ಶಿವಮೊಗ್ಗ: ಚುನಾವಣೆ ಬಂದರೆ ಹಣ ಹೆಂಡದ ಹೊಳೆ ಹರಿಯುತ್ತದೆ ಎಂಬ ಮಾತು ಸಾರ್ವಕಾಲಿಕ ಸತ್ಯ ಎನ್ನುವ ದುಃಸ್ಥಿತಿಗೆ ನಮ್ಮ ದೇಶ ಬಂದು ನಿಂತಿದೆ. ಹಣ, ಹೆಂಡ ಹಂಚಿ ಜನರಿಗೆ ಆಮಿಷ ತೋರಿಸಿ ವೋಟು ಗಿಟ್ಟಿಸಿಕೊಳ್ಳುವವರ ನಡುವೆ ಪ್ರಾಮಾಣಿಕತೆ ಎಂದು ಹೋದರೆ ಸೋಲು ನಿಶ್ಚಿತ ಎನ್ನುವ ಪರಿಸ್ಥಿತಿ ಇದೆ.
ಇದಕ್ಕೆ ಅಪವಾದ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿಯ ದೋಣಿಹಕ್ಲು ಮತ್ತು ಹೊಸೂರು-ಗುಡ್ಡೇಕೇರಿ ಗ್ರಾಮ ಪಂಚಾಯತಿ ಅಭ್ಯರ್ಥಿಗಳು ಪಕ್ಷಭೇದ ಮರೆತು ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವ ಪ್ರತಿಜ್ಞೆ ತೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.
ಹಣ, ಹೆಂಡ ಅಥವಾ ಯಾವುದೇ ರೀತಿಯ ಆಮಿಷ ತೋರದೆ ಚುನಾವಣೆ ಎದುರಿಸುತ್ತೇವೆ. ಯಾವ ಕಾರಣಕ್ಕೂ ಅಡ್ಡದಾರಿ ತುಳಿಯುವುದಿಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನದಿಂದಷ್ಟೇ ಮತಯಾಚಿಸುತ್ತೇವೆ ಎಂದು ಎರಡೂ ಬೂತ್ಗಳ ಒಟ್ಟು 8 ಅಭ್ಯರ್ಥಿಗಳು ಹೊಸೂರು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಒಂದಾಗಿ ಹೋಗಿ ದೇವರ ಮುಂದೆ ನಿಂತು ಪ್ರಸಾದ ಸ್ವೀಕರಿಸಿ ವಾಗ್ದಾನ ನೀಡಿದ್ದಾರೆ.
ಎಲ್ಲಾ ಪಕ್ಷದ ಅಭ್ಯರ್ಥಿಗಳು ಭೇದಭಾವ ಮರೆತು ಪ್ರತಿಜ್ಞೆ ಮಾಡಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ. ಸೋತರೂ, ಗೆದ್ದರೂ ಮತದಾರರೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳದೇ ಮೊದಲಿನಂತೆಯೇ ಇರಿ ಎಂದು ಊರಿನವರು ಸಲಹೆ ನೀಡಿದ್ದಾರೆ.
ಈ ಹಿಂದೆಯೂ ಬೇರೆ ಬೇರೆ ಚುನಾವಣೆ ಸಂದರ್ಭದಲ್ಲಿ ಊರಿನ ಎಲ್ಲಾ ಪಕ್ಷದವರು ಒಂದಾಗಿ ಹಣ ಹಂಚದೇ ಊರಿನ ರಸ್ತೆ, ಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಶ್ರಮ ಹಾಕುವ ನಿರ್ಧಾರ ಮಾಡಿ ಮನಗೆದ್ದಿದ್ದರು.
ಸ್ಥಳೀಯ ಸಂಸ್ಥೆ ಚುನಾವಣೆ: ಕಲಬುರಗಿಯಲ್ಲಿ ಒಂದೇ ಕುಟುಂಬದ ನಾಲ್ವರ ಸ್ಪರ್ಧೆ
Published On - 5:05 pm, Mon, 21 December 20