
ಬೆಂಗಳೂರು: ಸೋಂಕಿತರನ್ನ ಆಸ್ಪತ್ರೆಗೆ ಸ್ಥಳಾಂತರಿಸುವುದಕ್ಕೆ ತಡವಾಗಲು ಖಾಸಗಿ ಲ್ಯಾಬ್ ಮತ್ತು ಖಾಸಗಿ ಆಸ್ಪತ್ರೆಗಳೇ ಕಾರಣವೆಂದು ಬಿಬಿಎಂಪಿ ಆರೋಪಿಸಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಕೊವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಕೊವಿಡ್ ಟೆಸ್ಟ್ ವರದಿ ಬಂದ ತಕ್ಷಣ ICMR ವೆಬ್‌ಸೈಟ್‌ಗೆ ಅಪ್ಡೇಟ್ ಮಾಡಬೇಕು. ಆದರೆ ಅದಕ್ಕೂ ಮುನ್ನ ಇವರು ರೋಗಿಗೆ ಟೆಸ್ಟ್ ವರದಿ ತಿಳಿಸುತ್ತಾರೆ ಎಂದು ಬಿಬಿಎಂಪಿ ಹೇಳಿದೆ.
ಆದರೆ, ವರದಿ ಬಂದ 2-3 ದಿನಕ್ಕೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡ್ತಾರೆ. ಹೀಗಾಗಿ ಸೋಂಕಿತರನ್ನು ಶಿಫ್ಟ್ ಮಾಡುವುದಕ್ಕೆ ತಡವಾಗ್ತಿದೆ. ಐಸಿಎಂಆರ್ ವೆಬ್‌ಸೈಟ್‌ಗೆ ಅಪ್‌ಡೇಟ್ ಮಾಡಿದರೆ ಬಿಬಿಎಂಪಿಗೆ ಕೊರೊನಾ ಸೋಂಕಿತ ವ್ಯಕ್ತಿ ಮಾಹಿತಿ ಸಿಗುತ್ತದೆ. ಆಗ ನಾವು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ. ಆದರೆ ಮಾಹಿತಿಯನ್ನು ತಡವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಶಿಫ್ಟ್ ಮಾಡುವುದು ತಡವಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆ ಮತ್ತು ಲ್ಯಾಬ್‌ಗಳ ವಿರುದ್ಧ ಬಿಬಿಎಂಪಿ ಆರೋಪ ಮಾಡಿದೆ.
ಜೊತೆಗೆ, ಸೋಂಕಿನ ಬಗ್ಗೆ ರೋಗಿಗೆ ಖಚಿತ ಮಾಹಿತಿ ಇದ್ದಲ್ಲಿ 108 ಗೆ ಕರೆ ಮಾಡಲು ಬಿಬಿಎಂಪಿ ಸೂಚಿಸಿದೆ.