೆ.
ಮಗನ ಪಾರ್ಥಿವ ಶರೀರ ಭಾರತಕ್ಕೆ ತರುವಂತೆ 15 ದಿನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಪೋಷಕರು ನೆರವು ಕೋರಿದ್ದರು. ಪೋಷಕರ ಮನವಿಗೆ ಸ್ಪಂದಿಸಿ ಶವ ತರಿಸಲು ಜೋಶಿ ಸಹಕಾರ ನೀಡಿದ್ದರು. ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ, ಲಂಡನ್ ಸರ್ಕಾರದ ಜೊತೆ ಮಾತುಕತೆ ನಡೆಸಿತ್ತು.