ಕೊರೊನಾ ಮಧ್ಯೆ ಶಾಲೆ ಆರಂಭ: ದತ್ತು ಪಡೆದ ಶಾಲೆಗಳಲ್ಲಿ ಆದ ಬದಲಾವಣೆಗಳೇನು ಗೊತ್ತಾ?

3 ಗ್ರಾಮೀಣ ಶಾಲೆಗಳನ್ನು ದತ್ತು ಪಡೆದಿರುವ ಶಾಸಕ ಡಾ|ಚರಂತಿಮಠ, ಈಗಾಗಲೇ ಹಲವು ಬಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಶಿಕ್ಷಕರು, ಎಸ್‌ಡಿಎಂಸಿಯವರೊಂದಿಗೆ ಚರ್ಚಿಸಿದ್ದು, ಶಾಲಾ ಆವರಣ ಸ್ವಚ್ಛವಾಗಿಡಬೇಕು ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ಹೊಂದಿದ್ದಾರೆ.

ಕೊರೊನಾ ಮಧ್ಯೆ ಶಾಲೆ ಆರಂಭ: ದತ್ತು ಪಡೆದ ಶಾಲೆಗಳಲ್ಲಿ ಆದ ಬದಲಾವಣೆಗಳೇನು ಗೊತ್ತಾ?
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ
preethi shettigar

|

Jan 02, 2021 | 6:50 PM

ಬಾಗಲಕೋಟೆ: ಕೊರೊನಾ ಹಾವಳಿ ಮಧ್ಯೆಯೇ 2020 ಕರಾಳ ವರ್ಷ ಮುಗಿದು ಹೊಸ ವರ್ಷ ಕಾಲಿಟ್ಟಿದ್ದು, 2020 ಕೊರೊನಾದಿಂದ ಉದ್ಯೋಗ, ಕೃಷಿ ವ್ಯಾಪಾರ ವಹಿವಾಟು, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳು ನೆಲಕಚ್ಚಿದ್ದು ಜನರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಸದ್ಯ ಕೊರೊನಾ ರೂಪಾಂತರ ಹಾವಳಿ ಮಧ್ಯೆ ಹೊಸ ವರ್ಷದ ಆರಂಭಕ್ಕೆ ಶಾಲಾ-ಕಾಲೇಜುಗಳು ಆರಂಭವಾಗಿದ್ದು, 6-10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಆನ್​ಲೈನ್ ತರಗತಿಯಿಂದ ತರಗತಿ ಕಡೆ ಮುಖ ಮಾಡಿದ್ದಾರೆ.

ಇನ್ನು ಸರ್ಕಾರಿ ಶಾಲೆಗಳು ಈ ಸಂದರ್ಭದಲ್ಲೇ ಬಾರಿ ಮಹತ್ವ ಪಡೆದುಕೊಂಡಿದ್ದು, ಕೋವಿಡ್ ಹಾವಳಿ ಮಧ್ಯೆ ಅನೇಕ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇಂತಹವರ ಸಾಲಿಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಕೂಡ ಸೇರಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ 3 ಸರ್ಕಾರಿ ಶಾಲೆಗಳನ್ನು ಈಗಾಗಲೇ ದತ್ತು ಪಡೆದಿದ್ದಾರೆ.

ಶಾಸಕರು ದತ್ತು ಪಡೆದ ಶಾಲೆಗಳು: ಹೌದು ಅದರಂತೆ ಬಾಗಲಕೋಟೆ  ಶಾಸಕ ವೀರಣ್ಣ ಚರಂತಿಮಠ ತಾಲ್ಲೂಕಿನ ಮುಗಳೊಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಬೋಡನಾಯಕದಿನ್ನಿಯ ಸರ್ಕಾರಿ ಪ್ರೌಢ ಶಾಲೆ ಹಾಗೂ ಅಚನೂರ ಗ್ರಾಮದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಪ್ರದೇಶಾಭಿವೃದ್ಧಿ ನಿಧಿಯಿಂದ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಮುಗಳೊಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಒಂದೆಡೆ ಇದ್ದು, ಇದನ್ನು ಕಳೆದ ಒಂದೂವರೆ ವರ್ಷದ ಹಿಂದೆ ರಾಜ್ಯ ಸರ್ಕಾರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಘೋಷಣೆ ಮಾಡಿದೆ. ಒಂದೇ ಸಮುಚ್ಛಯದಡಿ ಎಲ್ಲಾ ಶಾಲೆಗಳಿದ್ದು, ಇಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಒಟ್ಟು 752ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಅಚನೂರ ಸರ್ಕಾರಿ ಪ್ರೌಢ ಶಾಲೆ

ಅದರಲ್ಲೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭಗೊಂಡ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪೂರ್ವ ಪ್ರಾಥಮಿಕ ಶಾಲೆಯೂ ನಡೆಯುತ್ತಿದೆ. ಮುಗಳೊಳ್ಳಿ ಸಹಿತ ಸುತ್ತಲಿನ ಸುಮಾರು ನಾಲ್ಕೈದು ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಈ ಶಾಲೆಗೆ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ಕಾಯಕಲ್ಪ ನಿಧಿಯಡಿ ಒಟ್ಟು 20.26 ಲಕ್ಷ ಅನುದಾನ ನೀಡಿದ್ದಾರೆ.

ದತ್ತು ಪಡೆದ ಶಾಲೆಗಳಿಗೆ ಭೇಟಿ ನೀಡಿ ಚರ್ಚಿಸಿರುವ ಶಾಸಕ! 3 ಗ್ರಾಮೀಣ ಶಾಲೆಗಳನ್ನು ದತ್ತು ಪಡೆದಿರುವ ಶಾಸಕ ಡಾ|ಚರಂತಿಮಠ, ಈಗಾಗಲೇ ಹಲವು ಬಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಶಿಕ್ಷಕರು, ಎಸ್‌ಡಿಎಂಸಿಯವರೊಂದಿಗೆ ಚರ್ಚಿಸಿದ್ದು, ಶಾಲಾ ಆವರಣ ಸ್ವಚ್ಛವಾಗಿಡಬೇಕು. ಶಿಕ್ಷಕರು ತಮ್ಮ ಮನೆಯನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತಾರೋ ಹಾಗೆ ಸರ್ಕಾರಿ ಶಾಲೆಯನ್ನೂ ಇಡಬೇಕು ಎಂಬುದು ಅವರ ಕಾಳಜಿಯಾಗಿದೆ.

ಮುಗಳೊಳ್ಳಿಯ ಕೆಪಿಎಸ್ ಶಾಲೆ: ಮುಗಳೊಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‌ಕೆಜಿಯಿಂದ 12 ತರಗತಿಗಳಿದ್ದು, ಕೊಠಡಿಗಳ ಕೊರತೆ ಇದೆ. ಈ ಶಾಲೆಯನ್ನು ದತ್ತು ಪಡೆದಿರುವ ಶಾಸಕ ಡಾ|ಚರಂತಿಮಠರು ಆ ಕೊರತೆ ನೀಗಿಸಲು 1 ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 20.26 ಲಕ್ಷ, 3 ಹಳೆಯ ಕೊಠಡಿಗಳ ದುರಸ್ಥಿಗೆ 5 ಲಕ್ಷ ಹಾಗೂ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿಭಾಗಕ್ಕೆ ಪ್ರತ್ಯೇಕ ತಲಾ ಒಂದು ಶೌಚಾಲಯ ನಿರ್ಮಾಣಕ್ಕೆ 4.50 ಲಕ್ಷ ಅನುದಾನ ನೀಡಿದ್ದಾರೆ. ಇದರಿಂದ ಶೌಚಾಲಯ ಸಮಸ್ಯೆ ನೀಗಲಿದ್ದು, ಇನ್ನು 3 ಕೊಠಡಿಗಳ ಅಗತ್ಯವಿದೆ. ಜತೆಗೆ ಈಡಿ ಶಾಲೆಯ ಕಂಪೌಂಡ್ ಅರ್ಧಕ್ಕೆ ನಿಂತಿದ್ದು, ಅದು ಪೂರ್ಣಗೊಳ್ಳಬೇಕಿದೆ. ಇದು ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರವೂ ಆಗಿದ್ದು, ಕೊಠಡಿಗಳ ಅಗತ್ಯತೆ ನೀಗಿಸುವತ್ತ ಕ್ರಮ ಕೈಗೊಳ್ಳಬೇಕಿದೆ.

ಮುಗಳೊಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ

ಶಾಲೆಯಲ್ಲಿ ಚಿಣ್ಣರ ಗಾರ್ಡನ್, ಆಟದ ಮೈದಾನ, ಶಾಲೆಗೆ ಸುಣ್ಣ-ಬಣ್ಣ ಹಚ್ಚಿ, ಮಾದರಿ ಶಾಲೆಯನ್ನಾಗಿ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದು, ದಾನಿಗಳ ನೆರವು ಪಡೆಯಲೂ ನಿರ್ಧರಿಸಲಾಗಿದೆ. ಇಲ್ಲಿನ ವೃತ್ತಿಪರ ಶಿಕ್ಷಣ ಹಾಗೂ ಹಿಂದಿ ವಿಷಯ ಶಿಕ್ಷಕರು ನಿವೃತ್ತಿಯಾಗಿದ್ದು, ಆ ಹುದ್ದೆಗಳಿಗೆ ಹೊಸ ಶಿಕ್ಷಕರ ನಿಯೋಜನೆ ಮಾಡಬೇಕಿದೆ. ನಮ್ಮ ಶಾಲೆಯನ್ನು ಶಾಸಕರು ದತ್ತು ಪಡೆದಿದ್ದು, ಶಾಲಾ ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಮೂಲಭೂತ ಸೌಲಭ್ಯಗಳಿವೆ. ಕೊಠಡಿ ಕೊರತೆ ಕುರಿತು ಶಾಸಕರ ಗಮನಕ್ಕೆ ತಂದಿದ್ದೇವೆ. ತಾಲೂಕಿನಲ್ಲಿಯೇ ಮಾದರಿ ಶಾಲೆ ಮಾಡುವ ಸಂಕಲ್ಪ ನಮ್ಮೆಲ್ಲ ಶಿಕ್ಷಕರದ್ದಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಎನ್.ಎಸ್. ಗಂಟಿ ಹೇಳಿದ್ದಾರೆ.

ಅಚನೂರ ಸರ್ಕಾರಿ ಪ್ರೌಢ ಶಾಲೆ: ಹನಮಪ್ಪ ದೇವಸ್ಥಾನದ ಮೂಲಕ ಹಲವೆಡೆ ಖ್ಯಾತಿ ಪಡೆದ ಅಚನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ದತ್ತು ಪಡೆದಿದ್ದು, ಇಲ್ಲಿಯೂ ಕೊಠಡಿಗಳ ಕೊರತೆ ಇದೆ. ಈ ಕೊರತೆ ನೀಗಿಸಲು ಶಾಸಕರು 21.52 ಲಕ್ಷ ಮೊತ್ತದಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿಸಲು ಮುಂದಾಗಿದ್ದಾರೆ. 6ರಿಂದ 10ನೇ ತರಗತಿಯ ಈ ಶಾಲೆಯಲ್ಲಿ ಕಳೆದ ವರ್ಷ 86 ವಿದ್ಯಾರ್ಥಿಗಳಿದ್ದು, ಈಗ ಅದು 100ಕ್ಕೆ ಏರಿಕೆಯಾಗಿದೆ. ಶಾಲೆಯ ಕಂಪೌಂಡ್ ಅರ್ಧಕ್ಕೆ ನಿಂತಿದ್ದು, ಅದನ್ನು ಗ್ರಾಮ ಪಂಚಾಯತಿಯವರು ಉದ್ಯೋಗ ಖಾತ್ರಿಯಡಿ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿದ್ದಾರೆ.

ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದು ಪೂರ್ಣಗೊಂಡರೆ ಶಾಲೆಯ ಅಗತ್ಯ ಕೊರತೆ ನೀಗಲಿದೆ. ಆದರೆ, ಶಾಲೆಯ ಸುತ್ತಲೂ ಕಂಪೌಂಡ್ ನಿರ್ಮಿಸಿ, ಇಲ್ಲಿನ ವಾತಾವರಣ ಸ್ವಚ್ಛಗೊಳಿಸಬೇಕಿದೆ. ಶಾಲೆಯ ಮುಂದೆಯೇ ಜನರು ಕಸ ಹಾಕುತ್ತಿದ್ದು ಇದನ್ನು ನಿಲ್ಲಿಸಬೇಕಿದೆ. ಗ್ರಾಮದ ಕೆರೆಯ ಮುಂದೆಯೇ ಶಾಲೆಯಿದ್ದು, ಸುಂದರ ಪರಿಸರ ನಿರ್ಮಿಸಲು ಸುವರ್ಣಾವಕಾಶ ಇಲ್ಲಿದ್ದು, ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಶಾಲಾ ಕೊಠಡಿಗಳ ಕೊರತೆ ಇದ್ದು, ಶಾಸಕರು 2 ಹೆಚ್ಚುವರಿ ಕೊಠಡಿ ನಿರ್ಮಿಸಲು ದತ್ತು ನೀಡಿದ್ದಾರೆ. ಶಾಲೆಯ ಪರವಾಗಿ ಶಾಸಕರನ್ನು ಅಭಿನಂದಿಸುತ್ತೇವೆ. ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ ಮಾಡಿದ್ದೇವೆ ಎಂದು ಮುಖ್ಯಾಧ್ಯಾಪಕಿ ಶ್ರೀಮತಿ ಜೆ.ಎಂ.ಸಂಕ ಹೇಳಿದ್ದಾರೆ.

ಬೋಡನಾಯಕದಿನ್ನಿ ಸರ್ಕಾರಿ ಪ್ರೌಢ ಶಾಲೆ: ಈ ಶಾಲೆಯಲ್ಲಿ 8ರಿಂದ 10ನೇ ತರಗತಿಯ ಒಟ್ಟು 211 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೂ ಕೊಠಡಿ ಸಮಸ್ಯೆ ಬಿಟ್ಟರೆ ಬೇರೆ ಕೊರತೆ ಇಲ್ಲ. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ವಂತ ಕೊಳವೆ ಬಾವಿಯಿದ್ದು, ಅದಕ್ಕೆ ನಲ್ಲಿ ವ್ಯವಸ್ಥೆ ಮಾಡಬೇಕಿದೆ. ಇದನ್ನು ಗ್ರಾಮ ಪಂಚಾಯತಿಗೆ ವಹಿಸಿದ್ದು, ಚುನಾವಣೆ ಬಳಿಕ ಆ ಕಾರ್ಯ ನೀಗಲಿದೆ. ಶಾಸಕರು ದತ್ತು ಪಡೆದ ಈ ಶಾಲೆಯಲ್ಲಿ 2 ಶಾಲಾ ಕೊಠಡಿ ನಿರ್ಮಾಣಕ್ಕೆ 13.76ಲಕ್ಷ ಹಾಗೂ ಬಾಲಕ-ಬಾಲಕಿಯರಿಗಾಗಿ ಎರಡು ಪ್ರತ್ಯೇಕ ಶೌಚಾಲಯಕ್ಕಾಗಿ 3 ಲಕ್ಷ ಅನುದಾನ ಕಲ್ಪಿಸಿದ್ದಾರೆ. ಶೌಚಾಲಯ ಕೊರತೆ ಬಹಳ ದಿನಗಳಿಂದ ಇತ್ತು, ಅದು ಶಾಲಾ ದತ್ತು ಪ್ರಕ್ರಿಯೆಯಿಂದ ಪೂರ್ಣಗೊಂಡಿದೆ. ಇನ್ನುಳಿದಂತೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಪ್ರೊಜಕ್ಟರ್, ಅಗತ್ಯ 10 ಜನ ಶಿಕ್ಷಕ ವರ್ಗ ಎಲ್ಲವೂ ಇದೆ.

ಬೋಡನಾಯಕದಿನ್ನಿ ಸರ್ಕಾರಿ ಪ್ರೌಢ ಶಾಲೆ

ಆದರೆ, ಶಾಲಾ ಪರಿಸರ ಸ್ವಚ್ಛ ಹಾಗೂ ಸುಂದರಗೊಳಿಸುವ ಕಾರ್ಯ ನಡೆಯಬೇಕಿದೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಚರಂತಿಮಠ, ಕ್ಷೇತ್ರದ ಗ್ರಾಮೀಣ ಭಾಗದ ಎಲ್ಲಾ ಸರ್ಕಾರಿ ಶಾಲೆಗಳು, ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬುದು ನನ್ನ ಆಸೆ. ಹೀಗಾಗಿ ನಮ್ಮ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿಶೇಷ ಆಸಕ್ತಿಯಿಂದ ಶಾಲಾ ದತ್ತು ಪ್ರಕ್ರಿಯೆಯಲ್ಲಿ ಮೊದಲ ಹಂತದಲ್ಲಿ 3ಶಾಲೆ ದತ್ತು ಪಡೆದಿದು, ಅಲ್ಲಿನ ತುರ್ತು ಅಗತ್ಯಗಳ ಮಾಹಿತಿ ಪಡೆದು ಆ ಕೊರತೆ ನೀಗಿಸಲು ಅನುದಾನ ಒದಗಿಸಲಾಗಿದೆ. ದತ್ತು ಪಡೆದ 3 ಶಾಲೆಗಳಲ್ಲಿ ಡಿಎಂಎಫ್ ಅನುದಾನಡಿ ತಲಾ 10 ಲಕ್ಷ ಮೊತ್ತದಲ್ಲಿ ಪ್ರಯೋಗಾಲಯ ನಿರ್ಮಿಸಲಾಗುವುದು. ಮುಂದೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಒಟ್ಟಾರೆಯಾಗಿ ಕೋವಿಡ್-19 ಮಧ್ಯೆಯೇ ಶಾಲೆಗಳು ಆರಂಭವಾಗಿದ್ದು, ದತ್ತು ಪಡೆದ ಶಾಲೆಗಳು ಎಷ್ಟರಮಟ್ಟಿಗೆ ಬದಲಾವಣೆ ಕಾಣುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ನಮ್ಮದೇನೂ ವೈಯಕ್ತಿಕ ಪ್ರತಿಷ್ಠೆ ಅಲ್ಲ.. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡ್ತಿದ್ದೇವೆ -ಸುರೇಶ್​ ಕುಮಾರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada