ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ವಿದೇಶ ಹಾಗೂ ಹೊರ ರಾಜ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬೆಂಗಳೂರು ನಗರದ ಫೈವ್ ಸ್ಟಾರ್, ಥ್ರೀ ಸ್ಟಾರ್ ಹೋಟೆಲ್, ಬಜೆಟ್ ಹೋಟೆಲ್, ಕಲ್ಯಾಣ ಮಂಟಪಗಳು, ಹಾಸ್ಟೆಲ್‌ಗಳು, ಸಮುದಾಯ ಭವನಗಳು, ಕಾಲೇಜುಗಳನ್ನು ವಶಕ್ಕೆ ಪಡೆಯಲು ಬಿಬಿಎಂಪಿ ನಿರ್ಧಾರ ಮಾಡಿದೆ.
ಕ್ವಾರಂಟೈನ್‌ಗಾಗಿ ವಶಕ್ಕೆ ಪಡೆದ ಹೋಟೆಲ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದರ ನಿಗದಿ ಮಾಡಿದೆ. ಫೈವ್ ಸ್ಟಾರ್ ಹೋಟೆಲ್‌ನ ಒಂದು ಕೊಠಡಿಗೆ 3 ಸಾವಿರ ರೂ. ಹಾಗೂ ಒಂದೇ ಕೊಠಡಿಯಲ್ಲಿ ಇಬ್ಬರಿದ್ದರೆ 3,700 ರೂಪಾಯಿ ನಿಗದಿ ಮಾಡಿದೆ. ಬೆಳಗಿನ ಉಪಾಹಾರವೂ ಸೇರಿ BBMP ದರ ನಿಗದಿ ಮಾಡಿದೆ. ಮಧ್ಯಾಹ್ನ ಊಟಕ್ಕೆ ₹550, ರಾತ್ರಿಯ ಊಟಕ್ಕೆ 550 ರೂ. ಆಗಲಿದೆ.
3 ಸ್ಟಾರ್ ಹೋಟೆಲ್‌ಗೆ ಉಪಾಹಾರ ಸೇರಿ 1,500 ರೂ. ಹಾಗೂ ಒಂದೇ ಕೊಠಡಿಯಲ್ಲಿ ಇಬ್ಬರಿದ್ದರೆ 1,750 ರೂಪಾಯಿ ನಿಗದಿಯಾಗಿದೆ. ಮಧ್ಯಾಹ್ನದ ಊಟಕ್ಕೆ 175 ರೂ, ರಾತ್ರಿಯ ಊಟಕ್ಕೆ 175 ರೂ. ಆಗಲಿದೆ. ಇತರ ಬಜೆಟ್ ಹೋಟೆಲ್‌ಗಳಿಗೆ ಬೇರೆ ಬೇರೆ ದರ ನಿಗದಿ ಪಡಿಸಿದೆ. ಮೂರು ಹೊತ್ತಿನ ಊಟವೂ ಸೇರಿಸಿ ಒಂದು ದಿನಕ್ಕೆ 700ರೂ.ನಿಂದ 900 ರೂಪಾಯಿ ನಿಗದಿ ಪಡಿಸಿದೆ.
ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸೋಂಕಿತರ ಜೊತೆ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದ್ದವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ಗೆ ಬಿಬಿಎಂಪಿ ಸ್ಥಳ ನಿಗದಿ ಮಾಡಿದೆ.
Published On - 11:44 am, Mon, 11 May 20