ಶಿವಮೊಗ್ಗ: ಕೊರೊನಾ ಹೆಮ್ಮಾರಿ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದೆ. ಈ ಹೆಮ್ಮಾರಿಯನ್ನ ಹತೋಟಿಯಲ್ಲಿಡಲು ರಾಜ್ಯ ಸರ್ಕಾರ ಮತ್ತು ವೈದ್ಯಲೋಕ ದಿನದ ಇಪ್ಪತ್ನಾಲ್ಕು ಗಂಟೆ ಕಾಲ ಅವಿರತ ಪರಿಶ್ರಮ ಪಡುತ್ತಿವೆ. ವೈದ್ಯರ ಈ ಹೋರಾಟದಲ್ಲಿ ಈಗ ಆಯುರ್ವೇದ ವೈದ್ಯಲೋಕವೂ ಕೈಜೋಡಿಸಲು ಮುಂದಾಗಿದೆ.
ಇದುವರೆಗೆ ಕೇವಲ ಅಲೋಪತಿ ವೈದರು ಮಾತ್ರವೇ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಜಗತ್ತಿನಾದ್ಯಂತ ಇದುವರೆಗೆ ನಡೆದುಕೊಂಡು ಬಂದಿದೆ. ಆದ್ರೆ ಈಗ ಶಿವಮೊಗ್ಗದ ಸೋಂಕಿತರೊಬ್ಬರ ಮನವಿ ಮೇರೆಗೆ ರಾಜ್ಯ ಸರ್ಕಾರ ಆಯುರ್ವೇದ ಚಿಕಿತ್ಸೆಗೆ ಅನುಮತಿ ನೀಡಿದೆ.
ರಾಜ್ಯದಲ್ಲಿ ಮೊದಲ ಪ್ರಯತ್ನ
ಹೌದು, ಶಿವಮೊಗ್ಗ ಜಿಲ್ಲೆಯ ಕಲ್ಲು ಗಂಗೂರು ಗ್ರಾಮದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ಕೊರೊನಾ ಸೋಂಕಿತರಾಗಿರೋದು ಜೂನ್ 11ರಂದು ಪತ್ತೆಯಾಗಿತ್ತು. ಆದ್ರೆ ಸ್ವಾಮೀಜಿ ತಮಗೆ ಆಯುರ್ವೇದ ಪದ್ದತಿಯಲ್ಲಿಯೇ ಚಿಕಿತ್ಸೆ ಪಡೆಯಲು ಬಯಿಸಿದ್ರು. ಈ ಸಂಬಂಧ ಅವರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ರು.
ಈಗ ರಾಜ್ಯ ಸರ್ಕಾರ ಸ್ವಾಮೀಜಿಯ ಮನವಿಗೆ ಅನುಮತಿ ನೀಡಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರ ಅನುಮತಿ ನೀಡಿರುವ ವಿಷಯವನ್ನ ತಿಳಿಸಿದ್ದಾರೆ. ಹೀಗಾಗಿ ಈಗ ಸ್ವಾಮೀಜಿಗೆ ಕೋವಿಡ್ ಆಸ್ಪತ್ರೆಯಲ್ಲಿ ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.