CCB ವಿಚಾರಣೆ ವೇಳೆ ನಿರ್ದೇಶಕ ಇಂದ್ರಜಿತ್ ಭಯಭೀತರಾಗಲು ಕಾರಣ ಏನು?

  • Updated On - 10:47 am, Tue, 1 September 20
CCB ವಿಚಾರಣೆ ವೇಳೆ ನಿರ್ದೇಶಕ ಇಂದ್ರಜಿತ್ ಭಯಭೀತರಾಗಲು ಕಾರಣ ಏನು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರುವ ಬಗ್ಗೆ ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಿನ್ನೆ CCB ವಿಚಾರಣೆಗೆ ಬಂದಿದ್ದ ವೇಳೆ ಕೊಂಚ ಭಯಭೀತರಾಗಿದ್ದರು ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ವಿಚಾರಣೆ ವೇಳೆ CCB ಅಧಿಕಾರಿಗಳು ಕಳೆದ 3 ದಿನದಿಂದ ಬೇರೆ ಬೇರೆ ಕ್ಯಾಮರಾಗಳ ಎದುರು ಹೇಳಿಕೆ ನೀಡಿದ್ರಿ. ಈಗ ಈ ಕ್ಯಾಮರಾ ಎದುರು ಹೇಳಿಕೆ ನೀಡಿ ಎಂದು ಹೇಳಿದರಂತೆ. ಈ ಮಾತು ಕೇಳಿ ಇಂದ್ರಜಿತ್ ಲಂಕೇಶ್​ ಸ್ವಲ್ಪ ಭಯಪಟ್ಟರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇಂದ್ರಜಿತ್​ ಹೇಳಿಕೆಯನ್ನ ಲಿಖಿತವಾಗಿ ದಾಖಲಿಸಿದ ಪೊಲೀಸರು ನಂತರ ಪ್ರತಿ ಹೇಳಿಕೆಯ ವಿಡಿಯೋ ರೆಕಾರ್ಡ್​ ಸಹ ಮಾಡಿಸಿದರಂತೆ. ಮಾಹಿತಿ ನೀಡೋ ಮುನ್ನ ತನ್ನ ಸ್ವವಿವರ ಸಲ್ಲಿಸಿದ ಇಂದ್ರಜಿತ್ ತಮ್ಮ ಹೆಸರು, ಉದ್ಯೋಗ, ಹಿನ್ನೆಲೆ ಹಾಗೂ ಸಿನಿಮಾ ರಂಗದ ನಂಟಿನ ಬಗ್ಗೆ ಮಾಹಿತಿ ನೀಡಿದರಂತೆ. ಜೊತೆಗೆ, ಪತ್ರಕರ್ತ ಮತ್ತು ಚಿತ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಹ ಕೊಟ್ಟರಂತೆ.

ಇದಲ್ಲದೆ, ಇಂದ್ರಜಿತ್ ನಿನ್ನೆ ಕೆಲವು ಫೋಟೋಗಳು ಮತ್ತು ಕ್ಲಿಪ್ಪಿಂಗ್ಸ್​ ​​ ಸಲ್ಲಿಸಿದ್ದಾರೆ. ಜೊತೆಗೆ, ಅವರ ಸುಮಾರು 6 ಪುಟಗಳ ಹೇಳಿಕೆಯನ್ನು CCB ಪೊಲೀಸರು ದಾಖಲಿಸಿಕೊಂಡರು. ‘ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ, ಸಾಕ್ಷಿದಾರನಲ್ಲ’ CCB ಪೊಲೀಸರಿಗೆ ದಾಖಲೆ ಸಲ್ಲಿಕೆ ವೇಳೆ ಇಂದ್ರಜಿತ್ ಒಂದು ಮನವಿ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಮ್ಮನ್ನು ಯಾವುದೇ ರೀತಿ ಸಾಕ್ಷಿದಾರನನ್ನಾಗಿಸದಂತೆ ಮನವಿ ಮಾಡಿಕೊಂಡಿರುವ ಲಂಕೇಶ್​ ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ. ನಾನು ಸಾಕ್ಷಿದಾರನಲ್ಲ ಎಂದು ಹೇಳಿದ್ದಾರಂತೆ.

ನನ್ನ ಬಳಿ ಇರುವ ಮಾಹಿತಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಬಹುದು. ಆದರೆ, ನನ್ನನ್ನು ಸಾಕ್ಷಿದಾರನನ್ನಾಗಿಸಿ ಕೋರ್ಟ್‌ಗೆ ಕರೆಯಬೇಡಿ ಎಂದು ನಿನ್ನೆ CCB ಪೊಲೀಸರ ಎದುರು ಇಂದ್ರಜಿತ್ ಮನವಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

Published On - 10:37 am, Tue, 1 September 20

Click on your DTH Provider to Add TV9 Kannada