ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ನಟ ಅಜಯ್ ರಾವ್ ಜತೆ ಒಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಹಿಂದೆಯೇ ಬಹಿರಂಗವಾಗಿದೆ. ಆ ಸಿನಿಮಾದ ಹೆಸರು ಲವ್ ಯೂ ರಚ್ಚು (love you racchu) ಎಂಬುದು ವಿಶೇಷ. ಇದೊಂದು ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದ್ದು, ಸದ್ಯ ಶೂಟಿಂಗ್ ಕೂಡ ಶುರುವಾಗಿದೆ. ಇತ್ತೀಚೆಗಷ್ಟೇ ಪೂಜೆ ಮಾಡುವ ಮೂಲಕ ಸಿನಿಮಾ ಶೂಟಿಂಗ್ಗೆ ಮುಹೂರ್ತ ಇಡಲಾಗಿತ್ತು.ಅದೂ ಆರ್ಟ್ ಆಫ್ ಲಿವಿಂಗ್ನ ರವಿ ಶಂಕರ್ ಗುರೂಜಿ ಸಿನಿಮಾಕ್ಕೆ ಚಾಲನೆ ನೀಡಿದ್ದರು. ಇದೀಗ ಸಕಲೇಶಪುರದಲ್ಲಿ ಚಿತ್ರೀಕರಣ ಶುರುವಾಗಿದೆ. ಈ ಬಗ್ಗೆ ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ತುಂಬ ಎಕ್ಸೈಟ್ ಆಗಿದ್ದು, ತಮ್ಮ ಅನಿಸಿಕೆಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ.
ನಾನು ರಚಿತಾ ರಾಮ್ ಜತೆ ಇದೇ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದೇನೆ. ಸಿನಿಮಾದ ಮಹತ್ವದ ಭಾಗವನ್ನು ನಾವೀಗ ಸಕಲೇಶಪುರದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ವೈಯಕ್ತಿಕವಾಗಿಯೂ ನನಗೆ ಸಕಲೇಶಪುರ ತುಂಬ ಇಷ್ಟ. ಅದರಲ್ಲೂ ಇಲ್ಲಿನ ಶಾಂತ ವಾತಾವರಣ ನನಗೆ ತುಂಬ ಇಷ್ಟವಾಗುತ್ತದೆ. ನನ್ನ ಹಲವು ಸಿನಿಮಾಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಗೇ, ನಮ್ಮ ನಿರ್ಮಾಣದ ಕೃಷ್ಣ ಲೀಲಾವನ್ನೂ ಕೂಡ ಇಲ್ಲಿ ಶೂಟಿಂಗ್ ಮಾಡಿದ್ದೇವೆ. ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ ಎಂದು ಅಜಯ್ ರಾವ್ ತಿಳಿಸಿದ್ದಾರೆ.
ನಂತರ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್, ಸಕಲೇಶಪುರದಲ್ಲಿ ಇಂದಿನಿಂದ ಚಿತ್ರೀಕರಣ ಶುರು ಮಾಡಿದ್ದೇವೆ. ನಾನು ಸಿನಿಮಾ ಚಿತ್ರೀಕರಣಕ್ಕಾಗಿ ಸಕಲೇಶಪುರಕ್ಕೆ ಬರುತ್ತಿರುವುದು ಇದೇ ಮೊದಲು. ಕರ್ನಾಟಕದ ಅತ್ಯಂತ ಸುಂದರ ಸ್ಥಳಗಳಲ್ಲಿ ಇದೂ ಒಂದು. ಇಲ್ಲಿನ ಹಸಿರು ನನಗೆ ತುಂಬ ಇಷ್ಟವಾಯಿತು. ಸಂಜೆ ಹೊತ್ತಿಗೆ ಅದೆಷ್ಟು ಚಳಿ ಇರುತ್ತದೆ ಎಂದರೆ ನನಗಂತೂ ಸ್ವಿಜರ್ಲ್ಯಾಂಡ್ ನೆನಪಾಗುತ್ತದೆ. ನನಗೆ ಇಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದು ತುಂಬ ಸಂತೋಷವಾಗುತ್ತಿದೆ ಎಂದಿದ್ದಾರೆ.
ಲವ್ ಯೂ ರಚ್ಚು ಸಿನಿಮಾವನ್ನು ಶಂಕರ್ ರಾಜ್ ನಿರ್ದೇಶನ ಮಾಡಿದ್ದು, ಖ್ಯಾತ ನಿರ್ದೇಶಕ ಶಶಾಂಕ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ರಾಬರ್ಟ್’ ಸಿನಿಮಾ ರಿಲೀಸ್ಗೂ ಮುನ್ನ ತಿರುಮಲ ದೇಗುಲಕ್ಕೆ ನಟ ದರ್ಶನ್ ಭೇಟಿ