ಬೆಂಗಳೂರು: ಖುದ್ದು ಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟರ ಕೂಪವಾಗಿದೆ ಎಂದು ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತ ಎಸಿಬಿ ಅಧಿಕಾರಿಗಳ ತಂಡವು ಬೆಂಗಳೂರು ಜಿಲ್ಲಾಧಿಕಾರಿ ವಿರುದ್ಧದ ತನಿಖೆಯನ್ನು ಚುರುಕುಗೊಳಿಸಿದೆ.
ಬೆಂಗಳೂರು ಜಿಲ್ಲಾಧಿಕಾರಿಗೆ ಫುಲ್ ಎಸಿಬಿ ಗ್ರಿಲ್: ಬೆಂಗಳೂರಿನ ಎಸಿಬಿ ಕಚೇರಿಯಲ್ಲಿಇಬ್ಬರು ಡಿವೈಎಸ್ಪಿ ಗಳ ತಂಡವು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ವಿಚಾರಣೆ ನಡೆಸುತ್ತಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಇನ್ನೂ ಮುಂದುವರಿದಿದೆ. ಇಡೀ ಪ್ರಕರಣ ಸಂಬಂಧ ವಿಸ್ತೃತ ತನಿಖೆ ನಡೆಸಿ ಜುಲೈ 4 ರಂದು ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.
ಡಿವೈಎಸ್ ಪಿ ಬಸವರಾಜ್ ಮಗದುಮ್ ಅವರು ಭ್ರಷ್ಟಾಚಾರ ಪ್ರಕರಣದ ಸಂಬಂಧ ಡಿಸಿ ಮಂಜುನಾಥ್ ರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಡಿ ಸಿ ಮಂಜುನಾಥ್ ವಿಚಾರಣೆ ನಡೆದಿದೆ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಅವರು ದಾಳಿಗೆ ಸಂಬಂಧಿಸಿದಂತೆ ಎಸ್ ಪಿ ಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಎಸಿಬಿ ಎಸ್ ಪಿ ಗಳಾದ ಉಮಾ ಪ್ರಶಾಂತ್, ಹರೀಶ್ ಪಾಂಡೆ, ಯತೀಶ್ ಚಂದ್ರ ಎಡಿಜಿಪಿಗೆ ಮಾಹಿತಿ ಒದಗಿಸುತ್ತಿದ್ದಾರೆ. ದಾಳಿ ವೇಳೆ ಹಾಗೂ ಆ ಬಳಿಕ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಜಮೀನು ಸ್ವಾಮ್ಯದ ವಿಷಯದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಲಂಚ ಸ್ವೀಕರಿಸುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಉಪ ತಹಶೀಲ್ದಾರ್ ಮಹೇಶ್ ಮತ್ತು ಸಹಾಯಕ ಸಿಬ್ಬಂದಿಯನ್ನು ಬಂಧಿಸಿದ್ದರು.
ಏನಿದು ಪ್ರಕರಣ? ಅಜಂ ಪಾಷಾ ಎಂಬುವವರಿಂದ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಮಂಜುನಾಥ್ ವಿರುದ್ಧ ಕೇಳಿ ಬಂದಿತ್ತು. ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆಯಾಗಿತ್ತು. ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಡಿಸಿ ಕೋರ್ಟಿಗೆ ಬಂದಿತ್ತು. ಪರವಾಗಿ ಆದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾಗಿ ದೂರುದಾರ ಆರೋಪಿಸಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ 5 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ತನ್ನ ಅಧೀನ ಅಧಿಕಾರಿಯ ಮೂಲಕ ಹಣ ಪಡೆದಿದ್ದ ಆರೋಪಿಸಲಾಗಿತ್ತು.
ಮೇ 21ರಂದು ಡಿ.ಸಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ5 ಲಕ್ಷ ಹಣದ ಸಮೇತ ಉಪ ತಹಶಿಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್ ಅವರನ್ನು ಬಂಧಿಸಿತ್ತು. ಬಳಿಕ ಎಫ್‌ಐಆರ್ ದಾಖಲಿಸಿ ಎಸಿಬಿ ತನಿಖೆ ಕೈಗೊಂಡಿತ್ತು. ತನ್ನ ವಿರುದ್ಧದ ಎಫ್‌ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಅರ್ಜಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ನಿಗಾದಲ್ಲಿ ಪಿಎಸ್ಐ ನೇಮಕಾತಿ ಹಗರಣ ತನಿಖೆ ಹೊಣೆಯನ್ನು ಸಿಐಡಿ ಡಿಜಿಪಿಗೆ ವಹಿಸಿದ ರಾಜ್ಯ ಹೈಕೋರ್ಟ್
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಹಲವರ ಮೇಲೆ ಆರೋಪಗಳಿವೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳಿದ್ದಾರೆ. ಹೀಗಾಗಿ ಸಮರ್ಪಕ ತನಿಖೆ ನಡೆಯುವ ಅವಶ್ಯಕತೆಯಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಹಾಗಾಗಿ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಮರ್ಪಕ ತನಿಖೆ ನಡೆಸಿ ಎಂದು ಸಿಐಡಿ ಡಿಜಿಪಿ ಪಿ.ಎಸ್. ಸಂಧು ಅವರಿಗೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.
ಪಿಎಸ್ಐ ನೇಮಕದಲ್ಲೇ ಭ್ರಷ್ಟಾಚಾರ ಗಂಭೀರ ವಿಚಾರವಾಗಿದೆ. ಸತ್ಯಸಂಗತಿ ತನಿಖೆಯಿಂದ ಹೊರಬೀಳಬೇಕು. ಕೋರ್ಟ್ ಪ್ರಕರಣದ ತನಿಖೆಯ ನಿಗಾ ವಹಿಸಲಿದೆ. ಪ್ರಕರಣದಲ್ಲಿ ಸಚಿವರಾಗಿರಲೀ, ಅಧಿಕಾರಿಗಳಾಗಿರಲಿ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿ ಪಿ.ಎಸ್. ಸಂಧುರಿಗೆ ಹೈಕೋರ್ಟ್ ತಾಕೀತು ಮಾಡಿದೆ. ಜುಲೈ 7ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದೂ ಹೈಕೋರ್ಟ್ ಖಡಕ್ ಆಗಿ ಸೂಚಿಸಿದೆ.
ಇದನ್ನೂ ಓದಿ:
Published On - 5:31 pm, Thu, 30 June 22