
ಅದು ಬರಗಾಲಕ್ಕೆ ತವರೂರು, ಅಲ್ಲಿ ಸರಿಯಾಗಿ ಮಳೆಯೂ ಬರಲ್ಲ, ನದಿ ನಾಲೆಗಳೂ ಇಲ್ಲಾ, ಹೀಗಿದ್ರು ಆ ಊರಿನ ರೈತನೊಬ್ಬ ಗ್ರಾಮದಲ್ಲಿ ಮಾಡಿಕೊಂಡಿರುವ ಒಂದು ಮಹತ್ತರ ಯೋಜನೆ, ಇವತ್ತು ಇಡೀ ಗ್ರಾಮಕ್ಕೆ ಗ್ರಾಮವೇ ಬೆರಗಾಗಿ ನೋಡುವಂತೆ ಮಾಡಿದೆ ಅಷ್ಟೇ ಅಲ್ಲಾ ಅವನೊಬ್ಬ ಕೃಷಿ ಸಾಧಕ ಎನ್ನುವಂತಾಗಿದೆ.. ಅಷ್ಟಕ್ಕೂ ಆ ರೈತ ಮಾಡಿದ ಸಾಧನೆ ಏನು ಹೇಳ್ತಿವಿ ನೋಡಿ..
ಊರಿನ ಕೊಳಚೆ ನೀರಲ್ಲಿ ಸೊಂಪಾದ ಫಸಲು..!
ಹೌದು ಈ ಭಾಗದಲ್ಲಿ ಸರಿಯಾಗಿ ಮಳೆ ಬೀಳೋದಿಲ್ಲ, ಅಂತರ್ಜಲವಂತೂ ಪಾತಾಳ ಸೇರಿದೆ. ಇಂಥ ದುರ್ಭರ ಪರಿಸ್ಥಿತಿಯಲ್ಲಿ ವ್ಯವಸಾಯ ಅನ್ನೋದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಆದರೆ ಗ್ರಾಮದ ಶಿವಮೂರ್ತಿ ಎಂಬ ರೈತ ತನ್ನ ಎರಡು ಎಕರೆ ಭೂಮಿಯಲ್ಲಿ ಸವಾಲಿನ ಕೃಷಿ ಮಾಡಲು ನಿಂತರು. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಅಲಹಾಬಾದ್ ಸೀಬೆ ತಳಿಯನ್ನು ತಂದು ನಾಟಿ ಮಾಡಿ, ನೀರಿಲ್ಲದ ಪರಿಸ್ಥಿತಿಯಲ್ಲಿ ತಮ್ಮ ಭೂಮಿಯಲ್ಲಿ ಎಳೆಯತೊಡಗಿದರು.
ಇದಕ್ಕೆ ‘ನೀರೆರೆದಿದ್ದು’ ಮಾತ್ರ ಇಡೀ ಗ್ರಾಮದ ಕೊಳಚೆ ನೀರನ್ನು. ಒಂದು ಕೃಷಿ ಹೊಂಡ ಮಾಡಿ ಕೊಂಡು ಅದರಲ್ಲಿ ಕೊಳಚೆ ನೀರನ್ನು ಶೇಖರಿಸಿಕೊಂಡು ಹನಿ ನೀರಾವರಿ ಮೂಲಕ ತಮ್ಮ ಸೀಬೆ ಗಿಡಗಳಿಗೆ ಹಾಯಿಸಿದ್ರು. ಆರಂಭದಲ್ಲಿ ಇದು ಗ್ರಾಮದಲ್ಲಿ ನಗೆಪಾಟಲಿಗೆ ಎಡೆಮಾಡಿ ಕೊಟ್ಟಿತ್ತಾದ್ರು ದಿನ ಕಳೆದಂತೆ ಶಿವಮೂರ್ತಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುತ್ತಾ ಬಂದ್ರು. ಪರಿಣಾಮ ಸೀಬೆ ಬೆಳೆಯು ಭರ್ಜರಿಯಾಗಿ ಬೆಳೆದು ನಿಂತಿದ್ದು ಅದರಲ್ಲೇ ಪರ್ಯಾಯ ಬೆಳೆಯಾಗಿ ಕುಂಬಳಕಾಯಿ ಕೂಡಾ ಭರ್ಜರಿ ಫಸಲು ಕೊಟ್ಟಿದೆ.
ಆರಂಭದಲ್ಲಿ ಆಡಿಕೊಂಡವರಿಂದಲೇ ಶಹಬ್ಬಾಶ್ಗಿರಿ..
ಜಂಗಮಗುರ್ಜೇನಹಳ್ಳಿ ಗ್ರಾಮದಲ್ಲಿ ಸುಮಾರು 250 ಮನೆಗಳಿವೆ. ಗ್ರಾಮದ ಎಲ್ಲಾ ಮನೆಗಳಲ್ಲಿ ಪ್ರತಿನಿತ್ಯ ಬಳಸುವ ನೀರನ್ನು ಊರ ಹೊರಗಿನ ಸರ್ಕಾರಿ ಹೊಂಡದಲ್ಲಿ ಶೇಖರಿಸಲಾಗುತ್ತದೆ. ಅಲ್ಲಿಂದ ಸಣ್ಣ ಕಾಲುವೆ ಮೂಲಕ ನೀರನ್ನು ತಮ್ಮ ಜಮೀನಿನ ವರೆಗೂ ಹರಿಸುವ ಶಿವಮೂರ್ತಿ ತ್ಯಾಜ್ಯ ನೀರೆಲ್ಲಾವೂ ನೈಸರ್ಗಿಕ ವಿಧಾನದ ಮೂಲಕವೇ ಶುದ್ಧೀಕರಣವಾಗಿ ಬರುವಂತೆ ಮಾಡಿದ್ದಾರೆ.
ನಂತರ ಆ ನೀರೆಲ್ಲವೂ ತಮ್ಮ ಜಮೀನಲ್ಲಿರುವ ಕೃಷಿ ಹೊಂಡದಲ್ಲಿ ಶೇಖರಿಸಿಕೊಂಡು ನಂತರ ಅದನ್ನು ಹನಿ ನೀರಾವರಿ ಮೂಲಕ ತಮ್ಮ ಬೆಳೆಗಳಿಗೆ ಹರಿಸುತ್ತಾರೆ. ಇದರಿಂದ ಶಿವಮೂರ್ತಿಯವರಿಗೆ ಮಳೆ ಇಲ್ಲಾ, ಬೋರ್ ವೆಲ್ ಇಲ್ಲಾ, ಅನ್ನೋ ಆತಂಕ ಇಲ್ಲದೆ ಅತ್ಯಂತ ಸರಳ ಹಾಗೂ ಯಶಸ್ವಿ ಕೃಷಿ ಮಾಡುತ್ತಿದ್ದಾರೆ. ಇದು ಸುತ್ತಮುತ್ತಲ ಗ್ರಾಮಸ್ಥರ ಹಾಗೂ ರೈತರ ಪ್ರಶಂಸೆಗೆ ಪಾತ್ರವಾಗಿದೆ.
ಒಟ್ಟಾರೆ ಕೃಷಿಯನ್ನು ಖುಷಿಯಾಗಿ ಶ್ರದ್ದೆಯಿಂದ ಮಾಡಿದ್ರೆ ಅದು ನಿಜಕ್ಕೂ ನಂಬಿದವರ ಕೈಬಿಡೋದಿಲ್ಲ ಅನ್ನೋದಕ್ಕೆ ಶಿವಮೂರ್ತಿಯೇ ಸಾಕ್ಷಿ. ಅಲ್ಲದೇ ಅವರ ನಿಷ್ಠೆ ಹಾಗೂ ಸವಾಲು ನಿಜ್ಕಕೂ ಎಲ್ಲಾ ರೈತರಿಗೂ ಸ್ಪೂರ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ..
-ರಾಜೇಂದ್ರ ಸಿಂಹ