ಬೆಂಗಳೂರು: ಕಾವಲ್ ಭೈರಸಂದ್ರದ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಯಾವುದೇ ಸಂದರ್ಭವನ್ನ ತನ್ನ ರಾಜಕೀಯ ಲಾಭಕ್ಕಾಗಿ ಬಳಸಲು ಹವಣಿಸುವ ಎರಡೂ ಪಕ್ಷಗಳ ರಾಜಕೀಯ ‘ಗಲಭೆ’ಯ ಅಡಕತ್ತರಿಯಲ್ಲಿ ಇದೀಗ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿಕ್ಕಾಕಿಕೊಂಡಿರುವಂತೆ ಭಾಸವಾಗುತ್ತಿದೆ.
ಎಂಥಾ ಪ್ರಭಾವಿಗಳಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕೆಂದು ಶಾಸಕ ಶ್ರೀನಿವಾಸಮೂರ್ತಿ ಪಟ್ಟು ಹಿಡಿದಿದ್ದಾರೆ. ಆದರೆ, ತಮ್ಮ ಸ್ವಪಕ್ಷ ಕಾಂಗ್ರೆಸ್ಪ್ರಭಾವಿಗಳನ್ನ ರಕ್ಷಿಸಲು ಪರೋಕ್ಷ ಪ್ರಯತ್ನ ನಡೆಸುತ್ತಿದೆ ಎಂಬ ಮಾತು ಕೇಳಿಬಂದಿದೆ.
ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿಯನ್ನ ಆಧರಿಸಿಯೇ ಹೇಳಿಕೆ ಕೊಡಿ ಎಂಬ ಒತ್ತಡವನ್ನ ಶಾಸಕರ ಮೇಲೆ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ. ಪಕ್ಷದ ನಿಲುವು, ನಿಮ್ಮ ನಿಲುವು ಬೇರೆ ಬೇರೆ ಬೇಡ. ಪಕ್ಷದ ನಿಲುವಿನ ಬಗ್ಗೆ ಸತ್ಯಶೋಧನಾ ಸಮಿತಿ ನಿರ್ಧರಿಸಲಿದೆ. ಆ ಬಳಿಕವೇ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳಿ ಎಂದು ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ನಾಯಕರ ಒತ್ತಡ ಹೇರುತ್ತಿದ್ದಾರಂತೆ.
ಕಾಂಗ್ರೆಸ್ ನಾಯಕರ ಪ್ರಕಾರ ಕಾರ್ಪೊರೇಟರ್ಗಳ ಪಾತ್ರವಿಲ್ಲವಂತೆ. ಆದರೆ, ಶಾಸಕರ ಆಪ್ತರ ಪ್ರಕಾರ ಗಲಭೆಯಲ್ಲಿ ‘ಕೈ’ ಕಾರ್ಪೊರೇಟರ್ಗಳ ಕೈವಾಡವಿದೆಯಂತೆ. ಹಾಗಾಗಿ, ಈ ಪ್ರಭಾವಿಗಳ ವಿರುದ್ಧ ಶಿಕ್ಷೆ ಕೈಗೊಳ್ಳಲು ಶಾಸಕ ಅಖಂಡ ಶ್ರೀನಿವಾಸ್ ಪಟ್ಟು ಹಿಡಿದಿದ್ದಾರಂತೆ.
ಬಿಜೆಪಿಯದ್ದು ಬೇರೆಯೇ ದೃಷ್ಟಿಕೋನ..
ಆದರೆ, ಬಿಜೆಪಿ ಇಡೀ ಘಟನೆಯನ್ನು ಸಂಪೂರ್ಣವಾಗಿ ಬೇರೆಯದ್ದೇ ಕೋನದಿಂದ ಅವಲೋಕಿಸುತ್ತಿದೆ. ಶಾಸಕನ ಮೇಲೆ ಪ್ರಭಾವ ಬೀರುತ್ತಿರುವ ಬಿಜೆಪಿ ನಾಯಕರು ಸಿಬಿಐ ತನಿಖೆಗೆ ಆಗ್ರಹಿಸಲು ಅಖಂಡ ಶ್ರೀನಿವಾಸ ಮೂರ್ತಿಗೆ ಒತ್ತಡ ಹೇರುತ್ತಿದ್ದಾರಂತೆ.
ಇದಕ್ಕೆ ಒಪ್ಪಿದ ಶಾಸಕ ಬೇಕಿದ್ದರೆ ಡಿಕೆ ಶಿವಕುಮಾರ್ ಬಳಿಯೂ ಮಾತನಾಡೋದಕ್ಕೆ ಸಿದ್ಧ ಎಂದಿದ್ದಾರಂತೆ. ಆದರೆ, ಸಿಬಿಐ ತನಿಖೆ ಬಗ್ಗೆ ಡಿಕೆಶಿ ಒಲವು ತೋರುತ್ತಿಲ್ಲವಂತೆ. ಹೀಗಾಗಿ, ಕೈ ಕಮಲದ ರಾಜಕೀಯ ಗಲಭೆಯ ಅಡ್ಡಕತ್ತರಿಯಲ್ಲಿ ಶಾಸಕ ಸಿಕ್ಕಾಕೊಂಡು ಪೀಕಲಾಟ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.